

ಬಸವರಾಜ ಇದ್ಲಿ ಹುಬ್ಬಳ್ಳಿ
ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಅನ್ನದಾತರೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆ ‘ರೈತ ಸಂತೆ’ಗೆ ಉತ್ತೇಜನ ನೀಡಬೇಕೆಂದು ಹೇಳುವ ಮೂಲಕ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೊಸ ಸಂಚಲನ ಮೂಡಿಸಿದ್ದಾರೆ. ಆದರೆ, ಜಿಡ್ಡುಗಟ್ಟಿದ ಆಡಳಿತ ವ್ಯವಸ್ಥೆ, ಮಧ್ಯವರ್ತಿಗಳ ಅಟ್ಟಹಾಸಗಳ ಮಧ್ಯೆ ಇದೆಲ್ಲ ಕಾರ್ಯ ಸಾಧ್ಯವೆ ಎಂಬ ಪ್ರಶ್ನೆ ಉದ್ಭವವಾಗಿದೆ.
ಹೌದು, ಈಗಾಗಲೇ ‘ರೈತ ಸಂತೆ’ ಪರಿಕಲ್ಪನೆಗಳು ಯಶಸ್ಸು ಕಾಣದೇ ಹಾಕಿದ ದುಡ್ಡು ನಷ್ಟವಾದ ಪ್ರಸಂಗಗಳು ಶೆಟ್ಟರ್ ಕ್ಷೇತ್ರದಲ್ಲಿಯೂ ಇರುವಾಗ, ಸಚಿವರು ನೀಡಿರುವ ಸೂಚನೆಯನ್ನು ಅಧಿಕಾರಿಗಳು ಎಷ್ಟರ ಮಟ್ಟಿಗೆ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂಬುದು ಸಹಜ ಆತಂಕ.
ಲಾಕ್ಡೌನ್ನಿಂದಾಗಿ ಕೃಷಿಕರು ಬೆಳೆದ ಫಸಲಿಗೆ ಸರಿಯಾದ ಬೆಲೆ ಸಿಗದೇ ಹೋಯಿತು. ಅದರ ಮಧ್ಯೆ ಎಪಿಎಂಸಿಗೆ ಬಂದ ಹಣ್ಣು ತರಕಾರಿ, ಇತರೆ ಫಸಲನ್ನು ಮಧ್ಯವರ್ತಿಗಳು ಮನಸೋ ಇಚ್ಚೆ ಖರೀದಿ ಮಾಡಿಕೊಂಡು ಕೆಲವರು ದುರ್ಲಾಭ ಸಹ ಪಡೆದರು.
ಇಂತಹ ಸಂದರ್ಭದಲ್ಲಿ ಸಚಿವರು ರೈತರ ಬಗ್ಗೆ ಕಾಳಜಿ ಪ್ರದರ್ಶಿಸಿದ್ದು, ರೈತ ಸಂತೆ ಪುನಾರಂಭದ ಕುರಿತು ಪ್ರಸ್ತಾಪಿಸಿದ್ದಾರೆ. ಅಧಿಕಾರಿಗಳು ಏನು ಮಾಡಬಹುದು? ಹೆಚ್ಚೆಂದರೆ ರೈತ ಸಂತೆಗೆ ಬೇಕಾದ ಕಟ್ಟಡ, ಮೂಲ ಸೌಲಭ್ಯ ಮಾಡಿಕೊಡಬಹುದು. ಆದರೆ, ರೈತರು ಫಸಲು ತಂದು ಅಲ್ಲಿ ಮಾರಾಟ ಮಾಡುವಂತೆ ಮಾಡುವುದು ಅವರಿಂದ ಖಂಡಿತ ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು.
