

ಕೆಂಭಾವಿ: ಗ್ರಾಮೀಣ ಪ್ರದೇಶದ ಹಲವು ರಸ್ತೆಗಳು ಸುಧಾರಣೆ ಕಂಡರೂ ಹಳ್ಳಿಗರಿಗೆ ಸರ್ಕಾರಿ ಬಸ್ ನೋಡುವ ಭಾಗ್ಯ ದೊರೆಯುತ್ತಿಲ್ಲ ಎಂಬುದಕ್ಕೆ ಕರಡಕಲ್ ಗ್ರಾಮ ಉದಾಹರಣೆಯಾಗಿದೆ.
ರಸ್ತೆ ಡಾಂಬರೀಕರಣವಾಗಿ ವರ್ಷಗಳಾದರೂ ರಾಜ್ಯ ಹೆದ್ದಾರಿ ಅಂಚಿನಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿರುವ ಕರಡಕಲ್‌ಗೆ ಬಸ್ ಓಡಿಸದೆ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ನಿರ್ಲಕ್ಷ್ಯ ವಹಿಸಿದ್ದರಿಂದ ಗ್ರಾಮಸ್ಥರು ನಿತ್ಯ ಖಾಸಗಿ ವಾಹನ ಅಥವಾ ಕಾಲ್ನಡಿಗೆಯಲ್ಲೇ ಮುಖ್ಯ ರಸ್ತೆ ತಲುಪುವ ಅನಿವಾರ್ಯತೆ ಇದೆ.
ಸುರಪುರ-ಹುನಗುಂದ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಕೆಂಭಾವಿ ಪಟ್ಟಣದಿಂದ ಕೇವಲ ಏಳು ಕಿಮೀ ದೂರದ ಕರಡಕಲ್‌ಗೆ ಬಸ್ ಸೌಲಭ್ಯ ಇಲ್ಲದೆ ಜನತೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು, ವೃದ್ಧರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿಯವರೆಗೆ ಸಾರಿಗೆ ನಿಗಮ ರಸ್ತೆ ಸರಿ ಇಲ್ಲ ಎಂಬ ನೆಪವೊಡ್ಡಿ ಹಳ್ಳಿಗಳಿಗೆ ಬಸ್ ಓಡಿಸಿರಲಿಲ್ಲ. ಇದೀಗ ವಲಯದ ಬಹುತೇಕ ಗ್ರಾಮಾಂತರ ರಸ್ತೆಗಳು ಶಾಸಕರ, ಕೆಕೆಆರ್‌ಡಿಬಿ ಸೇರಿ ವಿವಿಧ ರೀತಿಯ ಹಣಕಾಸು ನೆರವಿನಿಂದ ಡಾಂಬರೀಕರಣ ಕಂಡರೂ ನಿಗಮದ ಬಸ್‌ಗಳು ಬಾರದಿರುವುದಕ್ಕೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
ಕೂಡಲಗಿಗೆ ಸಂಪರ್ಕ: ಹುಣಸಗಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸ್ವಯಂಭೂ ಸಿದ್ಧಿ ವಿನಾಯಕನ ಸನ್ನಿಧಾನವೆಂದೇ ಪ್ರಸಿದ್ಧಿ ಪಡೆದ ಕೂಡಲಗಿ ಗ್ರಾಮದ ಬಾಬಾ ಮಹಾರಾಜರ ಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕರಡಕಲ್ ಮೂಲಕ ಹಾದು ಹೋಗಿದ್ದಲ್ಲದೆ ರಾಜ್ಯ ಹೆದ್ದಾರಿಯಿಂದ ಕೇವಲ ಏಳು ಕಿಮೀ ಅಂತರದಲ್ಲಿದೆ. ಈ ಬಗ್ಗೆ ಯೋಚಿಸದ ನಿಗಮದ ಅಧಿಕಾರಿಗಳು ಬಸ್‌ಗಳನ್ನು ಓಡಿಸದ್ದರಿಂದ ಪ್ರಯಾಣಿಕರು ಮತ್ತು ಭಕ್ತರು ತೊಂದರೆ ಅನುಭವಿಸಬೇಕಾಗಿದೆ.
ಸುಧಾರಣೆ ಕಂಡ ಗ್ರಾಮೀಣ ರಸ್ತೆಗಳಲ್ಲಿ ಬಸ್‌ಗಳನ್ನು ಓಡಿಸಿ ಜನತೆಗೆ ಅನುಕೂಲ ಕಲ್ಪಿಸುವಂತೆ ಶಾಸಕರೇ ಖುದ್ದಾಗಿ ಹಲವು ಬಾರಿ ದೂರವಾಣಿ ಮೂಲಕ ಶಹಾಪುರ ಹಾಗೂ ಸುರಪುರ ಡಿಪೋ ವ್ಯವಸ್ಥಾಪಕರಿಗೆ ಹೇಳಿದ್ದರೂ ಕ್ಯಾರೆ ಎನ್ನದಿರುವುದು ಹಳ್ಳಿಗರನ್ನು ಕೆರಳುವಂತೆ ಮಾಡಿದೆ. ಬೀದಿಗಿಳಿದು ಹೋರಾಟಕ್ಕೆ ಇಳಿಯುವ ಮುನ್ನವೇ ನಿಗಮದ ಅಽಕಾರಿಗಳು ಸುಧಾರಿತ ಮಾರ್ಗಗಳಲ್ಲಿ ಸಾರಿಗೆ ಸೌಕರ್ಯ ಕಲ್ಪಿಸಬೇಕು ಎಂಬುದು ಒಕ್ಕೊರಲ ಒತ್ತಾಯವಾಗಿದೆ.