ಕಾಂಗ್ರೆಸ್ ಕಣ್ಣಿಗೆ ಕಾಮಾಲೆ ಆವರಿಸಿದೆ, ಮುಖ್ಯ ಚುನಾವಣೆ ಆಯುಕ್ತರ ಮೇಲಿನ ಟೀಕೆಗೆ ಸಂಸದ ರಮೇಶ ಜಿಗಜಿಣಗಿ ತಿರುಗೇಟು

ಎಸ್‌ಐಆರ್ ಕುರಿತು ಅನವಶ್ಯಕ ಗೊಂದಲ * ಕಾಂಗ್ರೆಸ್ ಕುತಂತ್ರ ಫಲಿಸಲ್ಲ
RAMESH JIGAJINAGI
ರಮೇಶ ಜಿಗಜಿಣಗಿ, ಸಂಸದರು
Published on: 

ವಿಜಯಪುರ: ‘ಕಾಮಾಲೆ ಕಣ್ಣಿಗೆ ಜಗವೆಲ್ಲ ಹಳದಿ ಎಂಬಂತೆ ಕಾಂಗ್ರೆಸ್ ಕಣ್ಣಿಗೆ ಚುನಾವಣೆ ಆಯೋಗದ ಬಗ್ಗೆ ಯಾವಾಗಲೂ ಹಳದಿಯಾಗಿಯೇ ಕಾಣುತ್ತಿದೆ. ಅಂತೆಯೇ ಆಯೋಗದ ಪ್ರತಿ ನಡೆಯನ್ನೂ ಸಂಶಯಾಸ್ಪದವಾಗಿ ನೋಡುತ್ತಿದೆಯಲ್ಲದೇ ಆಧಾರ ರಹಿತ ಆರೋಪ, ಅಸಂಬದ್ಧ ಹೇಳಿಕೆ, ಅಸಂವಿಧಾನಿಕ ನಡೆಯನ್ನು ಪ್ರದರ್ಶಿಸುತ್ತಲೇ ಬಂದಿದ್ದು, ಇದೀಗ ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶಕುಮಾರ ವಿರುದ್ಧದ ಪ್ರತಿಭಟನೆಯೂ ಆ ಸಾಲಿಗೆ ಸೇರ್ಪಡೆಯಾಗಿದೆ’ ಎಂದು ಸಂಸದ ರಮೇಶ ಜಿಗಜಿಣಗಿ ಲೇವಡಿ ಮಾಡಿದ್ದಾರೆ.

‘ಚುನಾವಣೆ ಆಯೋಗದಲ್ಲಿನ ಅಭಿಪ್ರಾಯ ಭೇದವನ್ನೇ ಅಪರಾಧ ಎಂಬಂತೆ ಬಿಂಬಿಸುವ ಕಾಂಗ್ರೆಸ್ ಮನಃಸ್ಥಿತಿ ತೀರ ಕೆಳಮಟ್ಟದ್ದಾಗಿದೆ. ಅದೊಂದು ಹತಾಶ ಮನಃಸ್ಥಿತಿ. ಬಿಜೆಪಿಯನ್ನು ಎದುರಿಸಲಾಗದ ಅಸಹಾಯಕ ಸ್ಥಿತಿ. ವಾಮ ಮಾರ್ಗದಲ್ಲಿ ಅಧಿಕಾರಕ್ಕೇರುವ ಹುನ್ನಾರ. ಚುನಾವಣೆ ಆಯೋಗದ ಮೇಲಿರುವ ಜನರ ನಂಬಿಕೆಗೆ ಮಸಿ ಬಳಿಯುವ ಯತ್ನ. ಸಂವಿಧಾನದ ಆಶಯಗಳನ್ನು, ಮೌಲ್ಯಗಳನ್ನು ಬುಡಮೇಲು ಮಾಡುವ ಕುತಂತ್ರ’ ಎಂದು ಬಣ್ಣಿಸಿದ್ದಾರೆ.

