ನೀರಿಗಾಗಿ ನಾಡಿನತ್ತ ಮುಖಮಾಡಿದ ವನ್ಯಜೀವಿಗಳು

15ldh2
ಲಿಂಗದಹಳ್ಳಿ ಹೋಬಳಿಯ ತಿಗಡ ಗ್ರಾಪಂ ವ್ಯಾಪ್ತಿಯಲ್ಲಿ ನೀರಿಲ್ಲದೇ ಒಣಗುತ್ತಿರುವ ಅಡಕೆ ಮರಗಳು.
Published on

ಲಿಂಗದಹಳ್ಳಿ: ಒಂದೆಡೆ ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನ, ಮತ್ತೊಂದೆಡೆ ಕಳೆದ ವರ್ಷ ಮಳೆ ಕೈಕೊಟ್ಟ ಕಾರಣ ಹೋಬಳಿಯ ಬಹುತೇಕ ಕೆರೆಕಟ್ಟೆಗಳು, ಹಳ್ಳಕೊಳ್ಳಗಳು ಬತ್ತಿ ಹೋಗಿದ್ದು ಕುಡಿಯುವ ನೀರಿಗಾಗಿ ಜಾನುವಾರುಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಭದ್ರ ಅಭಯಾರಣ್ಯ ವ್ಯಾಪ್ತಿಯಲ್ಲೂ ಪರಿಸ್ಥಿತಿ ಬಿಗಡಾಯಿಸಿದ್ದು ವನ್ಯಪ್ರಾಣಿಗಳು, ಪಕ್ಷಿಗಳ ಕುಡಿಯುವ ನೀರಿಗಾಗಿ ಗ್ರಾಮಗಳತ್ತ ಮುಖಮಾಡಿವೆ. ಇತ್ತೀಚೆಗಷ್ಟೆ ನೀರನ್ನಾರಸಿ ಬಂದಿದ್ದ ಕಾಡಾನೆ ದಾಳಿಯಿಂದ ವರ್ತೆಗುಂಡಿ ಗ್ರಾಮಸ್ಥರೊಬ್ಬರು ಸಾವನ್ನಪ್ಪಿದ್ದು, ಇದಕ್ಕೆ ತಾಜಾ ಉದಾಹರಣೆಯಾಗಿದ್ದು ಈ ಘಟನೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ ನಂದಿಬಟ್ಟಲು ನಿವಾಸಿ ಎನ್.ಪಿ. ಕೃಷ್ಣೇಗೌಡ ತಿಳಿಸಿದ್ದಾರೆ.
ಇದುವರೆಗೂ ಮಳೆ ಬಾರದಿರುವುದರಿಂದ ಹೋಬಳಿಯಲ್ಲಿರುವ ಕೊಳವೆಬಾವಿಗಳು, ತೆರೆದ ಬಾವಿಗಳೆಲ್ಲವೂ ಬತ್ತಿ ಹೋಗಿವೆ. ಇದನ್ನೇ ನಂಬಿಕೊಂಡಿದ್ದ ರೈತರು ಕಂಗಾಲಾಗಿದ್ದಾರೆ. ಹೋಬಳಿಯ ಬಹುಪಾಲು ರೈತರು ಹೆಚ್ಚಾಗಿ ಅಡಕೆ, ತೆಂಗು, ಬಾಳೆಯನ್ನು ನೆಚ್ಚಿಕೊಂಡಿದ್ದಾರೆ. ತಮ್ಮ ಮಕ್ಕಳುಗಳಂತೆ ಜೋಪಾನ ಮಾಡಿ ಬೆಳೆಸಿರುವ ತೋಟಗಳು ಇದೀಗ ನೀರಿಲ್ಲದೇ ಒಣಗಿ ಹೋಗುತ್ತಿದ್ದು ಬೆಳೆ ಬೆಳೆಯಲು ಮಾಡಿದ ಲಕ್ಷಾಂತರ ರೂ. ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ಅನ್ನದಾತನ್ನು ಆವರಿಸಿದೆ. ಜತೆಗೆ ಕಾಡಾನೆ ಸೇರಿದಂತೆ ಕಾಡುಪ್ರಾಣಿಗಳು ನೀರಿಗಾಗಿ ಗ್ರಾಮಗಳತ್ತ ಬರುತ್ತಿದ್ದು ಬೆಳೆಯ ಜತೆಗೆ ತೋಟಗಳಲ್ಲಿ ಅಳವಡಿಸಲಾಗಿರುವ ಪೈಪ್‌ಲೈನ್, ಪಂಪ್‌ಸೆಟ್‌ಗಳನ್ನು ತುಳಿದು ಹಾಳುಗೆಡವುತ್ತಿದ್ದು, ಕೃಷಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ಗುರಿಮಾಡಿವೆ ಎನ್ನುತ್ತಾರೆ ತಣಿಗೆ ಬೈಲು ರಮೇಶ್ ಹಾಗೂ ಗೋವಿಂದೇಗೌಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net