

ಇಂಡಿ : ಮರಗೂರದ ಭೀಮಾ ಶಂಕರ ಸಕ್ಕರೆ ಕಾರ್ಖಾನೆಯಲ್ಲಿ ಭಾನುವಾರ ನಡೆದ ಬಂಥನಾಳ ಪೀಠದ ವಿವಾದದ ಸಂಧಾನ ಸಭೆಯಲ್ಲಿ ವೃಷಭ ಲಿಂಗೇಶ್ವರ ಸ್ವಾಮೀಜಿಗಳಿಗೆ ಡಿವೈಎಸ್‌ಸಿ ಸದಾಶಿವ ಕಟ್ಟೀಮನಿ ಅನುಚಿತವಾಗಿ ವರ್ತಿಸಿದ್ದಾರೆ ಹಾಗೂ ತಮ್ಮ ನಿರ್ಧಾರವನ್ನು ಕೂಡಲೇ ಪ್ರಕಟಿಸುವಂತೆ ಒತ್ತಡ ಹೇರಿದ್ದು, ಅವರ ವಿರುದ್ಧ ಮೇಲಾಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ನಾಲ್ಕು ನೂರಕ್ಕೂ ಅಧಿಕ ಭಕ್ತರು ಗುರುವಾರ ಡಿವೈಎಸ್‌ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಳೆದ ಭಾನುವಾರ ನಡೆದ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ, ಡಿವೈಎಸ್ಪಿ ಸದಾಶಿವ ಕಟ್ಟೀಮನಿ, ಸಿಪಿಐ ಸುನಿಲ್ ಪಾಟೀಲ, ಮಠಾಧೀಶರು ಭಾಗವಹಿಸಿದ್ದರು. ಸಭೆಯಲ್ಲಿ ತಮ್ಮ ಮೇಲೆ ಒತ್ತಡ ಹೇರಲಾಗಿದ್ದು, ಈ ವೇಳೆ ಶಾಸಕ ಯಶವಂತರಾಯಗೌಡ ಪಾಟೀಲ ಅವರೂ ಕೂಡ ಕಣ್ಣಿಗೆ ಕಣ್ಣಿಟ್ಟು ಸುಮ್ಮನೆ ಕುಳಿತುಕೊಳ್ಳುವಂತೆ ಸೂಚಿಸಿದ್ದಲ್ಲದೆ, ಭುಜ ಹಿಡಿದು ಕೆಳಗೆ ಕೂಡಿಸಿದರು ಎಂದು ವೃಷಭಲಿಂಗ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.
ಬದುಕಿ ಬಂದಿರುವುದೇ ಪವಾಡ: ಗುರುವಾರ ಬಂಥನಾಳ ಪೀಠದಲ್ಲಿ ದಿಂಗಾಲೇಶ್ವರ ಶ್ರೀಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಘಟನೆ ಕುರಿತು ಮಾತನಾಡಿದ ವಷಭಲಿಂಗ ಸ್ವಾಮೀಜಿ ಈ ವಿಷಯವನ್ನು ತಿಳಿಸಿ ಕಣ್ಣೀರಿಟ್ಟು, ಮರಗೂರಿನ ಭೀಮಾಶಂಕರ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಆ ಸಭೆ ನನ್ನ ಪ್ರಾಣಕ್ಕೆ ಆಪತ್ತು ತಂದಿತ್ತು. ನನ್ನ ಮೇಲೆ ಒತ್ತಡ ಹೇರಲಾಯಿತು. ನಾನು ಬದುಕಿ ಬಂದಿರುವುದೇ ಒಂದು ಪವಾಡ ಎಂದು ವಷಭಲಿಂಗ ಸ್ವಾಮೀಜಿ ಭಕ್ತರ ಮುಂದೆ ಅಳಲು ತೋಡಿಕೊಂಡರು.
ಸ್ವಾಮೀಜಿಗಳ ಆರೋಪದಿಂದ ಆಕ್ರೋಶಗೊಂಡ ಭಕ್ತರು ಡಿವೈಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ಭಕ್ತರನ್ನು ತಡೆಯಲು ಪ್ರಯತ್ನಿಸಿದರು.
ಸಂಗು ಮಕಾದಾಮ್, ಶಿವಾನಂದ ವಾಡಿ, ಎ.ಪಿ. ಕಾಗವಾಡಕರ, ಈರಣ್ಣ ಮುಜಗೊಂಡ, ಅಶೋಕಗೌಡ ಪಾಟೀಲ, ಎಸ್.ಎಂ,. ಬಿರಾದಾರ, ಕಲ್ಲನಗೌಡ ಬಿರಾದಾರ, ದೊಡಗೊಂಡಪ್ಪ ಬಿರಾದಾರ, ಕಿರಣ ಮುಜಗೊಂಡ, ಪವನ್ ಕಾಗವಾಡಕರ, ಬಿ.ಎಂ. ಕರಾಳೆ ಸೇರಿ ನಾನೂರಕ್ಕೂ ಹೆಚ್ಚು ಜನ ಪ್ರತಿಭಟನೆಯಲ್ಲಿದ್ದರು.