

ಕಾರವಾರ: ಮಲ್ಲಾಪುರದ ಕೈಗಾ ಪುನರ್ವಸತಿ ಕೇಂದ್ರದಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗುತ್ತಿದೆ. ಸಮಸ್ಯೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಸ್ಥಳೀಯರ ಆಕ್ಷೇಪಕ್ಕೆ ಕಾರಣವಾಗಿದೆ. ಪುನರ್ವಸತಿ ಕೇಂದ್ರದ ನಾಗರಿಕರು ಮಲ್ಲಾಪುರ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಸೋಮವಾರ ತೆರಳಿ ನೀರಿನ ಸಮಸ್ಯೆಯನ್ನು ತಕ್ಷಣ ಬಗೆಹರಿಸುವಂತೆ ಮನವಿ ಸಲ್ಲಿಸಿದರು.
ಪುನರ್ವಸತಿ ಕೇಂದ್ರದಲ್ಲಿ 100 ಕ್ಕೂ ಅಧಿಕ ಮನೆಗಳಿವೆ. ಎರಡು ಬಾವಿಗಳಿದ್ದರೂ ಅವು ಕೇಂದ್ರದ ಎರಡು ತುದಿಯಲ್ಲಿದ್ದು, ಎಲ್ಲ ನಿವಾಸಿಗಳಿಗೆ ಲಭ್ಯವಿಲ್ಲ. ಎನ್ಪಿಸಿಐಎಲ್ ಭಾಗೀರತಿ ಯೋಜನೆಯಡಿ ಮನೆಗಳಿಗೆ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೆ, ದಿನಕ್ಕೆ ಅರ್ಧ ಗಂಟೆಯೂ ಸರಿಯಾಗಿ ನೀರು ಬಿಡುವುದಿಲ್ಲ. ಆ ಸಮಯದಲ್ಲಿ ನೀರು ಹಿಡಿಯದಿದ್ದರೆ ಇಡೀ ದಿನ ನೀರು ಇರುವುದಿಲ್ಲ. ದಿನನಿತ್ಯದ ವ್ಯವಹಾರಗಳಿಗೆ ನೀರಿನ ಕೊರತೆ ಉಂಟಾಗುತ್ತಿದೆ ಎಂದು ಸಮಸ್ಯೆ ತೋಡಿಕೊಂಡರು.
ಕೈಗಾ ಪುನರ್ವಸತಿ ಕೇಂದ್ರದ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ರಚಿತಾ ರಾಜೇಶ ಗಾಂವಕಾರ್ ನೇತೃತ್ವದಲ್ಲಿ ಮಹಿಳೆಯರು ಪಾಲ್ಗೊಂಡು, ಗ್ರಾಪಂ ಮಧ್ಯಸ್ಥಿಕೆ ವಹಿಸಿ ಸಂಬAಧಪಟ್ಟ ಎನ್ಪಿಸಿಐಎಲ್ ಅಧಿಕಾರಿಗಳ ಜೊತೆ ಚರ್ಚಿಸಿ, ದಿನನಿತ್ಯ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.