

ಸಿದ್ದಾಪುರ: ತಾಲೂಕಿನಲ್ಲಿ ಸರಣಿ ಕಳ್ಳತನ ಮಾಡಲು ಬಂದಿದ್ದ ಅಂತರ ಜಿಲ್ಲಾ ಕಳ್ಳರ ಗ್ಯಾಂಗ್ ಒಂದನ್ನು ಸಿದ್ದಾಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿದ್ದಾಪುರದ ಹಾಳದಕಟ್ಟಾದಲ್ಲಿರುವ ರಾಜು ಉಮೇಶ ಜಾಧವ ಅವರ ಮನೆಯಲ್ಲಿ ಯಾರೂ ಇಲ್ಲದಾಗ ಬೀಗ ಮುರಿದು ಒಳನುಗ್ಗಿ ಕಳ್ಳತನ ನಡೆಸಿರುವುದಾಗಿ ಸೋಮವಾರ ದೂರು ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಸಿದ್ದಾಪುರ ಇನ್ಸ್ಪೆಕ್ಟರ್ ಜಿ.ಬಿ.ಸೀತಾರಾಮ ಹಾಗೂ ಪಿಎಸ್‌ಐ ನಾಗಪ್ಪ ಅವರ ತಂಡ ಕಾರ್ಯಾಚರಣೆ ನಡೆಸಿ, ಮೂವರನ್ನು ಬಂಧಿಸಿದೆ.
ಗದಗ ಜಿಲ್ಲೆ ಲಕ್ಷ್ಮೇಶ್ವರದ ಗೋವಿಂದಪ್ಪ ತೋಳೆಪ್ಪ, ಬೆಳಗಾವಿ ರಾಯಬಾಗದ ಚಿಂಚಲಿಯ ಕೃಷ್ಣ ಮುಳಗುಂದ, ಹುಬ್ಬಳ್ಳಿ ತಾರೆಹಾಳ ರಸ್ತೆಯ ಗಣೇಶ ಗಂಗಪ್ಪ ಬಂಧಿತರು. ರಾಯಬಾಗ ಚಿಂಚಲಿಯ ಗಂಗಪ್ಪ ಯಲ್ಲಪ್ಪ ಕುಂಚಿಕೊರವ ಹಾಗೂ ಮಂಜು ಖಂಡು ವಡ್ಡರ್ ತಪ್ಪಿಸಿಕೊಂಡಿದ್ದಾರೆ. ಬಂಽತರಿAದ ಸ್ವಿಪ್ಟ್ ಡಿಸೈರ್ ಕಾರು ಹಾಗೂ ಸ್ವಲ್ಪ ಹಣ ವಶಕ್ಕೆ ಪಡೆಯಲಾಗಿದೆ. ಅವರ ವಿರುದ್ಧ ಗದಗ, ಧಾರವಾಡ ಉಡುಪಿಯಲ್ಲಿ ದರೋಡೆ, ಡಕಾಯಿತಿ ಮನೆ ಕಳ್ಳತನ ಪ್ರಕರಣಗಳಿವೆ.