

ಯಾದಗಿರಿ: ರಾಜ್ಯದಲ್ಲಿ ಚರ್ಚೆಯಲ್ಲಿರುವ ಸ್ಟಿಂಗ್ ಆಪರೇಷನ್ ಹಿಂದಿನ ಸತ್ಯಾಸತ್ಯತೆ ಬಹಿರಂಗಪಡಿಸಲು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿರುವ ವಿಧಾನ ಪರಿಷತ್ ಪ್ರತಿಪ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಸ್ಟಿಂಗ್ ಆಪರೇಷನ್ ಕಂಪನಿಯಾಗಿ ಕಾಂಗ್ರೆಸ್ ಮಾರ್ಪಟ್ಟಿದೆ ಎಂದು ಜರಿದರು.
ಸ್ಟಿಂಗ್ ಆಪರೇಷನ್ ಕುರಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ಗಂಭೀರವಾಗಿ ಪರಿಗಣಿಸಿ ಇದರ ಹಿಂದೆ ಯಾರಿದ್ದಾರೆ? ಉದ್ದೇಶವೇನು ಎಂಬ ವಿಷಯ ತನಿಖೆಯಿಂದ ಹೊರಬರಬೇಕು. ಪ್ರಕರಣ ಸತ್ಯವೋ ಅಥವಾ ಬ್ಲ್ಯಾಕ್ಮೇಲ್ ತಂತ್ರವೋ ಎಂಬುದನ್ನು ಸ್ಪಷ್ಟಪಡಿಸಬೇಕು. ಕಾಂಗ್ರೆಸ್ನೊಳಗಿನ ಸ್ಟಿಂಗ್ ಆಪರೇಷನ್ಗಳಿಗೆ ಸಂಬಂಧಿಸಿದ ಆಡಿಯೋ&ವಿಡಿಯೋಗಳ ಕುರಿತು ನಾಯಕರು ಮಾಡುತ್ತಿರುವ ಆರೋಪಗಳು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಸ್ವತಂತ್ರ ತನಿಖೆ ನಡೆಸಿ ಸತ್ಯ ಬಹಿರಂಗಪಡಿಸಬೇಕು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ಒಂದಕ್ಕಿಂತ ಹೆಚ್ಚು ಕಡೆ ಹೆಸರಿರುವ, ಸ್ಥಳಾಂತರಗೊಂಡ ಹಾಗೂ ಅನರ್ಹರ ಹೆಸರು ಪರಿಶೀಲಿಸಿ ಸರಿಪಡಿಸುವುದು ಅಗತ್ಯವಿದೆ. ಭಾರತೀಯ ನಾಗರಿಕರಲ್ಲದವರಿಗೆ ಮತದಾನದ ಹಕ್ಕು ಇರಬಾರದು ಎಂದರು.
