100ಕೋಟಿ ರೂ. ಕಾಮಗಾರಿ ಆರಂಭ

ಶಾಸಕ ಶರಣಬಸಪ್ಪ ದರ್ಶನಾಪುರ ಮಾಹಿತಿ | ಯಾಳಗಿ-ವಂದಗನೂರ ರಸ್ತೆ ವೀಕ್ಷಣೆ
ಯಾಳಗಿ-ವಂದಗನೂರ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಗುರುವಾರ ಶಾಸಕ ಶರಣಬಸಪ್ಪ ದರ್ಶನಾಪುರ ವೀಕ್ಷಿಸಿದರು. ಬಸನಗೌಡ ಹೊಸಮನಿ, ಸಮೀನರೆಡ್ಡಿ ಹೊಸಮನಿ, ಬಸವರಾಜ ಚಿಂಚೋಳಿ, ರಾಜು ಕಾಕಾ ಇತರರಿದ್ದರು.
ಯಾಳಗಿ-ವಂದಗನೂರ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಗುರುವಾರ ಶಾಸಕ ಶರಣಬಸಪ್ಪ ದರ್ಶನಾಪುರ ವೀಕ್ಷಿಸಿದರು. ಬಸನಗೌಡ ಹೊಸಮನಿ, ಸಮೀನರೆಡ್ಡಿ ಹೊಸಮನಿ, ಬಸವರಾಜ ಚಿಂಚೋಳಿ, ರಾಜು ಕಾಕಾ ಇತರರಿದ್ದರು.
Published on: 

ಕೆಂಭಾವಿ: ಮಲ್ಲಾಬಾದ್ ಏತ ನೀರಾವರಿ ಮೂರನೇ ಹಂತದ 100ಕೋಟಿ ರೂ. ಕಾಮಗಾರಿಗೆ ಆರಂಭವಾಗಿದ್ದು, ಕೆಂಭಾವಿ, ನಗನೂರ ಮತ್ತು ಬೂದನೂರ ಸೇರಿ ಇನ್ನಿತರ ಹತ್ತಾರು ಗ್ರಾಮಗಳ ರೈತರ ಜಮೀನಿಗೆ ನೀರಾವರಿ ಸೌಲಭ್ಯ ಶೀಘ್ರ ದೊರೆಯಲಿದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದರು.

ಈ ಕುರಿತು ಗುರುವಾರ ಮಾತನಾಡಿದ ಅವರು, ಕಲ್ಯಾಣ ಪಥ ಯೋಜನೆಯಡಿ ಯಾಳಗಿ-ಬೇವಿನಾಹ, ಯಾಳಗಿ-ವಂದಗನೂರು ರಸ್ತೆಗಳ ನಿರ್ಮಾಣಕ್ಕೆ 14 ಕೋಟಿ, ಯಾಳಗಿ ಗ್ರಾಮದ ಸಿದ್ದರಾಯ, ಯಮನೂರಪ್ಪ ಮೂರು ದೇವಸ್ಥಾನ ಸೇರಿ ೪೦ ಲಕ್ಷ, ಚಿಂಚೋಳಿ, ವಂದಗನೂರ ಗ್ರಾಮದ ಸಿಸಿ ರಸ್ತೆಗೆ ತಲಾ 50 ಲಕ್ಷ, ದೋರನಹಳ್ಳಿ-ವಂದಗನೂರು ರಸ್ತೆ ನಿರ್ಮಾಣ, ಚಿಂಚೋಳಿ ಗ್ರಾಮಕ್ಕೆ ಕುಡಿಯುವ ನೀರಿಗಾಗಿ 33 ಲಕ್ಷ ಅನುದಾನ ನೀಡಲಾಗಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿವೆ. ಪ್ರಸಕ್ತ ವರ್ಷ ಸಿಸಿ ರಸ್ತೆ ನಿರ್ಮಾಣಕ್ಕಾಗಿ ಮತ್ತೆ 70 ಲಕ್ಷ ಮೀಸಲಿಡಲಾಗಿದೆ ಎಂದು ಹೇಳಿದರು.

ಶಹಾಪುರ ಮತಕ್ಷೇತ್ರದ ಬಹುತೇಕ ಎಲ್ಲ ಮಠ-ಮಾನ್ಯಗಳು ಮತ್ತು ದೇವಸ್ಥಾನಗಳಿಗೆ ಕಳೆದ ಒಂದೂವರೆ ವರ್ಷದಲ್ಲಿ 39.5 ಕೋಟಿ ಅನುದಾನ ನೀಡಲಾಗಿದ್ದು, ಕೆಲ ಕಾಮಗಾರಿ ಪೂರ್ಣಗೊಂಡಿವೆ, ಇನ್ನೂ ಕೆಲವು ಪ್ರಗತಿಯಲ್ಲಿವೆ ಎಂದು ಹೇಳಿದರು.

ಮತದಾನದ ಹಕ್ಕು ಹೋದರೆ ಬಡವರಿಗೆ ಸರ್ಕಾರದ ಯೋಜನೆಗಳು ಕೈ ತಪ್ಪುತ್ತವೆ ಬೆಳಗಾವಿ, ವಿಜಯಪುರ ಸೇರಿ ಹಲವು ಕಡೆ ಒಂದು ಪಕ್ಷ, ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಮತ ಕಸಿದುಕೊಳ್ಳುವ ಕೆಲಸ ನಡೆದಿದೆ. ಆದರೆ ಶಹಾಪುರ ಮತಕ್ಷೇತ್ರದಲ್ಲಿ ಅಂತಹ ಯಾವುದೇ ಪ್ರಕ್ರಿಯೆಗಳು ನಡೆಯಲು ಬಿಟ್ಟಿಲ್ಲ. ಮೃತಪಟ್ಟವರು ಹಾಗೂ ಎರಡು-ಮೂರು ಕಡೆ ಹೆಸರು ಉಳ್ಳವರನ್ನು ಮತದಾನ ಪಟ್ಟಿಯಿಂದ ತೆಗೆಯುವುದು ಉತ್ತಮ ಕೆಲಸ ಎಂದರು.

ಇದಕ್ಕೂ ಮುಂಚೆ ವಂದಗನೂರ, ಚಿಂಚೋಳಿ ಗ್ರಾಮಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿ, ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು. ಈ ವೇಳೆ ಕೆಂಭಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಯಾಳಗಿ, ಬಾಪುಗೌಡ ಹುಣಸಗಿ, ಶಹಾಪುರ ಬ್ಲಾಕ್ ಅಧ್ಯಕ್ಷ ಶಿವಮಾಂತ ಚಂದಾಪುರ, ಡಿಸಿಸಿ ಬ್ಯಾಂಕ್ ನಿರ್ದೆಶಕ ಬಸನಗೌಡ ಚಿಂಚೋಳಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮಹಿಪಾಲರಡ್ಡಿ ಡಿಗ್ಗಾವಿ, ನಿಂಗನಗೌಡ ಮರಡ್ಡಿ, ಹಣಮಂತರಾಯ ಮಾನಸುಣಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net