ಪರಶುರಾಮ ಭಾಸಗಿ ವಿಜಯಪುರ
‘ಹೊಂದಾಣಿಕೆ ರಾಜಕಾರಣ, ಸೂಕ್ತ ನಾಯಕತ್ವದ ಕೊರತೆ, ಆಂತರಿಕ ಜಗಳ, ಪರಸ್ಪರ ಮುನಿಸು, ಮುಸುಕಿನ ಗುದ್ದಾಟದಿಂದಾಗಿ ಅಶಕ್ತಗೊಂಡಿರುವ ಬಿಜೆಪಿ ಜಿಲ್ಲಾ ಘಟಕಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೂಕ್ತ ‘ವಿಟಮಿನ್’ ನೀಡುವರೇ?
ಪಕ್ಷ ಸಂಘಟನೆಯ ಹಿನ್ನೆಲೆ ಶುಕ್ರವಾರ ಜಿಲ್ಲಾ ಪ್ರವಾಸ ಕೈಗೊಂಡಿರುವ ವಿಜಯೇಂದ್ರ ಅವರ ಆಗಮನ ಪಕ್ಷದ ಆಂತರಿಕ ವಲಯದಲ್ಲಿ ಸಂಚಲನ ಮೂಡಿಸಿದೆ. ರಾಜ್ಯಾಧ್ಯಕ್ಷರ ಗಮನ ಸೆಳೆಯುವ ನಿಟ್ಟಿನಲ್ಲಿ ನಾಯಕರು ನಾ ಮುಂದು-ತಾ ಮುಂದು ಎನ್ನುವಂತೆ ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಕೆಲವರು ಭೋಜನಕೂಟಕ್ಕೆ ಮನೆಗೆ ಆಹ್ವಾನಿಸಿದರೆ ಇನ್ನೂ ಕೆಲವರು ಪ್ರಧಾನಿ ಮೋದಿ ಜನ್ಮ ದಿನದ ಹಿನ್ನೆಲೆ ಸೇವಾ ಸಂಕಲ್ಪ ಅಭಿಯಾನದ ಭಾಗವಾಗಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಮೆಚ್ಚುಗೆ ಗಳಿಸುವ ತವಕದಲ್ಲಿದ್ದಾರೆ.
ಇನ್ನೊಂದೆಡೆ ಪಕ್ಷದ ಸ್ಥಿತಿಗತಿ ಹೇಳಿಕೊಳ್ಳಲೆಂದು ಕೆಲವು ಕಾರ್ಯಕರ್ತರು ತುದಿಗಾಲ ಮೇಲೆ ನಿಂತಿದ್ದರೆ ಕೆಲವರು ತಮ್ಮ ಪರವಾದ ಯಾವುದೇ ನಕಾರಾತ್ಮಕ ಸಂಗತಿ ರಾಜ್ಯಾಧ್ಯಕ್ಷರ ಗಮನಕ್ಕೆ ಬೀಳದಂತೆ ತಡೆಯೊಡ್ಡುವ ಪ್ರಯತ್ನ ನಡೆಸಿದ್ದಾರೆ. ಈ ಮಧ್ಯೆ ಪಕ್ಷ ಸಂಘಟನೆ ವಿಚಾರವಾಗಿ ಕೆಲವು ನಿಷ್ಟಾವಂತ ಕಾರ್ಯಕರ್ತರು ಕೆಲವು ಸಲಹೆ-ಸೂಚನೆ ನೀಡಲು ಕಾತರರಾಗಿದ್ದಾರಾದರೂ ತೋರಿಕೆಯ ನಾಯಕರ ಮುಂದೆ ಅಂಥವರಿಗೆ ಅವಕಾಶ ಸಿಗುವುದು ಅಷ್ಟಕ್ಕಷ್ಟೆ ಎಂಬ ಮಾತು ಕೇಳಿ ಬರತೊಡಗಿದೆ.
