

ವಿಜಯವಾಣಿ ಸುದ್ದಿಜಾಲ ಉಡುಪಿ
ಯಕ್ಷಗಾನದ ಖ್ಯಾತ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಇತ್ತೀಚೆಗೆ ಬರೆದಿದ್ದ ಯಕ್ಷ ಚಂದ್ರ ಪುಸ್ತಕ ತೀವ್ರ ವಿವಾದಕ್ಕೊಳಗಾಗಿದ್ದು, ವಿಷಯ ತಿಳಿಯುತ್ತಲೇ ಅವರು ಎಲ್ಲ ಯಕ್ಷಗಾನ ಕಲಾವಿದರು ಮತ್ತು ಕಲಾಭಿಮಾನಿಗಳಲ್ಲಿ ನಿವೇದನೆಯ ಸ್ಪಷ್ಟನೆ ನೀಡಿದ್ದಾರೆ. ಎಲ್ಲರ ಕ್ಷಮೆಯಾಚಿಸಿ ಪುಸ್ತಕ ಹಿಂಪಡೆದಿರುವುದಾಗಿ ಘೋಷಿಸಿದ್ದಾರೆ.
ಸಂದರ್ಭಕ್ಕನುಸಾರವಾಗಿ ನಡೆದ ಘಟನೆಗಳನ್ನು ಪುಸ್ತಕದಲ್ಲಿ ಉಲ್ಲೇಖಿಸಿದ್ದೆ. ರಾಘವೇಂದ್ರ ಭಟ್ ನಿರೂಪಣೆ, ಕೊಂಡದಕುಳಿ ಬಳಗ ಬೆಂಗಳೂರು ಪ್ರಕಾಶನದಲ್ಲಿ ನನ್ನ ಯಕ್ಷಜೀವನ ಅನುಭವ ಪ್ರಸ್ತುತಿಯ ಪುಸ್ತಕವದು. ಯಾರನ್ನೂ ನೋಯಿಸುವ ಉದ್ದೇಶ ನನಗಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನನ್ನ ಪುಸ್ತಕ ಬಿಡುಗಡೆಯಾದ ಬಳಿಕ ಯಕ್ಷಗಾನ ವಲಯದಲ್ಲಿ ತುಂಬ ಅಸಹನೆ, ಗೊಂದಲ ಸೃಷ್ಟಿಯಾದದ್ದು ಹಾಗೂ ನನ್ನ ಸಹಕಲಾವಿದರೂ ನೊಂದ ವಿಷಯ ತಿಳಿಯಿತು. ಆದರೆ, ಸಂದರ್ಶನ ರೂಪದಲ್ಲಿ ನೀಡಿದ್ದ ವಿಚಾರಗಳು ಅದಕ್ಕಿಂತ ವಿಪರೀತಾರ್ಥದಲ್ಲಿ ಪ್ರಚಾರ ಆಗಿದ್ದಕ್ಕೆ ವಿಷಾದಿಸುತ್ತೇನೆ. ಈ ಬೆಳವಣಿಗೆ ನನಗೂ ನೋವು ತಂದಿದೆ. ಹಾಗಾಗಿ ಸ್ವಯಂಸ್ಫೂರ್ತಿಯಿಂದ ಸ್ಪಷ್ಟೀಕರಣ ನೀಡಿದ್ದಾಗಿ ತಿಳಿಸಿದ್ದಾರೆ.
ವೃತ್ತಿ ಜೀವನದಲ್ಲಿ ಕೆಲವೊಮ್ಮೆ ನನ್ನ ಕಠಿಣ ನಿರ್ಧಾರ ಕೆಲವರಿಗೆ ಬೇಸರ ಉಂಟಾಗಿರಬಹುದು. ಮೇಳದ ಸಂಚಾಲಕರು, ಸಹಕಲಾವಿದರು, ಸಂಘಟಕರು ಹಾಗೂ ಪ್ರೇಕ್ಷಕರಿಗೆ ಪ್ರಿಯ ಕಲಾವಿದನಾಗಿಯೇ ಇರಲು ಬಯಸುತ್ತೇನೆ. ಕಾಲಿನ ಗಂಟುನೋವಿನಿಂದ ಸರಿಯಾಗಿ ಪಾತ್ರ ನಿರ್ವಹಿಸಲು ಆಗುತ್ತಿಲ್ಲವೆಂದು ಮೇಳ ಬಿಟ್ಟಿದ್ದೇನೆ. ನಿತ್ಯ ಒಂದಕ್ಕಿಂತ ಹೆಚ್ಚಿನ ಕಾರ್ಯಕ್ರಮ ಒಪ್ಪಿಕೊಳ್ಳದೆ ಕಲಾಸೇವೆಯಲ್ಲಿ ಇದ್ದೇನೆ. ಆದರೀಗ ನಾನೇ ಯಕ್ಷಗಾನ ಕ್ಷೇತ್ರದಲ್ಲಿ ವಿವಾದದ ಕೇಂದ್ರಬಿಂದು ಆದೆನಲ್ಲ ಎಂದು ವ್ಯಥಿತನಾಗಿದ್ದೇನೆ ಎಂದು ಕೊಂಡದಕುಳಿ ವಿಷಾದಿಸಿದ್ದಾರೆ.
ಯಕ್ಷಗಾನ ದೊಡ್ಡದು, ನಾನು ಸಣ್ಣವ. ನಾನು ಹುಟ್ಟುವ ಮೊದಲೂ ಯಕ್ಷಗಾನವಿತ್ತು. ನಾನು ಅಳಿದ ಮೇಲೂ ಯಕ್ಷಗಾನವಿರುತ್ತದೆ. ಈ ವಿಷಯ ಇಲ್ಲಿಗೇ ಮುಕ್ತಾಯಗೊಳಿಸಿ ನಾವೆಲ್ಲ ಕಲಾವಿದರು ಸೌಹಾರ್ದದಿಂದ ಯಕ್ಷಗಾನಕ್ಕಾಗಿ ಶ್ರಮಿಸೋಣ. ಕಲಾ ಬಂಧುಗಳಾಗಿ ಬಾಳೋಣ. ಎಲ್ಲಿಯೂ ಯಕ್ಷ ಚಂದ್ರ ಪುಸ್ತಕ ವಿತರಿಸದಂತೆ, ಪುನಹ ಮುದ್ರಿಸದಂತೆ ಪ್ರಕಾಶಕರಲ್ಲಿಯೂ ವಿನಂತಿಸಿದ್ದೇನೆ. | ಕೊಂಡದಕುಳಿ ರಾಮಚಂದ್ರ ಹೆಗಡೆ. ಹಿರಿಯ ಕಲಾವಿದ.