‘ಸ್ವಾತಂತ್ರಾೃನಂತರದ ಕಾಲದಿಂದಲೂ ದೇಶದ ಸಂವಿಧಾನದ ವಿಚಾರದಲ್ಲಾಗಲಿ, ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳ ಬಗ್ಗೆಯಾಗಲಿ, ಚುನಾವಣೆ ಆಯೋಗದ ಕಾರ್ಯವೈಖರಿ ಬಗ್ಗೆಯಾಗಲಿ ಈ ಕಾಂಗ್ರೆಸ್‌ಗೆ ನಂಬಿಕೆಯೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಸಂವಿಧಾನದ ಮೇಲೆಯೇ ಇವರಿಗೆ ನಂಬಿಕೆ ಇಲ್ಲವೆಂಬುದಕ್ಕೆ ತುರ್ತು ಪರಿಸ್ಥಿತಿಯ ಹೇರಿಕೆಯೇ ಸಾಕ್ಷಿ’ ಎಂದವರು ಕಿಡಿ ಕಾರಿದ್ದಾರೆ.

‘ದೇಶದ ಪ್ರಜಾಪ್ರಭುತ್ವದ ಪ್ರಮುಖ ಸಂವಿಧಾನಾತ್ಮಕ ಸಂಸ್ಥೆಯಾಗಿರುವ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಮೊದಲು ಕಾಂಗ್ರೆಸ್ ಪಕ್ಷ ತನ್ನದೇ ಹಿಂದಿನ ನಿಲುವುಗಳು ಮತ್ತು ದಾಖಲೆಗಳನ್ನು ಒಮ್ಮೆ ಪರಿಶೀಲಿಸಿಕೊಳ್ಳಬೇಕು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಯುಪಿಎ ಸರ್ಕಾರ ಚುನಾವಣೆ ಆಯೋಗವನ್ನು, ನ್ಯಾಯಾಂಗ ವ್ಯವಸ್ಥೆಯನ್ನು ಹೇಗೆಲ್ಲ ಬಳಕೆ ಮಾಡಿಕೊಂಡಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ಮಾಧ್ಯಮಗಳನ್ನೇ ಹತ್ತಿಕ್ಕಿತು. ಅಭ್ಯವ್ಯಕ್ತಿ ಸ್ವಾತಂತ್ರೃವನ್ನೇ ಕಸಿದುಕೊಂಡಿತ್ತು. ಅಂದು ತಾನು ಮಾಡಿದ ಕುಕೃತ್ಯಗಳ ಭ್ರಮೆಯಿಂದ ಇನ್ನೂ ಕಾಂಗ್ರೆಸ್ಸಿಗರು ಹೊರಬಂದಂತೆ ಕಾಣುತ್ತಿಲ್ಲ. ಕಾಮಾಲೆ ಕಣ್ಣು ಎಂದಿದ್ದು ಇದೇ ಕಾರಣಕ್ಕೆ’ ಎಂದು ಜಿಗಜಿಣಗಿ ಹರಿಹಾಯಿದ್ದಾರೆ.