ಈ ಹಿಂದಿನ ಪ್ರಯತ್ನಗಳು ವಿಫಲವಾಗಿರುವುದೇ ಇದಕ್ಕೆ ಸಾಕ್ಷಿ. 2002-03ರಲ್ಲಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಯಾಗಿದ್ದಾಗ ‘ರೈತ ಸಂತೆ’ಗೆ ಮುನ್ನುಡಿ ಬರೆದರು. ಹುಬ್ಬಳ್ಳಿಯ ನ್ಯೂ ಕಾಟನ್ ಮಾರ್ಕೆಟ್ನಲ್ಲೂ (ಈಗಿನ ಸಾಂಸ್ಕೃತಿಕ ಭವನ) ಒಂದು ರೈತ ಸಂತೆ ಕಟ್ಟಡ ನಿರ್ವಿುಸಲಾಗಿತ್ತು. ಆದರೆ, ಜನಸಂದಣಿಯಿಂದ ದೂರ, ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದು ಸೇರಿ ನಾನಾ ಕಾರಣಗಳಿಗೆ ರೈತ ಸಂತೆಗೆ ರೈತರೇ ಹೆಚ್ಚಿನ ಪ್ರಮಾಣದಲ್ಲಿ ಬರಲೇ ಇಲ್ಲ. ಕೆಲವೇ ವರ್ಷ ನಡೆದು ಕೊನೆಗೆ ಅದನ್ನು ಮುಚ್ಚಬೇಕಾಯಿತು!
ಭಾನುವಾರ ಮಾರುಕಟ್ಟೆ: ಇನ್ನು 2015- 16ನೇ ಸಾಲಿನಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಭಾನುವಾರ ಮಾರುಕಟ್ಟೆ ಪರಿಕಲ್ಪನೆ ಹುಟ್ಟುಹಾಕಿ ಅಲ್ಲಿ ರೈತರು ಮಾತ್ರ ತಮ್ಮ ಉತ್ಪನ್ನ ಮಾರಾಟ ಮಾಡುವ ವ್ಯವಸ್ಥೆ ಜಾರಿಗೆ ತಂದರು. ಅದರಂತೆ ಒಂದು ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿ ಎಪಿಎಂಸಿ ಆವರಣದಲ್ಲಿ ಸುಂದರ ಮಳಿಗೆಗಳಿರುವ ಕಟ್ಟಡ ನಿರ್ವಿುಸಲಾಯಿತು. 2018ರಲ್ಲಿ ಉದ್ಘಾಟನೆ ಕೂಡ ಆಗಿದೆ. ಆದರೆ, ಉದ್ಘಾಟನೆ ದಿನ ಮಾತ್ರ ಬಾಗಿಲು ತೆರೆದಿದ್ದ ಮಳಿಗೆಗಳು ಮತ್ತೆ ತೆಗೆಯಲೇ ಇಲ್ಲ. ಎರಡು ವರ್ಷವಾದರೂ ರೈತರನ್ನು ಕರೆತಂದು ವಹಿವಾಟು ಮಾಡುವ ಗಂಭೀರ ಪ್ರಯತ್ನಗಳು ನಡೆಯಲೇ ಇಲ್ಲ. ಹಾಗಾಗಿ ಈಗಲೂ ಬಾಗಿಲು ಮುಚ್ಚಿಕೊಂಡೇ ಇವೆ. ಅಧಿಕಾರಿಗಳನ್ನು ಕೇಳಿದರೆ ‘ರೈತರು ಬರುತ್ತಿಲ್ಲ, ನಾವೇನು ಮಾಡೋನ್ರಿ…’ ಎಂಬ ಸಿದ್ಧ ಉತ್ತರ ನೀಡುತ್ತಿದ್ದಾರೆ.
