ವಿಜಯಪುರದಲ್ಲಿ ಆನ್‌ಲೈನ್ ಬೆಟ್ಟಿಂಗ್ ಜಾಲ ಪತ್ತೆ , 1,315 ವೆಬ್‌ಸೈಟ್‌ಗಳು ಸಕ್ರಿಯ

ಸೈಬರ್‌ಕ ಕ್ರೈಂ ಪೊಲೀಸರಿಂದ ತನಿಖೆ * ಅಪರಚಿತರ ವಿರುದ್ಧ ಪ್ರಕರಣ ದಾಖಲು
ಆನ್‌ಲೈನ್ ವಂಚನೆ
ಆನ್‌ಲೈನ್ ವಂಚನೆ
Published on: 

ವಿಜಯಪುರ: ಆನ್‌ಲೈನ್ ಬೆಟ್ಟಿಂಗ್, ಮನಿ ಗೇಮಿಂಗ್, ಕ್ಯಾಸಿನೊ, ರಮ್ಮಿ ಸೇರಿ ವಿವಿಧ ಜೂಜಾಟದ ಆ್ಯಪ್‌ಗಳು ಹಾಗೂ ವೆಬ್‌ಸೈಟ್‌ಗಳ ಮೂಲಕ ಸಾರ್ವಜನಿಕರನ್ನು ಆಕರ್ಷಿಸಿ ಹಣಕಾಸಿನ ವಂಚನೆ ನಡೆಸುತ್ತಿರುವ ಜಾಲ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ.

ವಿಜಯಪುರ ಸೈಬರ್ ಕ್ರೈಂ ಪೊಲೀಸರ ಪರಿಶೀಲನೆಯಲ್ಲಿ ಇಂಥದ್ದೊಂದು ಆಘಾತಕಾರಿ ಅಂಶ ಬೆಳಕಿಗೆ ಬಂದಿದ್ದು, ಇಂತಹ ಜೂಜಾಟಕ್ಕೆ ಸಂಬಂಧಿಸಿದ ಒಟ್ಟು 1,315 ಯುಆರ್‌ಎಲ್‌ಗಳು ಸಕ್ರಿಯವಾಗಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಮಾತ್ರವಲ್ಲ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೇಲ್ವಿಚಾರಣೆ ಹಾಗೂ ಸಾರ್ವಜನಿಕರಲ್ಲಿ ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸುವ ಸಂದರ್ಭದಲ್ಲಿ ಪೊಲೀಸರಿಗೆ ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟದ ಆ್ಯಪ್‌ಗಳ ಮೂಲಕ ಯುವಕರನ್ನು ವಂಚಿಸುತ್ತಿರುವ ಕುರಿತು ಗುಪ್ತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ನ.16ರಂದು ಸೈಬರ್ ಕ್ರೈಂ ಪೊಲೀಸ್ ಉಪಾಧೀಕ್ಷಕರು, ಮುಕ್ತ ಅಂತರ್ಜಾಲದಲ್ಲಿ ಲಭ್ಯವಿರುವ ವೆಬ್‌ಸೈಟ್‌ಗಳು, ಯುಆರ್‌ಎಲ್‌ಗಳು, ಮೊಬೈಲ್ ಅಪ್ಲಿಕೇಶನ್‌ಗಳು ಹಾಗೂ ಮೆಸೆಂಜರ್ ವೇದಿಕೆಗಳನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸುವಂತೆ ಎಎಸ್‌ಐ ವೈ.ಎಸ್. ಜಮಖಂಡಿ ಮತ್ತು ಸಿಬ್ಬಂದಿಗೆ ಸೂಚಿಸಿದ್ದರು.

ಅದರಂತೆ ಪೊಲೀಸರು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ), ಓಪನ್ ಸೋರ್ಸ್ ಇಂಟೆಲಿಜೆನ್ಸ್ ಹಾಗೂ ವಾಟ್ಸ್‌ಆ್ಯಪ್, ಟೆಲಿಗ್ರಾಂ, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್ ಸೇರಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಕೀ-ವರ್ಡ್‌ಗಳನ್ನು ಬಳಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆನ್‌ಲೈನ್ ಬೆಟ್ಟಿಂಗ್ ಹಾಗೂ ಜೂಜಾಟಕ್ಕೆ ಸಂಬಂಧಿಸಿದ 1,315 ಯುಆರ್‌ಎಲ್‌ಗಳು ಸಕ್ರಿಯವಾಗಿರುವುದು ಪತ್ತೆಯಾಗಿದೆ.

ಬೋನಸ್ ಹೆಸರಿನಲ್ಲಿ ಹಣದ ಬಲೆ

ಆನ್‌ಲೈನ್ ಗೇಮಿಂಗ್ ಹೆಸರಿನಲ್ಲಿ ಕಾರ್ಯನಿರ್ವಹಿಸುವ ಕೆಲವು ವೇದಿಕೆಗಳು ಆರಂಭದಲ್ಲಿ ಉಚಿತ ಬೋನಸ್ ಹಾಗೂ ಹೆಚ್ಚಿನ ಲಾಭದ ಆಮಿಷವೊಡ್ಡಿ ಯುವಕರನ್ನು ಸೆಳೆಯುತ್ತವೆ. ಬಳಿಕ ಯುಪಿಐ ಮತ್ತು ಬ್ಯಾಂಕ್ ಖಾತೆಗಳ ಮೂಲಕ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿ, ಹೂಡಿಕೆ ಮಾಡಿದ ಹಣವನ್ನು ಮರಳಿಸದೆ ವಂಚಿಸುತ್ತಿರುವ ಅಂಶಗಳು ಪರಿಶೀಲನೆಯಲ್ಲಿ ಕಂಡುಬಂದಿವೆ.

ಇಂತಹ ಚಟುವಟಿಕೆಗಳಿಂದ ಅನೇಕ ಯುವಕರು ಹಾಗೂ ಕುಟುಂಬಗಳು ಆರ್ಥಿಕ ನಷ್ಟಕ್ಕೆ ಒಳಗಾಗುವುದರ ಜತೆಗೆ ಸಾಲದ ಸುಳಿಯಲ್ಲಿ ಸಿಲುಕಿ ಮಾನಸಿಕ ಒತ್ತಡಕ್ಕೂ ಒಳಗಾಗುತ್ತಿದ್ದಾರೆ ಎಂದು ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ.

ವಹಿವಾಟಿನ ಜಾಡು ಪತ್ತೆಗೆ ತನಿಖೆ

ಪತ್ತೆಯಾಗಿರುವ ವೆಬ್‌ಸೈಟ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳನ್ನು ಸೃಷ್ಟಿಸಿ ನಿರ್ವಹಿಸುತ್ತಿರುವ ಮಾಲೀಕರು, ನಿರ್ವಾಹಕರು, ವ್ಯಕ್ತಿಗಳು ಹಾಗೂ ಸಂಸ್ಥೆಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಪೊಲೀಸರು ಕಾರ್ಯೋನ್ಮುಖರಾಗಿದ್ದಾರೆ. ಈ ಜಾಲಕ್ಕೆ ಸಂಬಂಧಿಸಿದ ಬ್ಯಾಂಕ್ ಖಾತೆಗಳು, ಯುಪಿಐ ಐಡಿಗಳು, ಪಾವತಿ ಗೇಟ್‌ವೇಗಳು, ಡೊಮೇನ್ ನೋಂದಣಿದಾರರು ಹಾಗೂ ಇತರ ಸಂಬಂಧಪಟ್ಟವರನ್ನು ಗುರುತಿಸಿ ಹಣಕಾಸಿನ ವಹಿವಾಟಿನ ಜಾಡು ಪತ್ತೆಹಚ್ಚಲು ಸಮಗ್ರ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.