

ಸೋಮವಾರಪೇಟೆ: ಜಿಲ್ಲೆಯ ಜನತೆಗೆ ಮಾರಕವಾಗುವ ಸರ್ಕಾರಿ ಆದೇಶಗಳನ್ನು ಹಿಂದಕ್ಕೆ ಪಡೆಯಲು ಒತ್ತಾಯಿಸಿ ಮೇ 17ರಂದು ಬೆಳಗ್ಗೆ ಅರಣ್ಯಭವನದ ಮುಂಭಾಗ ಹಮ್ಮಿಕೊಂಡಿರುವ ಬಿಜೆಪಿಯ ಬೃಹತ್ ಪತ್ರಿಭಟನೆಗೆ ತಾಲೂಕಿನ ರೈತರು, ಬೆಳೆಗಾರರು ಹಾಗು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಹೇಳಿದರು.
ಈಗಾಗಲೇ ಕಾಫಿ ತೋಟಗಳಲ್ಲಿ ಬೆಳೆದಿರುವ ಮರಗಳ ಗಣತಿ ಕಾರ್ಯವನ್ನು ಅರಣ್ಯ ಇಲಾಖೆ ಮಾಡುತ್ತಿದೆ. ಕೆಲ ಬೆಳೆಗಾರರ ವಿರೋಧದ ನಡುವೆ ಸದ್ಯಕ್ಕೆ ಎಣಿಕೆ ಕಾರ್ಯವನ್ನು ನಿಲ್ಲಿಸಿದ್ದಾರೆ. ತಮ್ಮ ಭೂಮಿಯ ಮರಗಳ ಹಕ್ಕು ರೈತರಿಗೆ ಸೇರಿದ್ದಾಗಿದೆ. ಈಗ ರೈತರು ಮೌನವಹಿಸಿದರೆ, ಮರಗಳ ಹಕ್ಕನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಿಜೆಪಿ ಪ್ರತಿಭಟನೆಯ ನೇತೃತ್ವವನ್ನು ಮಾತ್ರ ವಹಿಸಿದೆ. ರಾಜಕೀಯ ರಹಿತವಾಗಿ ಎಲ್ಲಾ ಬೆಳೆಗಾರರು, ಸಂಘ ಸಂಸ್ಥೆಯವರನ್ನು ಭಾಗವಹಿಸಲು ಮನವಿ ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ಈಗಾಗಲೇ ಜಿಲ್ಲೆಯಲ್ಲಿ ಅರಣ್ಯ ಅಧಿಕಾರಿಗಳು ಸಾಕಷ್ಟು ಖಾಸಗಿ ಜಮೀನಿನಲ್ಲಿ ಮರಗಳ ಗುರುತು ಮಾಡಿದ್ದು, ಮುಂದಿನ ದಿನಗಳಲ್ಲಿ ಅವುಗಳಿಗೆ ಜಿಯೋ ಟ್ಯಾಗ್ ಹಾಕುವ ಮೂಲಕ ಮಾಲಿಕರ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರವಾಗಿದೆ. ಮುಂದಿನ ದಿನಗಳಲ್ಲಿ ಸ್ವಂತ ಉಪಯೋಗಕ್ಕೂ ಮರಗಳನ್ನು ಉಪಯೋಗಿಸಲು ಸಾಧ್ಯವಿಲ್ಲದಂತೆ ಮಾಡುತ್ತಾರೆ ಎಂದು ದೂರಿದರು.
ಕೊಡಗಿನ ದೇವಾಲಯಗಳಲ್ಲಿ ಸಾವಿರಾರು ವರ್ಷಗಳಿಂದ ಕಾಡುಪ್ರಾಣಿಗಳ ಪ್ರಾಣಿ ಜನ್ಯವನ್ನು ದೇವರ ನೃತ್ಯಗಳಲ್ಲಿ ಬಳಸಲಾಗುತ್ತಿದೆ. ಜನರ ಧಾರ್ಮಿಕ ನಂಬಿಕೆಯೂ ಇದಾಗಿದೆ. ಕೊಂಬು, ನವಿಲುಗರಿ, ಚಮರಿ ಮೃಗದ ಬಾಲ ಇವುಗಳನ್ನು ಬಳಸಲು ನಿರ್ಬಂಧ ಹೇರಿರುವುದನ್ನು ವಿರೋಧಿಸಿ ಹೋರಾಟ ಮಾಡಲಾಗುವುದು. ಸಿ ಮತ್ತು ಡಿ ಜಾಗಕ್ಕೆ ಹಕ್ಕುಪತ್ರ ಆಗ್ರಹಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಗೌತಮ್, ಯುವಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ, ಪದಾಧಿಕಾರಿಗಳಾದ ಎಸ್.ಆರ್.ಸೋಮೇಶ್, ಪವನ್ ಇದ್ದರು.