

ಕಕ್ಕೇರಾ: ಸಮೀಪದ ಬಂಡೊಳ್ಳಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ 10.30ಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಶಾಖಾ ಮಠ ಮತ್ತು ಶಿಕ್ಷಣ ಸಂಸ್ಥೆಯ ಶಂಕುಸ್ಥಾಪನೆಯ ಭೂಮಿ ಪೂಜೆಯನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ನೆರವೇರಿಸಲಿದ್ದಾರೆ ಎಂದು ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲೂಕು ಅಧ್ಯಕ್ಷ ಭೀಮನಗೌಡ ಹೆಮನೂರ ತಿಳಿಸಿದ್ದಾರೆ.
ಈಗಾಗಲೇ ಕಳೆದೊಂದು ವಾರದಿಂದ ಸುರಪುರ ಮತ್ತು ಯಾದಗಿರಿ ಮಹರ್ಷಿ ವಾಲ್ಮೀಕಿ ಸಮಾಜದ ಅಧ್ಯಕ್ಷರು ಹಾಗೂ ಮುಖಂಡರು ಕರ್ಯಕ್ರಮದ ಸಿದ್ಧತೆಗಾಗಿ ಬಂಡೊಳ್ಳಿ ಗ್ರಾಮದಲ್ಲಿ ಬೀಡುಬಿಟ್ಟು ಅದ್ದೂರಿ ಭೂಮಿ ಪೂಜೆಗೆ ಎಲ್ಲ ಸಿದ್ಧತೆ ನಡೆಸಿದ್ದು, ಭೂಮಿ ಪೂಜೆ, ವೇದಿಕೆ ಜರುಗುವ ಮತ್ತು ಸಚಿವರು ಬಂದಿಳಿಯುವ ಹೆಲಿಪ್ಯಾಡ್ ಸ್ಥಳಕ್ಕೆ ಶಾಸಕ ರಾಜಾ ವೇಣುಗೋಪಾಲ ನಾಯಕರು ಗುರುವಾರ ಭೇಟಿ ನೀಡಿ ಪರಿಶೀಲಿಸಿ ಆಯೋಜಕರಿಂದ ಅಗತ್ಯ ಮಾಹಿತಿ ಪಡೆದರು.
ಉತ್ತರ ಕರ್ನಾಟಕದ ವಾಲ್ಮೀಕಿ ಸಮಾಜದ ಬಡ ಜನರ ಶೈಕ್ಷಣಿಕ, ಧಾರ್ಮಿಕ ಅಭಿವೃದ್ಧಿಗಾಗಿ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್ನಿಂದ ಸುಮಾರು 18 ಎಕರೆ ವಿಶಾಲವಾದ ಜಮೀನು ಖರೀದಿಸಲಾಗಿದೆ. ಸರ್ಕಾರದಿಂದ 10 ಕೋಟಿ ರೂ. ಮಂಜೂರಾತಿಯಲ್ಲಿ ಈಗಾಗಲೇ 5ಕೋಟಿ ಮಂಜೂರಾಗಿದೆ.
ಈ ಐತಿಹಾಸಿಕ ಕರ್ಯಕ್ರಮ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಮಹಾಸಂಸ್ಥಾನದ ಪೂಜ್ಯ ಶ್ರೀ ಡಾ.ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ರಾಜಾ ವೇಣುಗೋಪಾಲ ನಾಯಕ ಅಧ್ಯಕ್ಷತೆ ವಹಿಸಲಿದ್ದು, ವಿವಿಧ ಮಠಗಳ ಮಠಾಧಿಶರು, ಸಚಿವರು, ಸಂಸದ ಜಿ.ಕುಮಾರನಾಯಕ, ಮಾಜಿ ಸಚಿವ ನರಸಿಂಹನಾಯಕ(ರಾಜುಗೌಡ) ವಾಲ್ಮೀಕಿ ಸಮಾಜದ ಹಾಲಿ ಮತ್ತು ಮಾಜಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಸೇರಿ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ.