ನಮ್ಮದು ರೈತಪರ ಸರ್ಕಾರ, ಕಣ್ಣೀರೊರೆಸಲು ಸಜ್ಜು ಎಂದ ಸಚಿವ ಎಂ.ಬಿ. ಪಾಟೀಲ

ವಿಜಯಪುರ ಜಿಲ್ಲೆಯ ರೈತರ ಜಮೀನುಗಳಿಗೆ ಸಚಿವ ಎಂ.ಬಿ. ಪಾಟೀಲರು ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು. ಜಿಲ್ಲಾಧಿಕಾರಿ ಡಾ.ಆನಂದ ಕೆ, ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಇತರರಿದ್ದಾರೆ.
ವಿಜಯಪುರ ಜಿಲ್ಲೆಯ ರೈತರ ಜಮೀನುಗಳಿಗೆ ಸಚಿವ ಎಂ.ಬಿ. ಪಾಟೀಲರು ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು. ಜಿಲ್ಲಾಧಿಕಾರಿ ಡಾ.ಆನಂದ ಕೆ, ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ವಿಜಯಪುರ ಜಿಲ್ಲೆಯಲ್ಲಿ ಬರ ಪರಿಶೀಲನೆ
  • ಗರಿಷ್ಠ ಪರಿಹಾರ ಕೊಡಿಸುವ ಭರವಸೆ
  • ವೈಜ್ಞಾನಿಕ ವರದಿ ಸಿದ್ಧಪಡಿಸಲು ಸೂಚನೆ

ವಿಜಯಪುರ: ಸಕಾಲಕ್ಕೆ ಮಳೆಯಾಗದ ಹಿನ್ನೆಲೆ ಎದುರಾಗಿರುವ ಬರ ಪರಿಸ್ಥಿತಿಯನ್ನು ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು, ರೈತರ ಸಂಕಷ್ಟ ಅರ್ಥವಾಗಿದ್ದು ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.

ಭಾನುವಾರ ಜಿಲ್ಲೆಯ ಹಿಟ್ಟಿನಹಳ್ಳಿ, ಮದಭಾವಿ, ಶಿವಣಗಿ, ದೇವರಹಿಪ್ಪರಗಿ, ಬಮ್ಮನಜೋಗಿ ಸೇರಿ ವಿವಿಧೆಡೆ ಬರ ಪರಿಶೀಲನೆ ನಡೆಸಿ ರೈತರೊಂದಿಗೆ ಸಮಾಲೋಚಿಸಿದರು. ರೈತರ ಸಂಕಷ್ಟವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಶೇ.17 ರಷ್ಟು ಬಿತ್ತನೆಯಾಗಿದೆ. ಬಹುತೇಕ ಕಡೆ ಬಿತ್ತನೆಯೇ ಆಗಿಲ್ಲ. ರೈತರ ಈ ನೈಜ ಸ್ಥಿತಿಯನ್ನು ಖುದ್ದು ವೀಕ್ಷಿಸಲಾಗಿದೆ. ಸಮಗ್ರ ಹಾಗೂ ವೈಜ್ಞಾನಿಕ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಮಳೆ ಬರುತ್ತಿತ್ತು. ಆದರೆ ಬಿರುಸಾದ ಗಾಳಿಯಿಂದಾಗಿ ಮಳೆಯಾಗಿಲ್ಲ. ಹೀಗಾಗಿ ಜಿಲ್ಲೆಯಾದ್ಯಂತ ಒಣ ಬರ ಮುಂದುವರಿದಿದೆ. ಜಿಲ್ಲೆಯ ಬರ ಪರಿಸ್ಥಿತಿಯನ್ನು ಮುಂಗಾರು ಆರಂಭದಿಂದಲೇ ನಾನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೆ. ಹೀಗಾಗಿ ನಿರಂತರವಾಗಿ ಬರ ಪರಿಸ್ಥಿತಿ ಪೂರ್ವಭಾವಿ ಸಭೆಗಳನ್ನು ನಡೆಸಿ, ಎಲ್ಲ ಮಾಹಿತಿ ಕಲೆ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಸೂಕ್ತ ಪರಿಹಾರ ಕೊಡಿಸುವುದರಿಂದ ವಿಮುಖನಾಗುವುದಿಲ್ಲ ಎಂದು ಹೇಳಿದರು.

ಕುಡಿಯುವ ನೀರಿಗೆ ತೊಂದರೆಯಿಲ್ಲ

ಜಿಲ್ಲೆಯಲ್ಲಿ ವಾಡಿಕೆಯಷ್ಟು ಆಗಬೇಕಾದ ಮಳೆಯಾಗಿಲ್ಲ. ಹೀಗಾಗಿ ಬೆಳೆಗಳು ಒಣಗುವ ಹಂತದಲ್ಲಿವೆ. ಆದರೆ ಜಿಲ್ಲೆಯಲ್ಲಿ ಜನ-ಜಾನುವಾರುವಿಗೆ ಕುಡಿಯುವ ನೀರಿನ ತೊಂದರೆ ಇಲ್ಲ. ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ ಎಂದರಲ್ಲದೇ, ಜಾನುವಾರವಿಗೆ ಸದ್ಯ ಮೇವಿನ ಕೊರತೆಯಿಲ್ಲ. ಜನ ಗುಳೆ ಹೋಗುವಂತ ಸ್ಥಿತಿಯೂ ಇಲ್ಲವೆಂದರು.

