ಬರಹಗಾರರ ಅಧಿಕಾರ ಕಸಿಯುತ್ತಿದೆ ಫ್ಯಾಸಿಸ್ಟ್ ಪ್ರಭುತ್ವ

SND Book Release
ಸಿಂಧನೂರಿನಲ್ಲಿ ಯುವ ಕವಿ ಪ್ರಶಾಂತ್ ದಾನಪ್ಪ ಅವರ ‘ಅಂಬೇಡ್ಕರ್ ಯಾರು ಅಂಬೇಡ್ಕರ್ ?’ ಕೃತಿ ಬಿಡುಗಡೆಗೊಳಿಸಲಾಯಿತು. ಸಿಪಿಐಎಂಎಲ್ ಪಾಲಿಟ್ ಬ್ಯುರೋ ಸದಸ್ಯ ಹಾಗೂ ಹಿರಿಯ ಚಿಂತಕ ಆರ್.ಮಾನಸಯ್ಯ, ಕ್ರಾಂತಿಕಾರಿ ಹಾಡುಗಾರ ಅಂಬಣ್ಣ ಆರೋಲಿಕರ್, ಸಿ.ದಾನಪ್ಪ ನಿಲೋಗಲ್, ಬಾಬು ಭಂಡಾರಿಗಲ್, ಆರ್‌ಸಿಎಫ್‌ನ ಎಂ.ಗಂಗಾಧರ, ನಾರಾಯಣ ಬೆಳಗುರ್ಕಿ ಇದ್ದರು.
Published on

ಸಿಂಧನೂರು: ಇದು ದುರಿತಕಾಲ. ಫ್ಯಾಸಿಸ್ಟ್ ಸರ್ವಾಧಿಕಾರ ದೇಶದ ಕವಿ, ಬರಹಗಾರರ ಅಧಿಕಾರವನ್ನು ಕಸಿದುಕೊಂಡಿದೆ. ಜನಪರ, ನೊಂದವರ ಪರವಾಗಿ ಧ್ವನಿ ಎತ್ತುವುದೇ ಅಪರಾಧ ಎನ್ನುವಂತಾಗಿದೆ ಎಂದು ಸಿಪಿಐಎಂಎಲ್ ಪಾಲಿಟ್ ಬ್ಯುರೋ ಸದಸ್ಯ ಹಾಗೂ ಹಿರಿಯ ಚಿಂತಕ ಆರ್.ಮಾನಸಯ್ಯ ಹೇಳಿದರು.

ನಗರದ ಟೌನ್‌ಹಾಲ್‌ನಲ್ಲಿ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಬೀದಿಸಾಲು ಪ್ರಕಾಶನ ಮಸ್ಕಿ ಹೊರ ತಂದಿರುವ, ಯುವ ಕವಿ ಪ್ರಶಾಂತ್ ದಾನಪ್ಪ ಅವರ ‘ಅಂಬೇಡ್ಕರ್ ಯಾರು ಅಂಬೇಡ್ಕರ್ ?’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಸಂವಿಧಾನ ತಿದ್ದುಪಡಿ ಮಾಡುತ್ತೇವೆ. ಸೆಕ್ಯುಲರಿಸಂ ತೆಗೆಯಲೇಬೇಕು. ಡೆಮಾಕ್ರಸಿ ಎನ್ನುವುದು ಇರಲೇಬಾರದು. ಸಮಾಜವಾದ ಎನ್ನುವುದನ್ನು ಅಂಬೇಡ್ಕರ್ ಅವರು ಕಾಪಿ ಮಾಡಿದ್ದಾರೆ. ಇದು ಹಿಂದುರಾಷ್ಟ್ರ ಎಂದು ಫ್ಯಾಸಿಸ್ಟ್ ಶಕ್ತಿಗಳು ಠೇಂಕರಿಸುತ್ತಿವೆ. ದೇಶದಲ್ಲಿ ಫ್ಯಾಸಿಸ್ಟ್ ಸರ್ವಾಧಿಕಾರಿ ಶಕ್ತಿಗಳು ಸಾಂಸ್ಕೃತಿಕ ದಾಳಿಯ ಮೂಲಕ ದುಡಿಯುವ ಜನರ ಸಾಹಿತ್ಯವನ್ನು ನುಂಗಿ ಹಾಕಲು ವ್ಯವಸ್ಥಿತ ಹುನ್ನಾರ ನಡೆಸಿದ್ದು, ಸದೆಬಡಿಯುವ ಕೆಲಸವಾಗಬೇಕು ಎಂದರು.

ಯುವ ಕವಿ ಪ್ರಶಾಂತ್ ದಾನಪ್ಪ ಮಾತನಾಡಿ, ಖ್ಯಾತ ಕ್ರಿಕೆಟ್ ಆಟಗಾರನೊಬ್ಬ ಅಂಬೇಡ್ಕರ್ ಯಾರು ಎಂದು ಮೂದಲಿಸಿದ್ದ. ಈ ಕುರಿತು ಸೊಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಚರ್ಚೆಯೂ ನಡೆಯಿತು. ಆ ಹೇಳಿಕೆ ಪ್ರತಿರೋಧಿಸಿ ನಾನು ಟ್ವಿಟ್ ಮಾಡಿದ್ದೆ. ಅಷ್ಟರ ನಂತರವೂ ಈ ಹೇಳಿಕೆ ನನ್ನನ್ನು ಬಹಳಷ್ಟು ದಿನ ಕಾಡಿತು. ದೇಶಕ್ಕೆ ಸಂವಿಧಾನ ಕೊಟ್ಟ ಹಾಗೂ ಶೋಷಿತ ಜನರನ್ನು ವಿಮೋಚನೆಗೊಳಿಸಿದ ಬಾಬಾ ಸಾಹೇಬರನ್ನು ಯಾರು ಎಂದು ಕೇಳಿದ್ದ ಆ ವ್ಯಕ್ತಿಗೆ ಹಾಡಿನ ಮೂಲಕವೇ ಉತ್ತರ ಕೊಟ್ಟಿರುವೆನು ಎಂದು ಅಂಬೇಡ್ಕರ್ ಯಾರು ಅಂಬೇಡ್ಕರ್ ಹಾಡು ಹುಟ್ಟಿದ ಬಗೆಯನ್ನು ವಿವರಿಸಿದರು.

ಕ್ರಾಂತಿಕಾರಿ ಹಾಡುಗಾರ ಅಂಬಣ್ಣ ಆರೋಲಿಕರ್, ಸಿ.ದಾನಪ್ಪ ನಿಲೋಗಲ್, ಬಾಬು ಭಂಡಾರಿಗಲ್, ಆರ್‌ಸಿಎಫ್‌ನ ಎಂ.ಗಂಗಾಧರ, ನಾರಾಯಣ ಬೆಳಗುರ್ಕಿ, ಎಚ್.ಎನ್.ಬಡಿಗೇರ ಮಾತನಾಡಿದರು. ಪ್ರಮುಖರಾದ ಎಂ.ವಿರೂಪಾಕ್ಷಿ, ಬಾಬು ಭಂಡಾರಿಗಲ್, ಡಿ.ಎಚ್.ಪೂಜಾರ್, ಜೆ.ಬಿ.ರಾಜು, ಬಿ.ಎನ್.ಆರ್, ಬಿ.ಬಸವಲಿಂಗಪ್ಪ, ಮೇರಿ ದಾನಪ್ಪ ಮಸ್ಕಿ, ಕವಿ ಪ್ರಶಾಂತ್ ದಾನಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net