ಯಲ್ಲಾಪುರ: ತಾಲೂಕಿನ ನಂದೊಳ್ಳಿ ಗ್ರಾಪಂ ವ್ಯಾಪ್ತಿಯ ಅಣಲಗಾರ ಮುಖ್ಯ ರಸ್ತೆಯಿಂದ ತೊಂಡೆಕೇರಿ ಡೇರಿ ಹಾಗೂ ಬಾಳೆಗದ್ದೆಯಿಂದ ನೆಡತೋಟದವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಪ್ರಯಾಣಿಕರು ಪ್ರಯಾಸದಿಂದ ಓಡಾಡುವಂತಾಗಿದೆ.
ಸೂಳಗಾರ, ಹೊಳೆಮಡು, ದೇವರಗದ್ದೆ, ಹೆಗ್ಗುಂಬಳಿ ಭಾಗದ ಗ್ರಾಮಸ್ಥರಿಗೆ ಅನುಕೂಲವಾಗುವ ಈ ರಸ್ತೆ ಮಳೆಗಾಲದಲ್ಲಿ ಕೆಸರುಮಯವಾಗಿ, ಬೇಸಿಗೆಯಲ್ಲಿ ಧೂಳುಮಯವಾಗಿ ಓಡಾಡಲು ಕಷ್ಟಕರವಾಗಿರುತ್ತದೆ. ನಿತ್ಯವೂ ಮೂರು ಬಾರಿ ನಾಳಶೇರು ಬಸ್ ಓಡಾಡುತ್ತದೆ. ಜತೆಗೆ ನೂರಾರು ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ಈ ರಸ್ತೆಯ ಅವ್ಯವಸ್ಥೆಯ ನಡುವೆ ಪ್ರಯಾಣಿಕರು ಏಳುತ್ತ, ಬೀಳುತ್ತ ಸಾಗುವ ಅನಿವಾರ್ಯತೆ ಕೆಲವು ವರ್ಷಗಳಿಂದ ಎದುರಾಗಿದೆ.
ಲೋಕೋಪಯೋಗಿ ಇಲಾಖೆ ನಿರ್ವಹಿತ ಈ ರಸ್ತೆಯ ಮಧ್ಯಭಾಗದಲ್ಲಿ 6&-7 ವರ್ಷಗಳ ಹಿಂದೆ ತೊಂಡೆಕೇರಿಯಿಂದ ಬಾಳೆಗದ್ದೆ ಕ್ರಾಸ್ವರೆಗೆ ಕಾಂಕ್ರೀಟಿಕರಣಗೊಳಿಸಲಾಗಿದೆ. ಆದರೆ, ರಸ್ತೆಯ ಆರಂಭಿಕ ಸ್ಥಳ ಸೂಳಗಾರ ಕ್ರಾಸ್ನಿಂದ ತೊಂಡೆಕೇರಿವರೆಗೆ, ಮುಂದಿನ ಭಾಗವಾದ ಬಾಳೆಗದ್ದೆ ಕ್ರಾಸ್ನಿಂದ ನೆಡತೋಟದವರೆಗೆ ರಸ್ತೆ ಹೊಂಡಗುಂಡಿಗಳಿಂದ ಕೂಡಿದೆ.
ರಸ್ತೆ ದುರಸ್ತಿ ಬಗ್ಗೆ ಈಗಾಗಲೇ ಹಲವು ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಮತ್ತೆ ಮತ್ತೆ ದುಂಬಾಲು ಬೀಳಲು ಸಾಧ್ಯವಿಲ್ಲ. ನಮ್ಮ ಮನವಿಯನ್ನು ಪುರಸ್ಕರಿಸಿ ತಕ್ಷಣ ರಸ್ತೆ ದುರಸ್ತಿ ಮಾಡಿಸಬೇಕು. ಅದಲ್ಲದಿದ್ದರೆ ಮುಂಬರುವ ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ರಸ್ತೆ ಅವ್ಯವಸ್ಥೆಯಿಂದ ಬೇಸತ್ತು ಹೋಗಿದ್ದೇವೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳಿಂದ ಹಿಡಿದು ಶಾಸಕರವರೆಗೂ ಮನವಿ ಸಲ್ಲಿಸಿದ್ದೇವೆ. ಶ್ರೀ ಸ್ಪಂದಿಸದೆ ಹೋದರೆ ಮತದಾನ ಬಹಿಷ್ಕಾರ ಮಾಡುವುದು ಅನಿವಾರ್ಯವಾಗುತ್ತದೆ.
ಶ್ರೀಧರ ಹೆಗಡೆ ಕಣ್ಣಿಜಡ್ಡಿ, ಗ್ರಾಮಸ್ಥ
ಸದ್ಯಕ್ಕೆ ಸೂಳಗಾರ ಕ್ರಾಸ್ನಿಂದ ತೊಂಡೆಕೇರಿವರೆಗೆ ಒಂದು ಕಿಮೀ ಕಾಂಕ್ರೀಟ್ ರಸ್ತೆ ನಿಮಾರ್ಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಹಂತದಲ್ಲಿ ಬಾಳೆಗದ್ದೆಯಿಂದ ನೆಡತೋಟದವರೆಗಿನ ರಸ್ತೆಗೆ ಅನುದಾನ ಮಂಜೂರಿ ಮಾಡಲಾಗುವುದು.
ಶಿವರಾಮ ಹೆಬ್ಬಾರ್, ಶಾಸಕ