ಪೌರಾಯುಕ್ತ ಚವ್ಹಾಣ್​ ನೇತೃತ್ವದಲ್ಲಿ ಸ್ವಚ್ಛತೆ

ಯಾದಗಿರಿ ನಗರದ ಭೀಮಾ ನದಿಯಲ್ಲಿ ಶುಕ್ರವಾರ ಪೂಜೆಗಾಗಿ ಬಂದಿದ್ದ ಭಕ್ತರು ವಿವಿಧ ವಸ್ತುಗಳನ್ನು ನಗರಸಭೆ ವಾಹನದಲ್ಲಿ ಹಾಕುತ್ತಿರುವುದು. ಪೌರಾಯುಕ್ತ ಉಮೇಶ ಚವ್ಹಾಣ್​ ಇತರರಿದ್ದರು.
ಯಾದಗಿರಿ ನಗರದ ಭೀಮಾ ನದಿಯಲ್ಲಿ ಶುಕ್ರವಾರ ಪೂಜೆಗಾಗಿ ಬಂದಿದ್ದ ಭಕ್ತರು ವಿವಿಧ ವಸ್ತುಗಳನ್ನು ನಗರಸಭೆ ವಾಹನದಲ್ಲಿ ಹಾಕುತ್ತಿರುವುದು. ಪೌರಾಯುಕ್ತ ಉಮೇಶ ಚವ್ಹಾಣ್​ ಇತರರಿದ್ದರು.
Published on: 

ಯಾದಗಿರಿ: ಸವದತ್ತಿ ಯಲ್ಲಮ್ಮ ದೇವಿಗೆ ಹಾವು ಸುತ್ತಿಕೊಂಡಿದೆ ಮತ್ತು ಪಾದವನ್ನು ಹಾವು ನುಂಗಿದೆ ಎಂಬ ಗಾಳಿ ವದಂತಿ ನಂಬಿರುವ ಜಿಲ್ಲೆಯ ವಿವಿಧ ಗ್ರಾಮಗಳ ಅನೇಕರು ಮತ್ತೆ ಶುಕ್ರವಾರ ಇಲ್ಲಿನ ಭೀಮಾ ನದಿಗೆ ಸ್ನಾನ, ಪೂಜೆಗಾಗಿ ಆಗಮಿಸಿದ್ದರು.

ಹೀಗೆ ಆಗಮಿಸುವ ಸೂಚನೆ ಅರಿತ ನಗರಸಭೆ ಪೂರ್ವಭಾವಿಯಾಗಿ ನದಿ ದಂಡೆಯಲ್ಲಿ ಕಸ ವಿಲೇವಾರಿ ಮಾಡುವ ವಾಹನಗಳನ್ನು ನಿಲ್ಲಿಸಿತ್ತು ಮತ್ತು ಡಸ್ಟ್​ ಬಿನ್​ಗಳನ್ನು ಅಲ್ಲಲ್ಲಿ ಇಡುವ ಮೂಲಕ ಕಸ ವಿಲೇವಾರಿ ಅನುಕೂಲ ಮಾಡಿಕೊಟ್ಟಿತ್ತು.

ಅಲ್ಲದೆ ಖುದ್ದಾಗಿ ಪೌರಾಯುಕ್ತ ಉಮೇಶ ಚವ್ಹಾಣ್​ ಅವರ ನೇತೃತ್ವದಲ್ಲಿ ನಗರಸಭೆ ಸಿಬ್ಬಂದಿ ಅಲ್ಲಿಯೇ ಠಿಕಾಣಿ ಹೂಡಿ ಬಂದಂತಹ ಜನರಿಗೆ ನದಿ ನೀರು ಕಲುಷಿತಗೊಳಿಸಬೇಡಿ, ಏನೇ ವಸ್ತುಗಳಿದ್ದರೂ ಕಸದ ವಾಹನದಲ್ಲಿ ಹಾಕಬೇಕು ಎಂದು ಹೇಳುವ ಮೂಲಕ ನದಿ ನೀರು ಮಲೀನಗೊಳ್ಳದಿರಲು ಮುನ್ನೇಚರಿಕೆ ವಹಿಸಿದ್ದರು.

ನದಿ ದಡದ ವಿವಿಧ ಕಡೆ ಈ ಕುರಿತಾದ ಬ್ಯಾನರ್​ ಕಟ್ಟುವ ಮೂಲಕ ಬಂದ ಜನರಿಗೆ ಮಾಹಿತಿ ರವಾನಿಸಿದರು. ಕಳೆದ ನ.16ರಂದು ಇದೇ ನೆಪ ಮುಂದೆ ಮಾಡಿ ಸಾವಿರಾರು ಜನರು ನದಿಗೆ ಬಂದು ಅನೇಕ ವಸ್ತುಗಳನ್ನು ನದಿ ನೀರಲ್ಲಿ ಹಾಕುವ ಮೂಲಕ ಮಲೀನಗೊಳಿಸಿದ್ದರು. ಮರುದಿನ ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್​ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿ ಸ್ವಚ್ಛತಾ ಕೆಲಸ ಮಾಡಿತ್ತು. ಇಂದು ಮತ್ತೆ ಅದೇ ತರಹ ಆಗಬಾರದೆಂಬ ಉದ್ದೇಶದಿಂದ ಮೊದಲೆ ಎಲ್ಲವೂ ಸಿದ್ಧತೆ ಮಾಡಿಕೊಂಡು ಅಲ್ಲಿಯೇ ಠಿಕಾಣಿ ಹೂಡಲಾಗಿತ್ತು. ಅದರಂತೆಯೇ ಜನರು ಕೂಡ ವಿವಿಧ ವಸ್ತುಗಳು ಪ್ರತ್ಯೇಕವಾಗಿ ಹಾಕುವ ಮೂಲಕ ನಗರಸಭೆ ಮನವಿಗೆ ಸ್ಪಂದಿಸಿದ್ದಾರೆ ಎಂದು ಚವ್ಹಾಣ್​ ತಿಳಿಸಿದ್ದಾರೆ. ನದಿ ದಡದಲ್ಲಿ ಪೊಲೀಸ್​ ಬಂದೋಬಸ್ತ್​ ಮಾಡಲಾಗಿತ್ತು.

ನೀರು ಕಾಯಿಸಿ ಸೋಸಿ ಕುಡಿಯರಿ

ಭೀಮಾ ನದಿಯಲ್ಲಿ ವಿವಿಧ ವಸ್ತುಗಳು ಹಾಕಿದ್ದರಿಂದ ನೀರು ಮಲೀನಗೊಂಡಿತ್ತು. ಅದನ್ನು ನಗರಸಭೆಯವರು ಸ್ವಚ್ಛಗೊಳಿಸಿದ್ದಾರೆ. ಆ ನೀರು ಶುದ್ದಿಕರಿಸಿಯೇ ಕುಡಿಯಲು ಜನರಿಗೆ ಸರಬರಾಜು ಮಾಡಲಾಗುತ್ತದೆ. ಆದರೂ ಸಾರ್ವಜನಿಕರು 3&4ದಿನ ನೀರು ಕಾಯಿಸಿ ಸೋಸಿಯೇ ಕುಡಿಯಬೇಕು ಎಂದು ಜಿಲ್ಲಾಧಿಕಾರಿ ರಾಹುಲ್​ ಪಾಂಡ್ವೆ ನಗರದ ಜನರಲ್ಲಿ ಮನವಿ ಮಾಡಿದ್ದಾರೆ.