

ಯಾದಗಿರಿ: ಶ್ರೀಕ್ಷೇತ್ರ ಅಬ್ಬೆತುಮಕೂರಿನ ವಿಶ್ವಾರಾಧ್ಯರು ನಾಡು ಬೆಳಗಿದ ಕಾರುಣಿಕ ಪುರುಷರಾಗಿದ್ದಾರೆ ಎಂದು ಚಿತ್ರನಟ ಪ್ರೇಮ್ ಹೇಳಿದರು.
ಇಲ್ಲಿಗೆ ಸಮೀಪದ ಶ್ರೀಕ್ಷೇತ್ರ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಸಿದ್ದ ಸಂಸ್ಥಾನ ಮಠದಲ್ಲಿ ದಸರಾ ನವರಾತ್ರಿ ಉತ್ಸವ ನಿಮಿತ್ತ ಬುಧವಾರ ನಡೆದ 4ನೇ ದಿನ ಜಗನ್ಮಾತೆ ಭಳಾಬಿಂಕಾ ದೇವಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವಾರಾಧ್ಯರ ಗದ್ದುಗೆ ದರ್ಶನ ಪಡೆದವರು ಭಾಗ್ಯಶಾಲಿಗಳು ಎಂದು ಅವರು ಹೇಳಿದರು.
ತಾವು ಈ ಹಿಂದೆಯೂ ಈ ಮಠಕ್ಕೆ ಬಂದು ವಿಶ್ವಾರಾಧ್ಯರ ಮತ್ತು ಪೂಜ್ಯರ ದರ್ಶನ ಪಡೆದುಕೊಂಡು ಹೋಗಿದ್ದೇನೆ. ಇಲ್ಲಿ ಅಗಾಧ ಶಕ್ತಿ ಇದೆ. ದೇವಿಯನ್ನೆ ಒಲಿಸಿಕೊಂಡ ವಿಶ್ವಾರಾಧ್ಯರು ಬೇಡಿ ಬಂದವರಿಗೆ ಎಲ್ಲವನ್ನು ಕರುಣಿಸುವ ಸಿದ್ಧಿಪುರುಷರಾಗಿದ್ದು, ದಸರಾ ಹಬ್ಬದ ವೇಳೆ ಭೇಟಿ ನೀಡಿ ದರ್ಶನ ಪಡೆದಿದ್ದು ಸಂಸತ ತಂದಿದೆ ಎಂದರು. ಬೆಳಗ್ಗೆ ವಿಶ್ವಾರಾಧ್ಯರ ಗದ್ದುಗೆಗೆ ಪೂಜೆ, ಅಭಿಷೇಕ ನಡೆಯಿತು. ಪೀಠಾಧಿಪತಿ ಡಾ.ಗಂಗಾಧರ ಶಿವಾಚಾರ್ಯ ಮಹಾಸ್ವಾಮೀಜಿ, ಕಿರಿಯ ಸ್ವಾಮಿಗಳಾದ ಶಿವಶೇಖರ ವಿಶ್ವಾರಾಧ್ಯ ಸ್ವಾಮಿಗಳ ಸಮ್ಮುಖದಲ್ಲಿ ಪ್ರವಚನಕಾರರಾದ ಮಲ್ಲಿಕಾರ್ಜುನ ಶಾಸಿಗಳು, ದೇವಿಯ ಅನಂತ ಲೀಲೆಗಳನ್ನು ಅನೇಕ ದೃಷ್ಟಾಂತಗಳ ಸಹಿತ ವಿವರಿಸಿದರು. ನಂತರ ಪೀಠಾಧಿಪತಿ ಡಾ.ಗಂಗಾಧರ ಮಹಾಸ್ವಾಮಿಗಳು, ಕಿರಿಯ ಸ್ವಾಮಿಗಳಿಂದ ಪಂಚ ಮಂಗಳಾರತಿ ನಡೆಯಿತು. ಕಾರ್ಯಕ್ರಮದಲ್ಲಿ ಪಾಳಾ ಮಠದ ಗುರುಮೂರ್ತಿ ಶಿವಾಚಾರ್ಯರು, ಹಲಕಟ್ಟಿಯ ಅಭಿನವ ಶ್ರೀಗಳು ಹಾಗೂ ದಂಡಗುಂಡ ಬಸವೇಶ್ವರ ದೇವಸ್ಥಾನದ ಪೂಜ್ಯರು ಭಾಗವಹಿಸಿದ್ದರು.