ವಿಜಯವಾಣಿ ಸುದ್ದಿಜಾಲ ಹರಪನಹಳ್ಳಿ
ಅಂಗವಿಕಲರ ಕಲ್ಯಾಣಕ್ಕಾಗಿ ಜಾರಿಗೊಂಡ ಯೋಜನೆಗಳು ಅನರ್ಹರ ಪಾಲಾಗುತ್ತಿದ್ದು, ಅರ್ಹ ಫಲಾನುಭವಿಗಳು ತೊಂದರೆ ಅನುಭವಿಸುವುದು ತಾಲೂಕಿನಲ್ಲಿ ಮಾಮೂಲಾಗಿದೆ.
2024-25 ಹಾಗೂ 2025-26ನೇ ಸಾಲಿನಲ್ಲಿ ತಾಲೂಕು ಪಂಚಾಯಿತಿಗೆ ಅಂಗವಿಕಲ ಮಕ್ಕಳ ವೈದ್ಯಕೀಯ ಚಿಕಿತ್ಸಾ ಉಪಕರಣಗಳ ಖರೀದಿ, ಅಂಗವಿಕಲರ ಕ್ರೀಡಾಕೂಟ ಆಯೋಜನೆ ಸೇರಿದಂತೆ ಇತರ ಸೌಲಭ್ಯಗಳಿಗಾಗಿ ಮೀಸಲಿದ್ದ 10 ಲಕ್ಷ ಹಣವನ್ನು ತಾಪಂ ಇಒ ಚಂದ್ರಶೇಖರ್ ವೈ.ಎಚ್. ಅನ್ಯ ಕಾರ್ಯಕ್ಕೆ ಬಳಸಿದ್ದಾರೆ. ತಮಗೆ ಅನುಕೂಲದಂತೆ ಕ್ರಿಯಾಯೋಜನೆ ಬದಲಿಸಿ ವಿಆರ್‌ಡಬ್ಲುೃ ಹಾಗೂ ಎಂಆರ್‌ಡಬ್ಲುೃಗಳಿಗೆ ಕಂಪ್ಯೂಟರ್, ಟೇಬಲ್, ಅಲ್ಮೇರಾ ಖರೀದಿ ಮಾಡಿದ್ದಾರೆಂದು ಅಂಗವಿಕಲರ ಆರೋಪವಾಗಿದೆ.
ಪ್ರತಿ ಪಂಚಾಯಿತಿಯಲ್ಲಿ ಅಂಗವಿಕಲರಿಗಾಗಿಯೇ ಮೀಸಲಿರುವ ಶೇ.5 ಹಣ ಸಮರ್ಪಕವಾಗಿ ಬಳಕೆಯಾಗದ ಬಗ್ಗೆ ಪ್ರಶ್ನಿಸಿದರೆ ಸರಿಯಾಗಿ ಸ್ಪಂದಿಸದ ಇಒ, ಕ್ರಿಯಾಯೋಜನೆ ಪ್ರತಿಗಳನ್ನು ಒದಗಿಸದೆ ನಿರ್ಲಕ್ಷೃ ವಹಿಸುತ್ತಿದ್ದಾರೆ ಎಂಬುದು ಸಂಘಟನೆಗಳ ಆರೋಪವಾಗಿದೆ.
ನಗರದಲ್ಲಿ ಸೆ.19ರಂದು ಜಿಲ್ಲಾ ಉಸ್ತುವಾರಿ ಸಚಿವ ಬಸವಂತಪ್ಪ ಅಧ್ಯಕ್ಷತೆಯಲ್ಲಿ ನಡೆದ ಜನಸೇವಾ ಕಾರ್ಯಕ್ರಮದಲ್ಲಿ ಸಂಕೇತ ಭಾಷಾ ತಜ್ಞರ ನೇಮಕ ವಿಚಾರ ಪ್ರಸ್ತಾಪವಾಯಿತು. ಇದುವರೆಗೆ ನೇಮಕವಾಗದಿರಲು ಕಾರಣವೇನೆಂದು ಸಚಿವರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಹಾಗೂ ತಾಪಂ ಇಒ ಕ್ರಮವಹಿಸುವುದಾಗಿ ಹೇಳಿ ಈದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
ತಾಲೂಕಿನ ಬಹುತೇಕ ಶಾಲೆಗಳಲ್ಲಿ ಅಂಗವಿಕಲ ಸ್ನೇಹಿ ಶೌಚಗೃಹ, ಸುರಕ್ಷತಾ ರೇಲಿಂಗ್‌ಗಳಿಲ್ಲ. ಗಾಲಿ ಖುರ್ಚಿ ಚಲಿಸಲು ರ‌್ಯಾಂಪ್ ವ್ಯವಸ್ಥೆ ಇಲ್ಲದಿರುವುದು ಅಂಗವಿಕಲ ಮಕ್ಕಳು ಶಿಕ್ಷಣದಿಂದ ವಂಚಿತರಾಗಲು ಪ್ರಮುಖ ಕಾರಣವಾಗಿದೆ.