ರೈತ ಪ್ರತಿನಿಧಿಗಳು ಏನು ಮಾಡುತ್ತಾರೆ: ಕೃಷಿ ಇಲಾಖೆ, ಎಪಿಎಂಸಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳ ಕಥೆ ಒಂದಾದರೆ ಇನ್ನು ಎಪಿಎಂಸಿಗಳಲ್ಲಿನ ರೈತ ಪ್ರತಿನಿಧಿಗಳು ಸಹ ರೈತ ಸಂತೆ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ. ತಾವು ಪ್ರತಿನಿಧಿಸುವ ಕ್ಷೇತ್ರದಿಂದ ಒಬ್ಬರು ಅಥವಾ ಇಬ್ಬರು ರೈತರನ್ನು ಸಜ್ಜು ಮಾಡಿಕೊಂಡು ಬಂದು ರೈತ ಸಂತೆ ಆರಂಭಿಸಿದರೂ ಎಷ್ಟೋ ಅನುಕೂಲವಾಗುತ್ತದೆ. ಒಂದೊಮ್ಮೆ ರೈತ ಸಂತೆ ಆರಂಭವಾದರೆ ಮುಂದೆ ತಾನಾಗಿಯೇ ನಡೆದುಕೊಂಡು ಹೋಗಬಹುದು ಎಂಬ ಅಭಿಪ್ರಾಯವನ್ನು ಕೃಷಿ ತಜ್ಞರು ವ್ಯಕ್ತಪಡಿಸುತ್ತಾರೆ.
ಸಚಿವರೇ ಮಾರ್ಗ ತೋರಬೇಕು: ರೈತ ಸಂತೆ ಬಗ್ಗೆ ಸಚಿವ ಜಗದೀಶ ಶೆಟ್ಟರ್ ಅವರು ತಾವು ನೀಡಿದ ಸೂಚನೆ ಸರಿಯಾಗಿ ಪಾಲನೆಯಾಗಬೇಕಾದರೆ ಅವರೇ ಸೂಕ್ತ ನಿರ್ದೇಶನ ನೀಡಿ ಮುಂಚೂಣಿ ವಹಿಸಬೇಕು. ರೈತ ಸಂತೆ, ಭಾನುವಾರದ ಮಾರುಕಟ್ಟೆಗಳನ್ನು ಯಶಸ್ವಿಗೊಳಿಸಲು ತಜ್ಞರು, ರೈತರೊಂದಿಗೆ ಚರ್ಚೆ ನಡೆಸಬೇಕು. ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಬೇಕು. ಎಪಿಎಂಸಿ ಆವರಣದ ಭಾನುವಾರ ಮಾರುಕಟ್ಟೆಯನ್ನೇ ಆದ್ಯತೆ ಮೇರೆಗೆ ತೆಗೆದುಕೊಂಡು ಜಾರಿಗೆ ತರಬಹುದಾಗಿದೆ. ಅಲ್ಲಿ 14 ಶಟರ್ಸ್ ಸಹಿತ ಮಳಿಗೆಗಳು, 10 ಮುಕ್ತ ಮಾರಾಟದ ಕಟ್ಟೆಗಳು ಇವೆ. ಕ್ಯಾಂಟೀನ್ ಕಟ್ಟಡ, ವಿಶ್ರಾಂತಿ ಕೊಠಡಿ, ಮಕ್ಕಳ ಆಟೋಟಕ್ಕೆ ಸ್ಥಳ, ಶೌಚಗೃಹ ಇತ್ಯಾದಿ ವ್ಯವಸ್ಥೆ ಮಾಡಿಡಲಾಗಿದೆ. ಆದರೆ, ಬಳಸಿಕೊಳ್ಳುವ ಜಾಣ್ಮೆ ಪ್ರದರ್ಶಿಸಬೇಕಿದೆ. ರೈತ ಸಂತೆಯ ಸಲಹೆ ನೀಡಿದ ಜಗದೀಶ ಶೆಟ್ಟರ್ ಇದನ್ನು ರಾಜ್ಯಕ್ಕೆ ಮಾದರಿಯಾಗಿ ಮಾಡಿ ತೋರಿಸುವ ಸ್ಥೈರ್ಯ, ಇಚ್ಚಾಶಕ್ತಿ ತೋರಿಸಬೇಕಿದೆ.