ಅದೇನೇ ಇರಲಿ ಸೂದೀರ್ಘಾವಧಿ ಬಳಿಕ ಜಿಲ್ಲೆಗೆ ಆಗಮಿಸುತ್ತಿರುವ ರಾಜ್ಯಾಧ್ಯಕ್ಷರು ತಮ್ಮದೇ ಆದ ಮೂಲಗಳನ್ನಾಧರಿಸಿ ವಾಸ್ತವ ಅರಿತು ಪಕ್ಷ ಚಟುವಟಿಕೆಗೆ ಚುರುಕು ನೀಡುವುದರ ಜೊತೆಗೆ ಇತ್ತೀಚೆಗಷ್ಟೇ ಮುನ್ನೆಲೆಗೆ ಬಂದಿರುವ ‘ವೀಕ್ ಕ್ಯಾಂಡಿಡೇಟ್’ಗಳ ಕುರಿತು ಮಾಹಿತಿ ಕಲೆ ಹಾಕಿ ಅವರನ್ನು ಬೂಸ್ ಮಾಡುವುದೋ ಇಲ್ಲಾ ಬದಲಿಸುವುದೋ ಎಂಬ ಬಗ್ಗೆ ಮುಂಬರುವ ಚುನಾವಣೆ ದೃಷ್ಠಿಕೋನದಲ್ಲಿ ಈಗಲೇ ಸೂಕ್ತ ತೀರ್ಮಾನ ಕೈಗೊಳ್ಳುವುದು ಒಳಿತು ಎಂಬ ಅಭಿಪ್ರಾಯವೂ ಇದೆ.
ಶಾಸಕ ಬಸನಗೌಡ ಪಾಟೀಲ ಯತ್ನಾಳರ ಉಚ್ಛಾಟನೆ ಬಳಿಕ ನಗರ ಕ್ಷೇತ್ರದಲ್ಲಿ ಬಿಜೆಪಿಗೆ ನಾಯಕತ್ವದ ಕೊರತೆ ಎದ್ದು ಕಾಣುತ್ತಿದ್ದು, ಇರುವ ನಾಯಕರೆಲ್ಲ ನೇಪಥ್ಯಕ್ಕೆ ಸರಿಯುತ್ತಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಯತ್ನಾಳ ಅನಿವಾರ್ಯ ಎಂಬಂತಾಗಿದೆ. ಬಿಜೆಪಿಯಿಂದ ಆಯ್ಕೆಯಾದ ಪಾಲಿಕೆ ಸದಸ್ಯರು ಬಹಿರಂಗವಾಗಿಯೇ ಯತ್ನಾಳರ ಜೊತೆ ಗುರುತಿಸಿಕೊಂಡಿರುವುದು ಪಕ್ಷ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಶಾಸಕ ಯತ್ನಾಳರು ಒಮ್ಮೆ ಜೆಸಿಬಿ ಪಕ್ಷ ಕಟ್ಟುವ ಬಗ್ಗೆ ಮಾತನಾಡುವುದು, ಇನ್ನೊಮ್ಮೆ ಕಾಂಗ್ರೆಸ್ ಪರವಾದ ಹೊಂದಾಣಿಕೆ ರಾಜಕಾರಣದ ಬಗ್ಗೆ ಮಾತನಾಡುತ್ತಿರುವಾಗ ಅವರ ಜೊತೆಗೆ ಪಕ್ಷದ ಚಿಹ್ನೆಯಡಿ ಗೆದ್ದು ಬಂದ ಪಾಲಿಕೆ ಸದಸ್ಯರು ಗುರುತಿಸಿಕೊಂಡರೆ ಅವರು ಸಹ ಜೆಸಿಬಿ ಮತ್ತು ಕಾಂಗ್ರೆಸ್ ಪರವಾದ ಹೊಂದಾಣಿಕೆ ರಾಜಕಾರಣದ ಭಾಗವಲ್ಲದೆ ಮತ್ತೇನು? ಎಂಬ ಭಾವ ಪಕ್ಷ ನಿಷ್ಠರನ್ನು ಕಾಡುತ್ತಿದೆ. ಹಿರಿಯ ಸಂಸದರಾದ ಗೋವಿಂದ ಕಾರಜೋಳ ಅವರು ಸಹ ಈ ಸದಸ್ಯರ ವಿಚಾರದಲ್ಲಿ ತೀವ್ರ ಅಸಮಾಧಾನ ಹೊರಹಾಕಿದ್ದಿದೆ.
ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಕ್ಷೇತ್ರ ಹೊಂದಾಣಿಕೆ ಗೊಂದಲ ಸಹ ಪಕ್ಷ ಪರಾಜಿತ ಅಭ್ಯರ್ಥಿಗಳು ಹಾಗೂ ಆಕಾಂಕ್ಷಿಗಳಲ್ಲಿ ಗೊಂದಲ ಸೃಷ್ಠಿಸಿದೆ. ಇದು ನಾಯಕರ ನಿಷ್ಕ್ರೀಯತೆಗೂ ಕಾರಣವಾಗಿದೆ. ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕನಿಷ್ಠ ಮೂರು ಕ್ಷೇತ್ರವನ್ನಾದರೂ ಜೆಡಿಎಸ್ ಪಡೆದುಕೊಳ್ಳಲಿದೆ ಎಂದಿರುವುದು ಕೆಲವು ಅಭ್ಯರ್ಥಿಗಳಲ್ಲಿ ನಿರಾಸೆ ಮೂಡಿಸಿದೆ. ಕಳೆದ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಲ್ಲಿ ಸಹಜವಾಗಿಯೇ ಕಂಪನ ಸೃಷ್ಠಿಸಿದೆ. ಆಯಾ ಕ್ಷೇತ್ರಗಳಲ್ಲಿ ಆಡಳಿತ ಪಕ್ಷದ ಶಾಸಕರ ವೈಫಲ್ಯಗಳು ಸಾಕಷ್ಟಿದ್ದರೂ ಧ್ವನಿ ಎತ್ತದ ಸ್ಥಿತಿ ನಿರ್ಮಾಣವಾಗಿದೆ.
ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಲು ಸಾಕಷ್ಟು ವಿಷಯಗಳಿದ್ದರೂ ಜಿಲ್ಲಾ ಘಟಕ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಶಾಲಾ ಶಿಕ್ಷಣ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ, ಅನುರಣಿಸುತ್ತಿರುವ ಭೂಹಗರಣ, ಹದಗೆಟ್ಟ ರಸ್ತೆಗಳು, ಮೂಲ ಸೌಕರ್ಯಗಳ ಕೊರತೆ, ಮರೀಚಿಕೆಯಾದ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆ, ಕಾಂಗ್ರೆಸ್ ನಾಯಕರ ಬಹಿರಂಗ ಜಗಳ...ಹೀಗೆ ಅನೇಕ ವಿಷಯಗಳಿದ್ದರೂ ಪ್ರಬಲ ಹೋರಾಟ ರೂಪಿಸುವಲ್ಲಿ ಜಿಲ್ಲಾಘಟಕ ವಿಫಲವಾಗಿದೆ.
ಸಂಸದ ರಮೇಶ ಜಿಗಜಿಣಗಿ ಹಾಗೂ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು ಬರಪರಿಹಾರಕ್ಕಾಗಿ ಹೋರಾಟ ರೂಪಿಸುವವರೆಗೂ ಜಿಲ್ಲೆಯಲ್ಲಿ ಬಿಜೆಪಿ ಸತ್ವಹೀನ ಎನ್ನಿಸುತ್ತಿತ್ತು. ಪಕ್ಷಕ್ಕೆ ಕೊಂಚ ಜೀವ ತುಂಬಿದ ಮತ್ತು ತುಂಬುತ್ತಿರುವವರೆಂದರೆ ಸದ್ಯಕ್ಕೆ ಈ ಉಭಯ ನಾಯಕರಷ್ಟೇ. ಇತ್ತೀಚೆಗೆ ಪಕ್ಷದ ಆಯಕಟ್ಟಿನ ಹುದ್ದೆಗೆ ಪದಾಧಿಕಾರಿಗಳ ನೇಮಕ ವಿಚಾರದಲ್ಲಿ ಉಂಟಾದ ಗೊಂದಲ ಸಹ ಅಸಮಾಧಾನ ಹೆಚ್ಚಿಸಿದ್ದು ಸಂಘಟನೆಗೆ ಹೊಡೆತ ಬೀಳುತ್ತಿದೆ. ಹಿರಿಯ ನಾಯಕರ ಅಭಿಪ್ರಾಯ ಗಡೆಗಣಿಸಲಾಗುತ್ತಿದೆ ಎಂಬ ಅಸಮಾಧಾನವೂ ಇದೆ. ಈ ಎಲ್ಲ ವಿಚಾರಗಳನ್ನಿಟ್ಟುಕೊಂಡು ಪಕ್ಷ ಬಲವರ್ಧನೆಗೆ ರಾಜ್ಯಾಧ್ಯಕ್ಷರು ಕೈಗೊಳ್ಳುವರೇ ಎಂಬ ನಿರೀಕ್ಷೆಯಲ್ಲಿ ಕೆಳ ಹಂತದ ಕಾರ್ಯಕರ್ತರಿದ್ದಾರೆ.