

ಹೊಸಪೇಟೆ: ತಮ್ಮ ಹಲವು ವರ್ಷಗಳ ನ್ಯಾಯಯುತ ಬೇಡಿಕೆಗಳು ಮತ್ತು ಬಾಕಿ ಸೌಲಭ್ಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕಿನ ಕಮಲಾಪುರ ಪುರಸಭೆಯ ಪೌರಾಕಾರ್ಮಿಕರು ಮಂಗಳವಾರ ಬೆಳಗ್ಗೆ ಪಟ್ಟಣದ ಸ್ವಚ್ಛತಾ ಕಾರ್ಯವನ್ನು ಸ್ಥಗಿತಗೊಳಿಸಿ ದಿಢೀರ್ ಪ್ರತಿಭಟನೆ ನಡೆಸಿದರು.
ಪಟ್ಟಣವನ್ನು ಸ್ವಚ್ಛವಾಗಿಡುವಲ್ಲಿ ಹಗಲಿರುಳು ಶ್ರಮಿಸುವ ಪೌರಾಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳೇ ಮರೀಚಿಕೆಯಾಗಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ತಿಂಗಳಿಗೆ 2 ಸಾವಿರ ರೂಪಾಯಿಯಂತೆ ಕಳೆದ ಏಳು ತಿಂಗಳಿನಿಂದ ಬರಬೇಕಿದ್ದ ಸಂಕಷ್ಟ ಭತ್ಯೆ ಇನ್ನೂ ಕೈಸೇರಿಲ್ಲ. ಇದರ ಜತೆಗೆ ಕಳೆದ ನಾಲ್ಕು ವರ್ಷಗಳಿಂದ ಉಪಹಾರದ ವ್ಯವಸ್ಥೆಯನ್ನೂ ನಿಲ್ಲಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಕಾರ್ಮಿಕರಿಗೆ ಸಮವಸ್ತ್ರವನ್ನೂ ನೀಡಿಲ್ಲ ಎಂದು ಅಳಲು ತೋಡಿಕೊಂಡರು.
ಪಟ್ಟಣದಲ್ಲಿ ಕಳೆದ ಎರಡು ವರ್ಷಗಳಿಂದ ಸಾರ್ವಜನಿಕ ಶೌಚಗೃಹಗಳ ನಿರ್ವಹಣೆಗೆ ಟೆಂಡರ್ ಕರೆಯದ ಕಾರಣ, ಶೌಚಗೃಹಗಳ ಸ್ವಚ್ಛತೆಯ ಹೆಚ್ಚುವರಿ ಹೊರೆಯನ್ನು ಪೌರಾಕಾರ್ಮಿಕರ ಮೇಲೆಯೇ ಹಾಕಲಾಗುತ್ತಿದೆ. ಇದು ಕಾರ್ಮಿಕರ ಆರೋಗ್ಯ ಮತ್ತು ದೈಹಿಕ ಶ್ರಮದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಪ್ರತಿಭಟನಾನಿರತರು ದೂರಿದರು. ಅಲ್ಲದೆ, ದಶಕಗಳಿಂದ ಪೌರಾಕಾರ್ಮಿಕರ ಪ್ರಮುಖ ಬೇಡಿಕೆಯಾಗಿರುವ ನಿವೇಶನ ಹಂಚಿಕೆ ಪ್ರಕ್ರಿಯೆಯೂ ಇನ್ನೂ ಪೂರ್ಣಗೊಂಡಿಲ್ಲದಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಬೆಳ್ಳಂಬೆಳಗ್ಗೆ ಸ್ವಚ್ಛತಾ ಕಾರ್ಯ ನಡೆಯದ ಕಾರಣ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಕಸ ವಿಲೇವಾರಿಯಲ್ಲಿ ವ್ಯತ್ಯಯ ಉಂಟಾಯಿತು. ಪ್ರತಿಭಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ನಿಯೋಜಿತ ಆರೋಗ್ಯ ನಿರೀಕ್ಷಕಿ ಕೆ.ಲಕ್ಷ್ಮೀ, ಪೌರಾಕಾರ್ಮಿಕರ ಸಂಘದ ಕಮಲಾಪುರ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಹಾಗೂ ಉಪಾಧ್ಯಕ್ಷ ಎಂ.ಸಿಕಿಂದರ್ ಅವರು ಪ್ರತಿಭಟನಾನಿರತ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದರು.
ಬಾಕಿ ಇರುವ ಸಂಕಷ್ಟ ಭತ್ಯೆ, ಸಮವಸ್ತ್ರ, ಉಪಹಾರ ಹಾಗೂ ನಿವೇಶನ ಹಂಚಿಕೆ ಸೇರಿದಂತೆ ಇತರ ಬೇಡಿಕೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರ ಪರಿಹಾರ ಕಲ್ಪಿಸುವ ಭರವಸೆ ನೀಡಿದರು. ಮುಖಂಡರು ಮತ್ತು ಅಧಿಕಾರಿಗಳ ಮನವೊಲಿಕೆಗೆ ಮಣಿದ ಪೌರಾಕಾರ್ಮಿಕರು ಪ್ರತಿಭಟನೆಯನ್ನು ಹಿಂಪಡೆದು, ತದನಂತರ ಪಟ್ಟಣದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು. ಆದಾಗ್ಯೂ, ಮುಂದಿನ ದಿನಗಳಲ್ಲಿ ತಮ್ಮ ಬೇಡಿಕೆಗಳು ಈಡೇರದಿದ್ದರೆ ಮತ್ತೆ ಉಗ್ರ ಹೋರಾಟಕ್ಕಿಳಿಯುವುದಾಗಿ ಕಾರ್ಮಿಕರು ಎಚ್ಚರಿಕೆ ನೀಡಿದ್ದಾರೆ.