ಜಗತ್ತಿನ ಮೊದಲ ವೈದ್ಯಕೀಯ ಕ್ಷೇತ್ರ ‘ಆಯುರ್ವೆದ’

31 AKR 01 ADD
Published on

ಅಕ್ಕಿಆಲೂರ: ಇಂದಿನ ಆಧುನಿಕ ಯುಗದಲ್ಲಿ ಆರೋಗ್ಯಕ್ಕಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು, ಆಯುರ್ವೆದ ಜಗತ್ತಿನ ಮೊದಲ ವೈದ್ಯಕೀಯ ಕ್ಷೇತ್ರ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ನೂತನವಾಗಿ ಆರಂಭಗೊಂಡ ಶ್ರೀಶೈಲ ಮಲ್ಲಿಕಾರ್ಜುನ ಆಯುರ್ವೆದ ಆರೋಗ್ಯನಿಕೇತನ ಆಸ್ಪತ್ರೆ ಉದ್ಘಾಟಿಸಿ ಅವರು ಮಾತನಾಡಿದರು. ಇಂಗ್ಲಿಷ್ ವೈದ್ಯಕೀಯ ಪದ್ದತಿ ಪರಿಚಯವಾಗುವ ಪೂರ್ವದಲ್ಲಿಯೇ ನಮ್ಮ ಋಷಿ ಮುನಿಗಳು ಭರತಖಂಡದಲ್ಲಿ ಆಯುರ್ವೆದದ ಮೂಲಕ ಆರೋಗ್ಯವಂತ ಸಮಾಜಕ್ಕೆ ನಾಂದಿ ಹಾಡಿದರು. ಹಣಗಳಿಕೆಯ ಹಿಂದೆ ಬಿದ್ದಿರುವ ಮನುಷ್ಯ ಆರೋಗ್ಯ ಮತ್ತು ನೆಮ್ಮದಿ ನಿರ್ಲಕ್ಷ್ಯ ಮಾಡುತ್ತಿದ್ದಾನೆ. ಹೀಗಾಗಿ ಆರೋಗ್ಯಕ್ಕಾಗಿ ಹೋರಾಟ ಮಾಡಬೇಕಾಗ ಪರಿಸ್ಥಿತಿ ನಿರ್ವಣವಾಗಿದೆ. ಯೋಗ, ಆಯುರ್ವೆದ ಒಂದೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಮುನ್ನುಡಿ ಬರೆಯಲಿದೆ ಎಂದರು.

ಧಾರವಾಡ ಮನಗುಂಡಿಯ ಬಸವಾನಂದ ಸ್ವಾಮೀಜಿ ಮಾತನಾಡಿ, ನಿದ್ದೆ, ಆಹಾರ, ಧ್ಯಾನದಿಂದಲೆ ಆರೋಗ್ಯ ಸಂರಕ್ಷಣೆ ಮಾಡಿಕೊಳ್ಳಬಹುದು. ಆರೋಗ್ಯ ಕ್ಷೇತ್ರ ಉದ್ಯಮದ ಬದಲು ಸೇವೆಯಾಗಬೇಕು. ಪ್ರಕೃತಿ ಜೊತೆಗಿನ ಮಾನವನ ಸಂಬಂಧ ಅನ್ಯೋನ್ಯವಾಗಿರಬೇಕು. ಆಸ್ಪತ್ರೆಯಲ್ಲಿ ಮಾನವೀಯ ಮೌಲ್ಯಕ್ಕೆ ಮುತುವರ್ಜಿ ವಹಿಸಬೇಕು ಎಂದರು.

ಅಮೆರಿಕಾದ ವೈದ್ಯ ಡಾ. ಚಂದ್ರಶೇಖರ ವಿರೂಪಣ್ಣವರ ಮಾತನಾಡಿ, ಅಮೆರಿಕದಲ್ಲಿ ಪ್ರತಿವಾರ ಒಂದೊಂದು ವಚನಗಳ ಭೋಧಿಸುವ ಕಾರ್ಯ ನಡೆಯುತ್ತಿದೆ. ಶರಣರ ಸಂಸ್ಕೃತಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ನೂತನ ಆಸ್ಪತ್ರೆಯ ವೈದ್ಯ ಡಾ.ಅಭಿಷೇಕ ವಿರೂಪಣ್ಣವರ ಮಾತನಾಡಿದರು. ಡಾ.ಚಂದ್ರಶೇಖರ ವಿರೂಪಣ್ಣವರ ಶರಣರ ವಚನ ಕೃತಿ ಬಿಡುಗಡೆಗೊಂಡಿತು. ಬಾಳೂರಿನ ಕುಮಾರ ಶ್ರೀ, ಶಿವಬಸವ ಶ್ರೀ, ಚಂದ್ರಶೇಖರ ಶಿವಾಚಾರ್ಯ ಶ್ರೀ, ಕೂಡಲದ ಗುರುಮಹೇಶ್ವರ ಶಿವಾಚಾರ್ಯ ಶ್ರೀ, ಹೇರೂರಿನ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ, ಹೋತನಹಳ್ಳಿಯ ಶಂಕರಾನಂದ ಶ್ರೀ, ಡಾ.ಸುಶೀಲಾ ವಿರುಪಣ್ಣವರ, ಡಾ.ಆಯ್.ವೈ. ಮಾಳೋದೆ. ಡಾ. ವಿ.ಕೆ. ಬಾಬಜಿ, ಡಾ.ಸತೀಶ ಸೊರಟಗೇರಿ, ವಿವೇಕಾನಂದ ವಿರೂಪಣ್ಣವರ, ಸಿದ್ರಾಮಪ್ಪ ವಿರೂಪಣ್ಣವರ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net