ಸಂವಿಧಾನದ ಆಶಯದಂತೆ ರಾಜ್ಯದ ಆಡಳಿತ

ಹರಪನಹಳ್ಳಿಯಲ್ಲಿ ಸುಧಾರಿತ ಸಗಟು ನೀರು ಸರಬರಾಜು ಯೋಜನೆ ಕಾಮಗಾರಿಗೆ ಶಂಕುಸಾಪ್ಥನೆ ನೆರವೇರಿಸುವ ಕಾರ್ಯಕ್ರಮವನ್ನು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಉದ್ಘಾಟಿಸಿದರು.
ಹರಪನಹಳ್ಳಿಯಲ್ಲಿ ಸುಧಾರಿತ ಸಗಟು ನೀರು ಸರಬರಾಜು ಯೋಜನೆ ಕಾಮಗಾರಿಗೆ ಶಂಕುಸಾಪ್ಥನೆ ನೆರವೇರಿಸುವ ಕಾರ್ಯಕ್ರಮವನ್ನು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಉದ್ಘಾಟಿಸಿದರು.
Published on
ಹರಪನಹಳ್ಳಿ: ರಾಜ್ಯ ಸರ್ಕಾರ ಎಲ್ಲ ವರ್ಗದ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.
ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಸುಧಾರಿತ ಸಗಟು ನೀರು ಸರಬರಾಜು ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಸೋಮವಾರ ಮಾತನಾಡಿದರು. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಐದು ಗ್ಯಾರಂಟಿ ಯೋಜನೆಗಳಿಗಾಗಿ 60 ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಯಾವ ಸರ್ಕಾರ ಕೂಡ ಇದುವರೆಗೆ ಮಾಡದೆ ಇರುವಂತಹ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು.
ಬಿಜೆಪಿ ಹಾಗೂ ಜೆಡಿಎಸ್ ನಾಯಕರು ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ದುಡ್ಡಿಲ್ಲವೆಂದು ಹೇಳುತ್ತಾರೆ, ನನ್ನ ಇಲಾಖೆಯೊಂದರಿಂದಲೇ ಅಭಿವೃದ್ಧಿಗಾಗಿ ಇದುವರೆಗೆ 14 ಸಾವಿರ ಕೋಟಿ ರೂ. ನೀಡಿದ್ದೇನೆ. ಈ ಅನುದಾನ ಎಲ್ಲಿಂದ ಬಂತು ಎಂಬುದರ ಅರಿವು ಬಿಜೆಪಿ-ಜೆಡಿಎಸ್ ನಾಯಕರಿಗಿಲ್ಲ. ಸಿದ್ದರಾಮಯ್ಯ ದೇಶದಲ್ಲೇ ಅತ್ಯಂತ ಪ್ರಾಮಾಣಿಕ ಮುಖ್ಯಮಂತ್ರಿಯಾಗಿದ್ದಾರೆ. ಸಂವಿಧಾನದ ಆಶಯದಡಿ ರಾಜ್ಯ ಸರ್ಕಾರ ಆಡಳಿತ ನಡೆಸುತ್ತಿದೆ. ಆದರೆ ಬಿಜೆಪಿಯವರು ಜಾತಿಗಳ ಮಧ್ಯೆ ವಿಷಬೀಜ ಬಿತ್ತುತ್ತಿದ್ದಾರೆಂದು ಆರೋಪಿಸಿದರು.
ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ, ಹರಪನಹಳ್ಳಿ ಅಭಿವೃದ್ಧಿಗೆ 43.36 ಕೋಟಿ ರೂ.ಅವಶ್ಯವಿದೆ. ತಾಲೂಕು ಕೇಂದ್ರದಿಂದ 22 ಕಿ.ಮೀ. ವ್ಯಾಪ್ತಿಯಲ್ಲಿ ನೀರಿನ ಕೊರತೆಯಿದ್ದು, ಸರಬರಾಜು ಮಾಡಲು 61 ಕೋಟಿ ರೂ. ಬೇಕಾಗುತ್ತದೆ. ನಗರದಲ್ಲಿನ ಒಳಚರಂಡಿ ದುಸ್ಥಿತಿಯಿಂದ ನೀರು ಒಂದೆಡೆ ಶೇಖರಣೆಯಾಗಿ ಜನರು ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗುತ್ತಿದ್ದರೆ. ಅಯ್ಯನಕೆರೆ ಜಿಲ್ಲೆಯಲ್ಲಿಯೇ ಅತಿ ಮಲೀನ ಪ್ರದೇಶವೆಂದು ಗುರುತಿಸಲಾಗಿದೆ. ಈ ಕುರಿತ ಅಭಿವೃದ್ಧಿಗೆ 63 ಕೋಟಿ ರೂ. ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಪಟ್ಟಣದ ಪ್ರಮುಖ ಬೀದಿಗಳು ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗಿದೆ. ಇದರ ಅಭಿವೃದ್ಧಿಗೆ 10 ಕೋಟಿ ರೂ. ಅಗತ್ಯವಿದೆ. ಮುಂದಿನ ಬಜೆಟ್ ಮೂಲಕ ಹಂತಹಂತವಾಗಿ ಒಟ್ಟು 107 ಕೋಟಿ ರೂ. ಮಂಜೂರು ಮಾಡಿಸುವಂತೆ ಸಚಿವ ಬೈರತಿ ಸುರೇಶ್ ಅವರನ್ನು ಒತ್ತಾಯಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ನಿಗಿಂತ ಹೆಚ್ಚು ಬೈರತಿ ಸುರೇಶ್ ನೆರಳಿನಂತೆ ಇರುತ್ತಾರೆ ಎಂದು ತಿಳಿಸಿದರು.
889 ಕಾರ್ಮಿಕರಿಗೆ ಕಿಟ್ ಮತ್ತು ಮೀನುಗಾರಿಕೆ ಇಲಾಖೆಯಿಂದ 25 ಮನೆಗಳ ಹಕ್ಕುಪತ್ರ ವಿತರಣೆ ಮಾಡಲಾಯಿತು. ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ಭೀಮಪ್ಪ, ಸಮಾಜ ಕಲ್ಯಾಣಾಧಿಕಾರಿ ಗಂಗಪ್ಪ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ, ಪ್ರಮುಖರಾದ ಮಲ್ಲಿಕಾರ್ಜುನ ಸ್ವಾಮಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ದ್ವಾರಕೀಶ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಉದಯ್‌ಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ವಿ.ಅಂಜಿನಪ್ಪ, ಕುಬೇರಗೌಡ, ಕಂಬತ್ತಹಳ್ಳಿ ಮಂಜುನಾಥ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net