ಪ್ರಧಾನಿ ಮೋದಿ ಜನ್ಮ ದಿನದ ಹಿನ್ನೆಲೆ, ಬಿಜೆಪಿಯಿಂದ ಜ್ಯೋತಿ ಯಾತ್ರೆ, ಸೇವಾ ಸಂಕಲ್ಪ ಅಭಿಯಾನ ಯಶಸ್ವಿ

ಎಲ್‌ಇಡಿ ಪರದೆ ಬಳಸಿ ವಿಡಿಯೋ ಪ್ರದರ್ಶನ * ಸಂದೇಶ ಆಲಿಸಿದ ಸಾವಿರಾರು ಕಾರ್ಯಕರ್ತರು
ವಿಜಯಪುರ ನಗರದಲ್ಲಿ ಹಮ್ಮಿಕೊಂಡಿದ್ದ ಸೇವಾ ಸಂಕಲ್ಪ ಅಭಿಯಾನ ಹಾಗೂ ವಿಕಸಿತ ಭಾರತ ಸಂಕಲ್ಪ ಸಭೆಯನ್ನು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಶಾಸಕರಾದ ರಮೇಶ ಭೂಸನೂರ ಇತರರಿದ್ದಾರೆ.
ವಿಜಯಪುರ ನಗರದಲ್ಲಿ ಹಮ್ಮಿಕೊಂಡಿದ್ದ ಸೇವಾ ಸಂಕಲ್ಪ ಅಭಿಯಾನ ಹಾಗೂ ವಿಕಸಿತ ಭಾರತ ಸಂಕಲ್ಪ ಸಭೆಯನ್ನು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಶಾಸಕರಾದ ರಮೇಶ ಭೂಸನೂರ ಇತರರಿದ್ದಾರೆ.
Published on: 

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ದೇಶಾದ್ಯಂತ ನಡೆಯುತ್ತಿರುವ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಜ್ಯೋತಿ ಯಾತ್ರೆ ಅತ್ಯಂತ ಯಶಸ್ವಿಯಾಗಿ ನೆರವೇರಿತು.

ನಗರದ ನಾಗೂರ ಕಾಲೇಜ್ ಬಳಿ ಇರುವ ವೃತ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಅಭಿನಂದಿಸುವ ನಿಟ್ಟಿನಲ್ಲಿ ಸಂಘಟಿಸಲಾಗಿದ್ದ ಸೇವಾ ಸಂಕಲ್ಪ ಅಭಿಯಾನ ಹಾಗೂ ವಿಕಸಿತ ಭಾರತ ಸಂಕಲ್ಪ ಸಭೆ ಅರ್ಥಪೂರ್ಣವಾಗಿ ನಡೆಯಿತು.

ಕೆಲವು ದಿನಗಳ ಹಿಂದಷ್ಟೇ ಇಹಲೋಕ ತ್ಯಜಿಸಿದ್ದ ಭಾರತೀಯ ಜನತಾ ಪಕ್ಷದ ಕಟ್ಟಾ ಕಾರ್ಯಕರ್ತ ಬಸವರಾಜ ಕುಂಬಾರ ಅವರ ಹೆಸರನ್ನು ವೇದಿಕೆಗೆ ಇರಿಸಿ ಗೌರವಿಸಲಾಯಿತು. ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನೀತಿನ್ ನಬೀನ್ ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ವಿಡಿಯೋಗಳನ್ನು ಬೃಹತ್ ಎಲ್‌ಇಡಿ ಪರದೆಯ ಮೂಲಕ ಪ್ರದರ್ಶಿಸಲಾಯಿತು.

