ರಾಜ್ಯದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ನಿರ್ಮಾಣ, ಕಾಂಗ್ರೆಸ್ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿ

ಕಾಂಗ್ರೆಸ್ ಸರ್ಕಾರದ ವೈಫಲ್ಯ ಅನಾವರಣ * ಖಜಾನೆ ಸಂಪೂರ್ಣ ಖಾಲಿ
ಬಿ.ವೈ. ವಿಜಯೇಂದ್ರ
ಬಿ.ವೈ. ವಿಜಯೇಂದ್ರ
Published on: 

ವಿಜಯಪುರ: ‘ರಾಜ್ಯದ ಖಜಾನೆ ಖಾಲಿಯಾಗಿದೆ, ಆರ್ಥಿಕ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ, ಗ್ಯಾರಂಟಿ ಯೋಜನೆ ನಿಭಾಯಿಸಲಾಗುತ್ತಿಲ್ಲ, ರೈತರ ಸಂಕಷ್ಟ ಆಲಿಸಲಾಗುತ್ತಿಲ್ಲ, ನೌಕರರ ಸಂಬಳ ನೀಡಲಾಗದ ಸ್ಥಿತಿ ನಿರ್ಮಾಣವಾಗಿದ್ದು, ಇದನ್ನು ಮರೆ ಮಾಚಲು ಸಿಎಂ ಡಿ.ಕೆ. ಶಿವಕುಮಾರ ಅವರು ಸಂವಿಧಾನಿಕ ಸಂಸ್ಥೆಗಳ ಮೇಲೆ ಆರೋಪ ಮಾಡುತ್ತ, ರಾಹುಲ್ ಗಾಂಧಿ ಮೆಚ್ಚಿಸಲು ಬಿಜೆಪಿ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.

‘ವಿಕಲ ಚೇತನರ ಪಿಂಚಣಿ ಹಾಗೂ ನಿವೃತ್ತಿ ಸೌಲಭ್ಯ ನೀಡಲಾಗುತ್ತಿಲ್ಲ. ಹಾಲಿನ ಪ್ರೋತ್ಸಾಹ ಧನ ನಿಲ್ಲಿಸಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ದಕ್ಷಿಣ ಕನ್ನಡದಲ್ಲಿ 32 ಸಾವಿರ ಕೋಟಿ ರೂ.ಯೋಜನೆ ಘೋಷಣೆ ಮಾಡಿದ 24 ಗಂಟೆಯಲ್ಲಿಯೇ ಆರ್ಥಿಕ ಇಲಾಖೆ ಪತ್ರ ಬರೆದು ರಾಜ್ಯದ ಖಜಾನೆ ಖಾಲಿಯಾಗಿದೆ. ಹೀಗಾಗಿ ಯಾವುದೇ ಬಿಟ್ಟಿ ಭಾಗ್ಯ ಘೋಷಿಸಬೇಡಿ ಎಂದಿತು. ನೌಕರರಿಗೆ ಸಂಬಳ ಕೊಡಲು ತಡವಾಗುತ್ತಿದೆ. ಕೆಎಸ್‌ಆರ್‌ಟಿಸಿಗೆ ಕೊಡಬೇಕಾದ ಬಾಕಿ ಹಣ ಕೊಡುತ್ತಿಲ್ಲ. ರಾಜ್ಯದ ಒಟ್ಟಾರೆ ಸಾಲ 9.5 ಲಕ್ಷ ಕೋಟಿ ತಲುಪಿದೆ. ಗ್ಯಾರಂಟಿಗೆ ಹಣ ಕ್ರೋಢಿಕರಿಸಲಾಗದೇ ಅಬಕಾರಿ ಇಲಾಖೆಗೆ ಟಾರ್ಗೆಟ್ ನೀಡಿ ಗಲ್ಲಿ ಗಲ್ಲಿಗಳಲ್ಲಿ ಹೆಂಡದ ಅಂಗಡಿ ನಿರ್ಮಿಸಿ ಕರ್ನಾಟಕವನ್ನು ಹೆಂಡದ ರಾಜ್ಯವನ್ನಾಗಿಸುತ್ತಿದೆ. ಉಡ್ತಾಪಂಜಾಬ್ ಮಾಡುತ್ತಿದೆ. ಪ್ರಿಯಾಂಕ್ ಖರ್ಗೆ ಗೃಹ ಸಚಿವರಾದ ಮೇಲೆ 15 ದಲಿತರ ಕೊಲೆ ಪ್ರಕರಣ ಆಗಿವೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು.