ಚುನಾವಣಾ ಆಯೋಗದ ಇಬ್ಬರು ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ ಹತ್ತು ತಿಂಗಳಲ್ಲಿ ವಿವಿಧ ಚುನಾವಣಾ ಪಟ್ಟಿಗಳು ಮತ್ತು ಎಸ್‌ಐಆರ್‌ಗೆ ಸಂಬಂಧಿಸಿದ ಕೆಲವು ನಿರ್ಧಾರಗಳ ಬಗ್ಗೆ ಕನಿಷ್ಠ 14 ಬಾರಿ ಆಕ್ಷೇಪ ಅಥವಾ ಪ್ರಶ್ನೆಗಳನ್ನು ದಾಖಲಿಸಿದ್ದರು ಎಂಬ ವರದಿ ಸೆ. 23ರಂದು ಪ್ರಕಟವಾಗಿದೆ. ಆದರೆ ಇಲ್ಲಿ ಒಂದು ಪ್ರಮುಖ ಸಂಗತಿಯನ್ನು ಮರೆಯಬಾರದು. ಚುನಾವಣಾ ಆಯೋಗವು ಈ ವರದಿಯ ಅರ್ಥವನ್ನು ಅಂತಿಮ ನಿರ್ಧಾರಗಳಲ್ಲಿ ಭಿನ್ನಾಭಿಪ್ರಾಯವಿತ್ತು ಎಂದು ಒಪ್ಪಿಕೊಂಡಿಲ್ಲ. ಆಯೋಗದ ಪ್ರಕಾರ, ಅಧಿಕಾರಿಗಳು ಹಾಗೂ ಆಯುಕ್ತರು ಕರಡು ಹಂತದಲ್ಲಿ ಪ್ರಶ್ನೆ, ಸಲಹೆ ಅಥವಾ ಆಕ್ಷೇಪಣೆಗಳನ್ನು ವ್ಯಕ್ತಪಡಿಸುವುದು ಸಂಸ್ಥೆಯ ಸಹಜ ಕಾರ್ಯವಿಧಾನದ ಭಾಗವಾಗಿದ್ದು, ಅಂತಿಮ ನಿರ್ಧಾರಗಳಿಗೆ ಮೂವರು ಆಯುಕ್ತರ ಅನುಮೋದನೆಯಿತ್ತು. ಆದ್ದರಿಂದ, ಇಬ್ಬರು ಆಯುಕ್ತರು ಆಕ್ಷೇಪಿಸಿದರು ಎಂಬ ಸಂಗತಿಯನ್ನು ಮಾತ್ರ ಆಧಾರ ಮಾಡಿಕೊಂಡು ಮುಖ್ಯ ಚುನಾವಣಾ ಆಯುಕ್ತರು ಚುನಾವಣೆಯನ್ನೇ ಅಕ್ರಮವಾಗಿ ನಡೆಸಿದರು’ ಎಂಬ ಅಂತಿಮ ತೀರ್ಮಾನಕ್ಕೆ ಬರುವುದು ತಾರ್ಕಿಕವಲ್ಲ’ ಎಂದಿದ್ದಾರೆ.

‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆರೋಪಗಳಿಗೆ ಆಯೋಗ ಸ್ಪಷ್ಟನೆ ನೀಡಿದೆ. ಚುನಾವಣಾ ಆಯೋಗದ ಪ್ರಕ್ರಿಯೆಯಲ್ಲಿ ದೋಷವಿದ್ದರೆ ಕಾನೂನುಬದ್ಧ ಮಾರ್ಗಗಳಿವೆ. ನ್ಯಾಯಾಲಯಗಳಿವೆ, ಚುನಾವಣಾ ಅರ್ಜಿಯ ವ್ಯವಸ್ಥೆಯಿದೆ, ಚುನಾವಣಾ ಆಯೋಗದ ಮುಂದೆ ಆಕ್ಷೇಪ ಸಲ್ಲಿಸುವ ಅವಕಾಶವಿದೆ. ಈ ಎಲ್ಲ ಮಾರ್ಗಗಳನ್ನು ಬಿಟ್ಟು ಚುನಾವಣಾ ಸಂಸ್ಥೆಯ ಮೇಲೆಯೇ ಸಾಮಾನ್ಯ ಆರೋಪಗಳನ್ನು ಮಾಡುವುದರಿಂದ ಮತದಾರರಲ್ಲಿ ಅನಗತ್ಯ ಅನುಮಾನ ಮೂಡಬಹುದು. ಆಯೋಗ ಸ್ವತಂತ್ರವಾಗಿ ಕಾರ್ಯರ್ನಿವಹಿಸಲು ಯಾವುದೇ ಅಡ್ಡಿಯನ್ನುಂಟು ಮಾಡಬಾರದು’ ಎಂದು ಸಂಸದ ರಮೇಶ ಜಿಗಜಿಣಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net