ಸಾಂಪ್ರದಾಯಿಕ ಕೃಷಿ ಉತ್ತೇಜನಕ್ಕೆ ಬೀಜ ಬ್ಯಾಂಕ್ ಸ್ಥಾಪನೆ

ಕುಮಟಾ ತಾಲೂಕಿನ ಕಾಗಾಲಿನಲ್ಲಿ ಬೀಜ ಬ್ಯಾಂಕ್ ಅನ್ನು ಜರ್ಮನ್ ಕನ್ಸೂಲೇಟ್‌ನ ವೈಸ್ ಕನ್ಸೂಲ್ ಕಾಜಾ ಶರ್ಮಾ ಉದ್ಘಾಟಿಸಿದರು. ಸುಭಾಷ ಶಿರಾಲಿ, ಶಿವಪ್ರಸಾದ ಗಾಂವಕರ್, ನವೀನ ನಾಯ್ಕ ಇತರರಿದ್ದರು.
ಕುಮಟಾ ತಾಲೂಕಿನ ಕಾಗಾಲಿನಲ್ಲಿ ಬೀಜ ಬ್ಯಾಂಕ್ ಅನ್ನು ಜರ್ಮನ್ ಕನ್ಸೂಲೇಟ್‌ನ ವೈಸ್ ಕನ್ಸೂಲ್ ಕಾಜಾ ಶರ್ಮಾ ಉದ್ಘಾಟಿಸಿದರು. ಸುಭಾಷ ಶಿರಾಲಿ, ಶಿವಪ್ರಸಾದ ಗಾಂವಕರ್, ನವೀನ ನಾಯ್ಕ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜರ್ಮನ್ ಕನ್ಸೂಲೇಟ್‌ನ ವೈಸ್ ಕನ್ಸೂಲ್ ಕಾಜಾ ಶ್ವಾರ್ಮ ಹೇಳಿಕೆ
ಕುಮಟಾ: ಸಾಂಪ್ರದಾಯಿಕ ಭತ್ತದ ತಳಿಗಳನ್ನು ಸಂರಕ್ಷಿಸಿ ಭಾರತೀಯ ನೆಲಮೂಲದ ಸಾಂಪ್ರದಾಯಿಕ ಕೃಷಿ ಪದ್ಧತಿ ಉತ್ತೇಜಿಸಲು ಬೀಜ ಬ್ಯಾಂಕ್ ಸ್ಥಾಪಿಸಲಾಗಿದೆ ಎಂದು ಜರ್ಮನ್ ಕನ್ಸೂಲೇಟ್‌ನ ವೈಸ್ ಕನ್ಸೂಲ್ ಕಾಜಾ ಶ್ವಾರ್ಮ ಹೇಳಿದರು.
ತಾಲೂಕಿನ ಕಾಗಾಲ್ ಗ್ರಾಮದ ಕಡ್ಲೆಮನೆಯಲ್ಲಿ ಸ್ಥಾಪಿಸಲಾಗಿರುವ ಸಮುದಾಯಾಧಾರಿತ ಬೀಜ ಬ್ಯಾಂಕ್ ಅನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಕೊಡ್‌ವೆಸ್ ಸಂಸ್ಥೆ ಶಿರಸಿ ಮತ್ತು ಜರ್ಮನ್ ಕನ್ಸೂಲೇಟ್, ಬೆಂಗಳೂರು ಅವರ ಸಹಾಯದೊಂದಿಗೆ ಅಳಿವಿನಂಚಿನಲ್ಲಿರುವ 600ಕ್ಕೂ ಅಧಿಕ ಭತ್ತದ ತಳಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ಈ ಬೀಜ ಬ್ಯಾಂಕ್ ಸ್ಥಾಪಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಂಡು ಸಾಂಪ್ರದಾಯಿಕ ಭತ್ತದ ಬೀಜಗಳನ್ನು ಸಂರಕ್ಷಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೀಜ ಬ್ಯಾಂಕ್‌ನ ಸಂಸ್ಥಾಪಕ ಟ್ರಸ್ಟಿ ಸುಭಾಷ ಶಿರಾಲಿ ಮಾತನಾಡಿ, ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಭತ್ತದ ತಳಿಗಳ ಸಂರಕ್ಷಣೆಗಾಗಿ ಬೀಜ ಬ್ಯಾಂಕ್ ಸ್ಥಾಪಿಸಲಾಗಿದ್ದು, ಸ್ಥಳೀಯ ಆಸಕ್ತ ರೈತರಿಗೆ ಈ ಬೀಜಗಳನ್ನು ವಿತರಣೆ ಮಾಡಿ ಅವರಿಂದ ವಿನಿಮಯ ಮಾಡಿಕೊಂಡು ಭತ್ತದ ಬೀಜಗಳನ್ನು ಪಡೆಯಲಾಗುವುದು. ಈಗಾಗಲೇ ಈ ಬೀಜ ಬ್ಯಾಂಕ್‌ಗಳಲ್ಲಿ 600ಕ್ಕೂ ಅಧಿಕ ಬಗೆಯ ಭತ್ತದ ಬೀಜಗಳನ್ನು ಸಂಗ್ರಹಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಂಪ್ರದಾಯಿಕ ಬೀಜಗಳನ್ನು ಸಂಗ್ರಹಿಸುವ ಉದ್ದೇಶ ಹೊಂದಲಾಗಿದೆ ಎಂದರು. ವಾಣಿಜ್ಯ ಮಾರುಕಟ್ಟೆಗಳಿಂದ ಉಂಟಾಗುತ್ತಿರುವ ಅಡ್ಡ ಪರಿಣಾಮಗಳನ್ನು ತಡೆಹಿಡಿಯಲು ಬೀಜ ಬ್ಯಾಂಕ್ ಉತ್ತಮ ಸಾಧನ ಎಂದರು.
ಜಿ.ಐ.ಝಡ್.ನ ರಾಜ್ಯ ಯೋಜನಾ ಸಮನ್ವಯಾಧಿಕಾರಿ ನಮೆರ್ತಾ ಶರ್ಮಾ, ಕಾರವಾರ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವಪ್ರಸಾದ ಗಾಂವಕರ್, ಶಿರಸಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ. ರೂಪಾ ಪಾಟೀಲ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಪ್ಲಾಂಟ್ ವಿಜ್ಞಾನಿ ಡಾ. ಎಂ.ಡಿ. ಸುಭಾಷ್ ಚಂದ್ರನ್, ಕಾಗಾಲ ಗ್ರಾಮದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನವೀನ ನಾಯ್ಕ ಮಾತನಾಡಿದರು.
ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಸಾಂಪ್ರದಾಯಿಕ ಭತ್ತದ ತಳಿಗಳನ್ನು ಸಂವರ್ಧಸಿದ ಆರ್.ಜಿ. ಭಟ್ ದೇವತೆಮನೆ ಹಾಗೂ 600ಕ್ಕೂ ಹೆಚ್ಚಿನ ಭತ್ತದ ತಳಿಗಳನ್ನು ಸಂಗ್ರಹಿಸಿದ ನಾಗರಾಜ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಡಾ. ನಾರಾಯಣ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಬೀಜ ಬ್ಯಾಂಕ್‌ನ ಕಾರ್ಯವೈಖರಿ, ವಿಶೇಷತೆ ಮತ್ತು ಉದ್ದೇಶವನ್ನು ವಿವರಿಸಿದರು. ಸ್ಕೊಡ್‌ವೆಸ್‌ನ ಯೋಜನಾ ಸಂಯೋಜಕ ಗಂಗಾಧರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮಕ್ಕೆ 150ಕ್ಕೂ ಅಧಿಕ ಪ್ರಗತಿಪರ ಕೃಷಿಕರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net