‘ರಾಜ್ಯದಲ್ಲಿ ಹೊಸ ಯೋಜನೆಗಳಿಲ್ಲ, ಶಾಸಕ ಕ್ಷೇತ್ರಗಳಿಗೆ ಅಭಿವೃದ್ಧಿಗೆ ಹಣ ನೀಡಲಾಗುತ್ತಿಲ್ಲ. ಅಧಿಕಾರಕ್ಕೆ ಬಂದ ವರ್ಷದಲ್ಲಿ 2.5 ಲಕ್ಷ ಹುದ್ದೆ ಭರ್ತಿ ಮಾಡಿಕೊಳ್ಳುವುದಾಗಿ ಹೇಳಿ ಈವರೆಗೆ 1 ಸಾವಿರ ಹುದ್ದೆಯನ್ನೂ ಭರ್ತಿ ಮಾಡದೇ ರಾಜ್ಯದ ಯುವ ಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿದೆ. ಯುವ ಜನ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.

ಉದ್ಯಮಗಳ ಮೇಲೆ ಕಾಳಜಿ; ರೈತರ ನಿರ್ಲಕ್ಷೃ:

‘ಸಿಎಂ ಡಿ.ಕೆ. ಶಿವಕುಮಾರ ಅವರಿಗೆ ಉದ್ಯಮ ಹಾಗೂ ಟೌನ್‌ಶಿಪ್‌ಗಳ ಮೇಲಿರುವ ಕಾಳಜಿ ರೈತರ ಮೇಲಿಲ್ಲ. ಬರ ಆವರಿಸಿದ್ದರೂ ಹೆಲಿಕಾಪ್ಟರ್‌ನಲ್ಲಿ ಬಂದು ಹೋಗುತ್ತಾರೆ’ ಎಂದು ಲೇವಡಿ ಮಾಡಿದ ವಿಜಯೇಂದ್ರ ಅವರು, ‘ಬರದ ಹಿನ್ನೆಲೆ 850 ಸಾವಿರ ಕೋಟಿ ಬಾಕಿ ಇರಿಸಿಕೊಂಡಿರುವ ಹೈನುಗಾರಿಕೆ ಸಹಾಯ ಧನ ಬಿಡುಗಡೆಗೊಳಿಸಬೇಕು. ತಾತ್ಕಾಲಿಕವಾಗಿಯಾದರೂ 5 ತಿಂಗಳ ಮಟ್ಟಿಗೆದಾರೂ ಹೈನುಗಾರಿಕೆಗೆ ಹೆಚ್ಚುವರಿಯಾಗಿ ಸಹಾಯಧನ ನೀಡಲು ಆಗ್ರಹಿಸಿದರೂ ಸಿಎಂಗೆ ಚಿಂತೆಯಿಲ್ಲ. ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಕಂಡು ಬರುತ್ತಿದೆ. ಬಿಕ್ಷೆ ಕೊಟ್ಟಂಗೆ ರೈತರ ಕುಟುಂಬಕ್ಕೆ 2500 ರೂಪಾಯಿ ಕೊಟ್ಟಿದ್ದಾರೆ. ಈ ಕೂಡಲೇ ರೂ. 50 ಸಾವಿರ ರೂಪಾಯಿ ಪರಿಹಾರ ಘೋಷಿಸಬೇಕು’ ಎಂದರು.

‘ಡಿಸಿಸಿ ಬ್ಯಾಂಕ್‌ನಲ್ಲಿ ರೈತರಿಗೆ ಸಾಲ ಪಾವತಿಸಲು ಪತ್ರ ಬರೆಯಲಾಗುತ್ತಿದೆ. ಸಿಎಂ ಬಲವಂತವಾಗಿ ಸಾಲ ವಸೂಲಿ ಮಾಡಬಾರದೆಂದು ಹೇಳಿದರೂ ನೋಟಿಸ್ ನೀಡಲಾಗುತ್ತಿದೆ ಎಂದರೆ ಸಿಎಂ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ ಎಂಬುದು ಜಗಜ್ಜಾಹೀರಾಗಿದೆ’ ಎಂದರು.

ಸಂಸದ ರಮೇಶ ಜಿಗಜಿಣಗಿ, ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ, ಮುಖಂಡರಾದ ವಿಜುಗೌಡ ಪಾಟೀಲ, ಅರುಣ ಶಹಾಪುರ, ಸಂಜೀವ ಐಹೊಳಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net