ನಗರದ ಮಿನಿ ವಿಧಾನಸೌಧದಲ್ಲಿ ಸೋಮವಾರ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ಜನಸ್ಪಂದನ ಸಭೆಗಳಲ್ಲಿ ಇದುವರೆಗೂ 428 ಅರ್ಜಿಗಳು ಸಾರ್ವಜನಿಕರಿಂದ ಸಲ್ಲಿಕೆ ಆಗಿವೆ. ಆದರೆ, ಇದುವರೆಗೆ ಅಧಿಕಾರಿಗಳು ಸ್ಪಂದಿಸಿ ತಹಸೀಲ್ದಾರರಿಗೆ ವರದಿ ಸಲ್ಲಿಸಿರುವುದು ಕೇವಲ 5 ಅರ್ಜಿಗಳಿಗೆ ಮಾತ್ರ. ಈ ಅರ್ಜಿಗಳ ಬಗ್ಗೆ ತಹಸೀಲ್ದಾರರೂ ಗಮನ ಹರಿಸಬೇಕಿತ್ತು. ಸಾರ್ವಜನಿಕರು ಅರ್ಜಿ ಕೊಟ್ಟ ತಕ್ಷಣ ಸಮಸ್ಯೆ ಬಗೆಹರಿದು ಹೋಗುತ್ತದೆ ಎಂದಲ್ಲ. ಅವಕ್ಕೂ ಸಮಸ್ಯೆಗಳಿವೆ. ಆದರೆ, ಅಧಿಕಾರಿಗಳು ಆ ಅರ್ಜಿಯ ಪರಿಶೀಲನೆ ಮಾಡಿ, ಸ್ಥಳಕ್ಕೆ ತೆರಳಿ ಯಾವ ರೀತಿ ಅರ್ಜಿದಾರರ ಸಮಸ್ಯೆ ಬಗೆಹರಿಸಬಹುದು ಎಂಬ ಮಾಹಿತಿಯನ್ನಾದರೂ ಅಧಿಕಾರಿಗಳು ನೀಡಬೇಕು. ಸಾರ್ವಜನಿಕರು ಸುಮ್ಮನೆ ಅರ್ಜಿ ಕೊಡುವುದು, ನಾವು ಜನಸ್ಪಂದನಾ ಕಾರ್ಯಕ್ರಮ ಮುಗಿಸಿ ಹೋಗುವುದು ಮಾಡಿದರೆ ಅದಕ್ಕೆ ಅರ್ಥವಿಲ್ಲ. ಈ ರೀತಿ ಜನಸ್ಪಂದನಾ ಸಭೆ ನಡೆಸಲು ನಮಗೇನು ಕೆಲಸ ಇಲ್ಲ ಎಂದು ತಿಳಿದುಕೊಂಡಿದ್ದೀರಾ ಎಂದ ಭೀಮಣ್ಣ ಹರಿಹಾಯ್ದರು. ಮುಂದಿನ 15 ದಿನಗಳೊಳಗಾಗಿ ಈ ಅರ್ಜಿಗಳ ಪರಿಶೀಲನೆ, ಸ್ಥಿತಿಗತಿಯ ಬಗ್ಗೆ ತಹಸೀಲ್ದಾರರಿಗೆ ವರದಿ ಮಾಡಬೇಕು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು.