

ವಿಜಯಪುರ: ‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ನರೇಂದ್ರ ಮೋದಿ ಅವರ ಕನಸಿನ ಕೂಸು. ಜಿಲ್ಲೆಯಲ್ಲಿ ಈ ಯೋಜನೆಯ ದಟ್ಟಪಾಲು ಸಿಕ್ಕಿರುವುದೇ ತಿಕೋಟಾ-ಬಬಲೇಶ್ವರ ಭಾಗದ ರೈತರಿಗೆ’ ಎಂದು ಸಂಸದ ರಮೇಶ ಜಿಗಜಿಣಗಿ ಹೆಮ್ಮೆ ವ್ಯಕ್ತಪಡಿಸಿದರು.
ಬಬಲೇಶ್ವರ ಬ್ರಹನ್ಮಠದಲ್ಲಿ ಶನಿವಾರ ಜಿಪಂ ಮಾಜಿ ಅಧ್ಯಕ್ಷ ಉಮೇಶ ಕೋಳಕೂರ ನೇತೃತ್ವದಲ್ಲಿ ರೈತರು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 20599 ರೈತರು ಈ ಯೋಜನೆಯ ಲಾಭ ಪಡೆದಿದ್ದಾರೆ. ಅದರಲ್ಲಿ ತಿಕೋಟಾದ 7648 ರೈತರು ಹಾಗೂ ಬಬಲೇಶ್ವರದ 2845 ಫಲಾನುಭವಿಗಳಿದ್ದಾರೆ. ಕೆಲವು ತಾಂತ್ರಿಕ ತೊಂದರೆಗಳಿಂದಾಗಿ ಇನ್ನೂ 3365 ರೈತರಿಗೆ ಯೋಜನೆಯ ಲಾಭ ಧಕ್ಕಿಲ್ಲ. ಅವರಿಗೂ ಯೋಜನೆಯ ಲಾಭ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಸಮಾಲೋಚಿಸುವುದಾಗಿ ತಿಳಿಸಿದರು.
ಈ ಹಿಂದೆ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಕೇಂದ್ರದಿಂದ 100 ರೂಪಾಯಿ ಅನುದಾನ ಬಿಡುಗಡೆಯಾದರೆ ಕಟ್ಟಕಡೆಯ ಫಲಾನುಭವಿಗೆ ಕೇವಲ 10 ರೂಪಾಯಿ ಮಾತ್ರ ತಲುಪುತ್ತಿತ್ತು. ಉಳಿದ 90 ರೂಪಾಯಿ ಏಜೆಂಟ್‌ರ ಪಾಲಾಗುತ್ತಿತ್ತು. ಆದರೆ, ಇಂದು ಪ್ರಧಾನಿ ನರೇಂದ್ರ ಮೋದಿ ಅವರು ನೇರವಾಗಿ ಫಲಾನುಭವಿಗೆ ಲಾಭ ದೊರಕಿಸುತ್ತಿದ್ದಾರೆ. ಸರ್ಕಾರದ ಯಾವುದೇ ಯೋಜನೆಯ ಹಣ ನೇರವಾಗಿ ಫಲಾನುಭವಿ ಖಾತೆಗೆ ಹೋಗುತ್ತಿದೆ. ಹೀಗಾಗಿ ಮೋದಿ ಅವರನ್ನು ರೈತರು ಕೊಂಡಾಡುತ್ತಾರೆ ಎಂದರು.
ಈ ಹಿಂದೆ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ 100 ರೂಪಾಯಿ ಬಿಡುಗಡೆಯಾದರೆ ಫಲಾನುಭವಿಗೆ ಕೇವಲ 10 ರೂಪಾಯಿ ತಲುಪುತ್ತಿತ್ತು. 90 ರೂಪಾಯಿ ಏಜೆಂಟ್‌ರ ಪಾಲು ಆಗುತ್ತಿತ್ತು. ಈಗ ನೇರವಾಗಿ ತಲುಪುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ನೇರವಾಗಿ ಹಣ ಸಂದಾಯವಾಗುತ್ತಿದೆ. ವಿಜಯಪುರ ಜಿಲ್ಲೆಗೂ ಸಾವಿರಾರು ಕೋಟಿ ರೂಪಾಯಿ ಅನುದಾನ ನರೇಂದ್ರ ಮೋದಿ ಅವರು ಒದಗಿಸಿದ್ದಾರೆ. ಏಳು ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಅನುದಾನ ನೀಡಿದ್ದಾರೆ. ಆದರೂ ನಾನೆಂದೂ ಅಹಂ ತೋರಿಕೊಂಡಿಲ್ಲ. ನನ್ನ 49 ವರ್ಷದ ರಾಜಕಾರಣದಲ್ಲಿಯೇ ಜಿಲ್ಲೆಯ ಜನ ಅಪಾರ ಕೊಡುಗೆ ನೀಡಿದ್ದಾರೆ. ಅವರ ಆಶೀರ್ವಾದದ ಫಲವೇ ಇಷ್ಟೆಲ್ಲ ಅಭಿವೃದ್ಧಿಗೈಯ್ಯಲು ಸಾಧ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಪಂ ಮಾಜಿ ಉಪಾಧ್ಯಕ್ಷ ಉಮೇಶ ಕೋಳಕೂರ ಮಾತನಾಡಿ, ‘ಭೀಕರ ಬರದಲ್ಲಿ ಫಸಲ್ ಬಿಮಾ ಯೋಜನೆ ರೈತರ ಕೈ ಹಿಡಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಗ್ಯಾರಂಟಿ ಯೋಜನೆಗಳನ್ನು ನೀಡದೇ ರೈತರಿಗೆ ನೇರವಾಗಿ ಹಣ ನೀಡುತ್ತಿದ್ದಾರೆ. ಈವರೆಗೂ ಒಂದೇ ಒಂದು ಕಂತು ತಪ್ಪಿಲ್ಲ. ಅವರ ಕನಸಿನ ಕೂಸಾಗಿರುವ ಫಸಲ್ ಬಿಮಾ ಯೋಜನೆಯಿಂದ ರೈತರು ಸಂತೃಪ್ತರಾಗಿದ್ದಾರೆಂಬುದಕ್ಕೆ ಈ ಸನ್ಮಾನ ಸಮಾರಂಭವೇ ಸಾಕ್ಷಿ. ಮುಂಬರುವ ದಿನಗಳಲ್ಲಿಯೂ ತಮ್ಮೆಲ್ಲರ ಸಹಾಯ, ಸಹಕಾರ ಮತ್ತು ಆಶೀರ್ವಾದ ಸದಾ ಇರಲಿ ಎಂದು ಕೋರಿದರು.
ಜಗದ್ಗುರು ಡಾ.ಮಹಾದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಸಂಜಯ ಪಾಟೀಲ ಕನಮಡಿ, ವಿವೇಕಾನಂದ ಡಬ್ಬಿ, ಗುರುಪಾದಪ್ಪ ಗೋಟ್ಯಾಳ, ಭೀಮಸೇನ ಕೋಕರೆ, ಈರಣ್ಣ ಶಿರಮಗೊಂಡ, ಬಸವರಾಜ ಕುರುವಿನಶೆಟ್ಟಿ, ಮಲ್ಲು ಕನ್ನೂರ, ಸಂತೋಷ ತಂಬಾಕಿ, ಮಹೇಶ ಜಂಗಮಶೆಟ್ಟಿ, ಸುರೇಶ ಕಾರಜೋಳ, ಮಹಾದೇವ ಹುಲಿ, ರೈತರಾದ ಚೌಡಪ್ಪ ಬೂದಿಹಾಳ, ಗುರಪ್ಪ ಕೋಟ್ಯಾಳ, ಅರ್ಜುನ್ ಬೀಳೂರ, ಮಾಲಿಂಗ ಮಂಟೂರ, ಶಿವಾನಂದ ದಳವಾಯಿ ಇತರರಿದ್ದರು.