ಹುಟ್ಟಿನಿಂದಲೂ ವಾಕ್ ಮತ್ತು ಶ್ರವಣ ದೋಷ ಸಮಸ್ಯೆಗೆ ಒಳಗಾಗಿರುವ ತಾಲೂಕಿನ ಕೂಲಹಳ್ಳಿ ಗ್ರಾಮದ ಗೋಣೇಶ ಎನ್ನುವ ಬಾಲಕ ಅಂಗವಿಕಲ ಪ್ರಮಾಣ ಪತ್ರ ಪಡೆಯಲು ಶೇ.100 ಯೋಗ್ಯನಿದ್ದರು ಇದುವರೆಗೆ ಪ್ರಮೂಣ ಪತ್ರ ನೀಡದೆ ಪಾಲಕರನ್ನು ವೈದ್ಯರು ಅಲೆದಾಡುಸುತ್ತಿದ್ದಾರೆ. ಹಣ ಕೊಟ್ಟರೆ ಅಂಗವಿಕಲ ಎಂಬ ಗುರುತಿನ ಚೀಟಿ-ಪ್ರಮಾಣ ಪತ್ರ ಎರಡೂ ಸಿಗುವ ದುಸ್ಥಿತಿ ನಿರ್ಮಾಣವಾಗಿದೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ತಿಂಗಳಿಗೊಮ್ಮೆ ಅಂಗವಿಕಲರ ಆರೋಗ್ಯ ತಪಾಸಣಾ ಶಿಬಿರ ನಡೆಯುತ್ತಿದೆ. ಇದಕ್ಕೆ ವೈದ್ಯರು ಸಕಾಲಕ್ಕೆ ಬಾರದ ಕಾರಣ ಶಿಬಿರ ತಡವಾಗಿ ಆರಂಭವಾಗಿ ಕೆಲ ಹೊತ್ತಿನಲ್ಲೇ ಮುಗಿಯುತ್ತಿದೆ. ಕೆಲವರನ್ನಷ್ಟೇ ನಾಮಕೇವಾಸ್ತೆಗೆ ತಪಸಣೆ ಮಾಡಿ ಔಷಧ ಚೀಟಿ ಬರೆಯುವ ವೈದ್ಯರು, ಉಳಿದವರಿಗೆ ಮುಂದಿನ ತಿಂಗಳು ತೋರಿಸಿಕೊಳ್ಳಿ ಅಥವಾ ಹೊಸಪೇಟೆಗೆ ಬನ್ನಿ ಎಂದು ಗದರಿಸಿ ಮಧ್ಯಾಹ್ನ 2ಕ್ಕೆ ಹೊಸಪೇಟೆಗೆ ಮರಳುತ್ತಾರೆ. ಇನ್ನೂ ತಾಲೂಕಿನ ಬೆಣ್ಣಿಹಳ್ಳಿ ಗ್ರಾಮವೊಂದರಲ್ಲೇ 150ಕ್ಕೂ ಹೆಚ್ಚು ಅಂಗವಿಕಲರಿದ್ದರೂ ಕಳೆದ 2 ವರ್ಷಗಳಿಂದ ವಿಆರ್‌ಡಬ್ಲುೃ ಹುದ್ದೆ ಖಾಲಿ ಇದ್ದರೂ ಭರ್ತಿ ಮಾಡಿಕೊಳ್ಳದೆ ಇಒ ನಿರ್ಲ್ಯಕ್ಷ ವಹಿಸಿದ್ದಾರೆ.
ಹೊಸಪೇಟೆಯಿಂದ ಕಳುಹಿಸುವ ವೈದ್ಯರು ಯುಡಿಐಡಿ ಕಾರ್ಡ್ ವಿತರಣೆ ಮತ್ತು ಸಣ್ಣಪುಟ್ಟ ಚಿಕಿತ್ಸೆ ಮಾತ್ರ ನೀಡುತ್ತಾರೆ. ಶ್ರವಣದೋಷ ಹಾಗೂ ಇಎನ್‌ಟಿ ಚಿಕಿತ್ಸೆ ನೀಡಲು ಸಾಧನಗಳ ಕೊರತೆ ಇರುವುದರಿಂದ ಹೊಸಪೇಟೆ ಅಥವಾ ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯಲು ವೈದ್ಯರು ಸಲಹೆ ನೀಡುತ್ತಾರೆ.
ಲಿಂಗರಾಜ್, ಡಿಎಚ್‌ಒ ಹೊಸಪೇಟೆ