ಬರ ಘೋಷಣೆ ಸಾಧ್ಯತೆ

ಕೇಂದ್ರ ಸರ್ಕಾರ ಆಗಸ್ಟ್ ಅಂತ್ಯದಲ್ಲಿ ಬರ ಪರಿಸ್ಥಿತಿ ಘೋಷಿಸಬಹುದು. ಬರ ಪರಿಸ್ಥಿತಿ ಎದುರಾದಾಗ ಕೇಂದ್ರ ಸರ್ಕಾರ ವಾಡಿಕೆಯಂತೆ ಆಗಸ್ಟ್ ಅಂತ್ಯದಲ್ಲಿ ಅಧಿಕೃತವಾಗಿ ಬರ ಘೋಷಣೆ ಮಾಡುವ ಸಾಧ್ಯತೆಯಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 97 ಸಾವಿರ ರೈತರು ಬೆಳೆ ವಿಮೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಅವರಿಗೆ 235 ಕೋಟಿ ರೂ. ಬೆಳೆ ವಿಮೆ ಮಂಜೂರಾಗಿದೆ. ಈ ವರ್ಷ 2.54 ಲಕ್ಷ ರೈತರು ಬೆಳೆ ವಿಮೆಗೆ ರೈತರು ನೋಂದಾಯಿಸಿಕೊಂಡಿದ್ದಾರೆ ಎಂದು ಸಚಿವರು ತಿಳಿಸಿದರು.

ಅಳಲು ತೋಡಿಕೊಂಡ ಅನ್ನದಾತ

ಮದಭಾವಿ ಗ್ರಾಮದಲ್ಲಿ ತೊಗರಿ ಹಾಗೂ ಹತ್ತಿ ಬೆಳೆಗಳನ್ನು ವೀಕ್ಷಿಸಿದರು. ಗ್ರಾಮದ ರೈತ ಸೋಮನಿಂಗ ಬೀರಪ್ಪ ಹಿರೇಕುರುಬರ ಅವರ ಎರಡು ಎಕರೆ ಮಳೆಯಾಶ್ರಿತ ಜಮೀನಿಗೆ ಸಚಿವರ ಭೇಟಿ ನೀಡಿ, ಬೆಳೆ ವೀಕ್ಷಣೆ ಮಾಡಿ ರೈತರ ಸಮಸ್ಯೆ ಆಲಿಸಿದರು.
ಆರಂಭದಲ್ಲಿ ತೊಗರಿ ಬಿತ್ತನೆ ಮಾಡಿ ಮಳೆ ಕೊರತೆಯಿಂದ ಬೆಳೆ ಒಣಗಿದಾಗ, ಬಳಿಕ ಹತ್ತಿ ಬಿತ್ತನೆ ಮಾಡಿ, ನಂತರ ಕೈಯಿಂದಲೇ ಬೀಜ ಊರಿ ಗೊಬ್ಬರ ಹಾಕಿದರೂ ಬೆಳೆ ಕೈಗೂಡದೆ ಕಷ್ಟದಲ್ಲಿದ್ದ ರೈತನ ನೋವಿಗೆ ಸಚಿವರು ಅತ್ಯಂತ ಆತ್ಮೀಯವಾಗಿ ಸ್ಪಂದಿಸಿದರು.
ಇದೇ ವೇಳೆ ಗ್ರಾಮದ ಇನ್ನೋರ್ವ ರೈತರ ಸೂರ್ಯಕಾಂತಿ ಹೊಲಕ್ಕೂ ಭೇಟಿ ನೀಡಿದ ಸಚಿವರು, ಮಳೆ ಅಭಾವದಿಂದ ಶೇಕಡಾ ನೂರರಷ್ಟು ಬೆಳೆ ಹಾನಿಯಾಗಿರುವುದನ್ನು ಕಂಡು ಕಳವಳ ವ್ಯಕ್ತಪಡಿಸಿದರು.
ನಿಗದಿತ ಅವಧಿಯಲ್ಲಿ ನಾಲ್ಕು ಅಡಿ ಬೆಳೆಯಬೇಕಿದ್ದ ಸೂರ್ಯಕಾಂತಿ ಕೇವಲ ಒಂದು ಅಡಿ ಮಾತ್ರ ಬೆಳೆದು ಸಂಪೂರ್ಣ ಇಳುವರಿ ಕುಸಿದಿರುವುದನ್ನು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಶಾಸಕರಾದ ವಿಠಲ ಕಟಕದೊಂಡ, ಅಶೋಕ ಮನಗೂಳಿ, ಜಿಲ್ಲಾಧಿಕಾರಿ ಡಾ. ಆನಂದ ಕೆ, ಜಿಪಂ ಸಿಇಒ ರಿಷಿ ಆನಂದ, ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಸಿದ್ದರಾಮ ಬರಗಿಮಠ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net