ಕಾಂಗ್ರೆಸ್ ಎಸ್ಐಆರ್ ವಿರೋಧಿಸುತ್ತಿರುವುದೇಕೆ? ಮತಗಳ್ಳತನದ ಆರೋಪ ಮಾಡುವುದಕ್ಕಿಂತ ಚುನಾವಣಾ ಪ್ರಕ್ರಿಯೆಯಲ್ಲಿ ಲೋಪಗಳಿದ್ದರೆ ಸಾ್ಯಾಧಾರಗಳೊಂದಿಗೆ ಪ್ರಶ್ನಿಸಬೇಕು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಭೇಟಿಗೆ ಕಾಂಗ್ರೆಸ್ ನಾಯಕರು ಮುಂದಾದ ವಿಚಾರ ಪ್ರಸ್ತಾಪಿಸಿದ ಛಲವಾದಿ, ಸಮಸ್ಯೆಗಳಿದ್ದರೆ ಕಾನೂನು ಮಾರ್ಗದಲ್ಲಿ ಪರಿಹಾರ ಕಂಡುಕೊಳ್ಳಬೇಕು. ನ್ಯಾಯಾಂಗವನ್ನು ರಾಜಕೀಯ ಉದ್ದೇಶಕ್ಕೆ ಬಳಸಬಾರದು ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅವಮಾನವಾಗಿದೆ ಎಂದ ಛಲವಾದಿ, ಸಿಎಂ ಹುದ್ದೆಗೆ ಗೌರವವಿದೆ. ಈ ವಿಚಾರದಲ್ಲಿ ರಾಹುಲ್ ಗಾಂಧಿ ರಾಜ್ಯದ ಜನರ ಮೆ ಕೇಳಬೇಕು ಅಥವಾ ಡಿಕೆಶಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಾ, ರಾಜ್ಯ ಕಾರ್ಯದರ್ಶಿ ಲಲಿತಾ ಅನಪುರ, ಮಾಜಿ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ್, ಹಿರಿಯ ಮುಖಂಡರಾದ ರಾಚಣ್ಣಗೌಡ ಮುದ್ನಾಳ್, ಶರಣಪ್ಪ ತಳವಾರ, ದೇವೇಂದ್ರನಾಥ ನಾದ, ಹಣಮಂತ ಇಟಗಿ, ಸಿದ್ದನಗೌಡ ಕಾಡಂನೂರ, ಸಿದ್ದಾರೆಡ್ಡಿ ಬಲಕಲ್, ಶರಣಗೌಡ, ಸಾಬಣ್ಣ ತಳವಾರ, ಸ್ವಾಮಿದೇವ ದಾಸನಕೇರಿ, ವಿಲಾಸ ಪಾಟೀಲ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಲಕ್ಷ್ಮಿಪುತ್ರ ಪಾಟೀಲ್, ವಿರುಪಾಕ್ಷಯ್ಯ ಸ್ವಾಮಿ, ಚಂದ್ರು ಕಡೆಸೂರ ಇತರರಿದ್ದರು.
ರಾಜ್ಯದಲ್ಲಿ ಮಳೆ ಕೊರತೆಯಿಂದ ಬೆಳೆ ನಷ್ಟವಾಗಿದ್ದು, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು, ನೀರಿನ ಅಭಾವ ಎದುರಾಗಿದೆ. ರೈತರು ಸಂಕಷ್ಟದಲ್ಲಿದ್ದರೂ ಸರ್ಕಾರ ಘೋಷಿಸಿದ ಪರಿಹಾರ ತಲುಪಿಲ್ಲ ಎಂದು ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು. ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು. ಕನಿಷ್ಠ 10 ಸಾವಿರ ರೂ. ತಕ್ಷಣ ಬಿಡುಗಡೆ ಮಾಡಬೇಕು ಎಂಬುದು ಬಿಜೆಪಿ ಒತ್ತಾಯವಾಗಿತ್ತು. ಆದರೆ ಸರ್ಕಾರ ಘೋಷಿಸಿದ 2,500 ರೂ. ಸಹ ರೈತರ ಖಾತೆಗಳಿಗೆ ಜಮೆಯಾಗಿಲ್ಲ ಎಂದು ದೂರಿದರು. ಕೇಂದ್ರದ ಎನ್ಡಿಆರ್ಎಫ್ ನೆರವಿಗಾಗಿ ಕಾಯದೆ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (ಎಸ್ಡಿಆರ್ಎಫ್) ಅಡಿ ಲಭ್ಯವಿರುವ ಅನುದಾನದಿಂದ ತಕ್ಷಣ ಪರಿಹಾರ ನೀಡಬೇಕು. ರೈತರ ಆತ್ಮಹತ್ಯೆ ತಡೆಗಟ್ಟಲು ಸರ್ಕಾರ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.ನೀರಿನ ಸಮಸ್ಯೆ ನಿವಾರಣೆಗೆ ಪ್ರತಿ ಕ್ಷೇತ್ರಕ್ಕೆ ಒಂದು ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಸರ್ಕಾರ ಹೇಳಿದರೂ ಹಣ ಬಂದಿಲ್ಲ ಎಂದು ಶಾಸಕರು ಹೇಳುತ್ತಿದ್ದಾರೆ. ವಿಶ್ವವಿದ್ಯಾಲಯಗಳ ಖಾತೆಯಲ್ಲಿರುವ ಹಣವನ್ನು ಸರ್ಕಾರಕ್ಕೆ ನೀಡುವಂತೆ ಕೇಳಲಾಗುತ್ತಿದೆ ಎಂಬ ವಿಚಾರ ಆರ್ಥಿಕ ನಿರ್ವಹಣೆ ಕುರಿತ ಪ್ರಶ್ನೆ ಹುಟ್ಟು ಹಾಕಿದೆ. ಬೆಳಗಾವಿ ವಿವಿಯೊಂದರ ಖಾತೆಯಲ್ಲಿ ಸುಮಾರು 800 ಕೋಟಿ ಇರುವುದಾಗಿ ಉಲ್ಲೆಖಿಸಿದರು.
ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರ ಆಡಳಿತಾವಧಿಯಲ್ಲಿ ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹಾಗೂ ಪರಿಶಿಷ್ಟ ಪಂಗಡ ಮೀಸಲಾತಿ ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಲಾಗಿತ್ತು ಎಂದು ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಹೇಳಿದರು. ಮೀಸಲಾತಿ ಶೇ.50ರ ಮಿತಿ ದಾಟಬಾರದು ಎಂಬ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಮರ್ಥವಾಗಿ ವಾದ ಮಂಡಿಸುವಲ್ಲಿ ವಿಫಲವಾಗಿದೆ. ಇನ್ನು ಪರಿಶಿಷ್ಟರ ಅಭಿವೃದ್ಧಿಗಾಗಿ ಮೀಸಲಿಟ್ಟ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುತ್ತಿದೆ ಎಂದು ಪುನರುಚ್ಚರಿಸಿದರು. ಮೀಸಲಾತಿ ವಿಚಾರದಲ್ಲಿ ಕಾನೂನುಬದ್ಧ ಪರಿಹಾರಕ್ಕಾಗಿ ಸರ್ಕಾರ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಬೇಕು. ಕಾಂಗ್ರೆಸ್ನಲ್ಲಿರುವ ದಲಿತ ನಾಯಕರು ಸಮುದಾಯದ ಹಿತಾಸಕ್ತಿಗಾಗಿ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.
ವಿಧಾನ ಪರಿಷತ್ನ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಗೆಲುವಿಗಾಗಿ ಮತಯಾಚನೆ ಮಾಡುತ್ತಿರುವುದಾಗಿ ಛಲವಾದಿ ಹೇಳಿದರು. ರಾಯಚೂರಿನಲ್ಲಿ ಶಿಕ್ಷಕರ ಭೇಟಿಯಾಗಿದ್ದು, ಯಾದಗಿರಿ ಹಾಗೂ ಕಲಬುರಗಿಯಲ್ಲಿಯೂ ಪ್ರಚಾರ ನಡೆಸಲಾಗುವುದು. ನಾವು ಪರಿಷತ್ನಲ್ಲಿ ಜನಪರ ವಿಷಯಗಳ ಕುರಿತು ಧ್ವನಿ ಎತ್ತುತ್ತಿದ್ದೇವೆ. ಶಿಕ್ಷಕರು ಮತ್ತು ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುವ ಅಭ್ಯರ್ಥಿ ನಮೋಶಿ ಗೆಲುವು ಖಚಿತವೆಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಶಿಕರು ಮತ್ತು ಪದವೀಧರ ಸೇರಿ ನಾಲ್ಕೂ ಕ್ಷೇತ್ರಗಳಲ್ಲಿ ಎನ್ಡಿಎ ಅಭ್ಯರ್ಥಿಗಳು ಗೆಲುವಿನ ನಗೆ ಬೀರಲಿದ್ದಾರೆ ಎಂದರು.