ಈ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿ, ಭಾರತದ ಸಮಕಾಲೀನ ರಾಜಕೀಯದಲ್ಲಿ ದೀರ್ಘಕಾಲದ ಸಾರ್ವಜನಿಕ ಸೇವೆ ಮತ್ತು ಸಂಘಟನಾ ಅನುಭವದ ಮೂಲಕ ರಾಷ್ಟ್ರಮಟ್ಟದ ನಾಯಕತ್ವಕ್ಕೆ ಬೆಳೆದ ಪ್ರಮುಖ ನಾಯಕರಲ್ಲಿ ನರೇಂದ್ರ ಮೋದಿ ಅವರೂ ಒಬ್ಬರು. ಸಮರ್ಥ ಹಾಗೂ ಪಾರದರ್ಶಕ, ಪರಿಶುದ್ಧ ಆಡಳಿತಕ್ಕೆ ಇನ್ನೊಂದು ಹೆಸರಾಗಿರುವ ಮೋದಿಜಿ ಅವರ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕಿದೆ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಕೆಲಸ ಆರಂಭಿಸಿ, ಸಂಘಟನಾ ಕಾರ್ಯಕರ್ತರಾಗಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿ, ನಂತರ 80 ರ ದಶಕದಲ್ಲಿ ಬಿಜೆಪಿ ಸಂಘಟನಾ ಕಾರ್ಯದಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದರು. ಗುಜರಾತ್ ಮುಖ್ಯಮಂತ್ರಿಯಾಗಿ ಉದ್ಯೋಗ ಕ್ರಾಂತಿಯನ್ನೇ ಸೃಷ್ಟಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ದೇಶದ ಪ್ರಧಾನಿಯಾಗಿ ಕಪ್ಪು ಹಣದ ವಿರುದ್ಧ ಸಮರಕ್ಕಾಗಿ ನೋಟ ಬ್ಯಾನ್, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ಧತಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಹೀಗೆ ಸಾಧನೆಗಳ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತದೆ ಎಂದರು.

ಗುಜರಾತ್‌ನ ಮುಖ್ಯಮಂತ್ರಿಯಿಂದ ಭಾರತದ ಪ್ರಧಾನಮಂತ್ರಿಯವರೆಗೆ ಸಾಗಿದ ಪ್ರಧಾನಿ ಮೋದಿ ಅವರ ರಾಜಕೀಯ ಪಯಣದಲ್ಲಿ ಸಂಘಟನಾ ಅನುಭವ, ಆಡಳಿತದ ಜವಾಬ್ದಾರಿ ಮತ್ತು ರಾಷ್ಟ್ರಮಟ್ಟದ ನಾಯಕತ್ವ ಪ್ರಮುಖ ಹಂತಗಳಾಗಿವೆ ಎಂದರು.

ವೇದಿಕೆ ಸ್ಥಳದಿಂದ ಆರಂಭಗೊಂಡ ಸೇವಾ ಜ್ಯೋತಿ ಯಾತ್ರೆ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು.

ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ಮುಖಂಡರಾದ ವಿಜುಗೌಡ ಪಾಟೀಲ, ಉಮೇಶ ಕಾರಜೋಳ, ಸಂಜೀವ ಐಹೊಳಿ, ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ, ಉಮೇಶ ಕೋಳಕೂರ, ವಿವೇಕಾನಂದ ಡಬ್ಬಿ, ಮೇಯರ್ ಎಂ.ಎಸ್. ಕರಡಿ, ಉಪಮೇಯರ್ ಸುಮಿತ್ರಾ ಜಾಧವ, ಡಾ.ಬಾಬು ನಾಗೂರ, ಮಳುಗೌಡ ಪಾಟೀಲ, ಡಾ.ಸುರೇಶ ಬಿರಾದಾರ, ಸಾಬು ಮಾಶ್ಯಾಳ, ಸ್ವಪ್ನಾ ಕಣಮುಚನಾಳ, ಭಾರತಿ ಭುಯ್ಯರ, ಅನಿಲ ಜಮಾದಾರ, ಗೋಪಾಲ ಘಟಕಾಂಬಳೆ, ಚಿದಾನಂದ ಚಲವಾದಿ, ಮಹೇಂದ್ರ ನಾಯಕ, ಪರಶುರಾಮ ರಜಪೂತ, ಉಮೇಶ ವಂದಾಲ, ರಾಹುಲ್ ಜಾಧವ, ಭರತ್ ಕೋಳಿ, ವಿಜಯ ಜೋಶಿ, ಭೀಮಾಶಂಕರ ಹದನೂರು, ಶಿವಾನಂದ ಭುಯ್ಯರ, ರವಿ ವಗ್ಗಿ ಇತರರಿದ್ದರು. ಕೃಷ್ಣಾ ಗುನ್ನಾಳಕರ ಸ್ವಾಗತಿಸಿದರು. ಈರಣ್ಣ ರಾವೂರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net