ಶಿರಸಿ: ಜಿಲ್ಲಾ ಕೈಗಾರಿಕಾ ಕೇಂದ್ರದ ಪರವಾನಗಿ ಪಡೆಯದೇ ಮತ್ತು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ವೆಲ್ಡಿಂಗ್ ಕಾಮಗಾರಿ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶಿರಸಿ ತಾಲೂಕು ಸ್ಟೀಲ್ ಫ್ಯಾಬ್ರಿಕೇಶನ್ ಇಂಡಸ್ಟ್ರೀಸ್ ಅಸೋಸಿಯೇಷನ್ ಬನವಾಸಿ ಘಟಕದ ಸದಸ್ಯರು ಬನವಾಸಿ ಹೆಸ್ಕಾಂ ಕಚೇರಿ ಶಾಖಾಧಿಕಾರಿ ಯಾದವ್ ಬೋರಕರ್ ಅವರಿಗೆ ಮನವಿ ಸಲ್ಲಿಸಿದರು.
ವೆಲ್ಡಿಂಗ್ ಹಾಗೂ ಸ್ಟೀಲ್ ಫ್ಯಾಬ್ರಿಕೇಶನ್ ಉದ್ಯಮ ನಡೆಸುವವರು ನಿಯಮಾನುಸಾರ ಜಿಲ್ಲಾ ಕೈಗಾರಿಕಾ ಕೇಂದ್ರದ ಪರವಾನಗಿ ಹೊಂದಿ ವಿದ್ಯುತ್ ಸಂಪರ್ಕ ಪಡೆದು, ವಿದ್ಯುತ್ ಶುಲ್ಕ ಪಾವತಿಸುತ್ತಿದ್ದಾರೆ. ಆದರೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಪರವಾನಗಿ ಹೊಂದಿರದ ಕೆಲವರು ಬನವಾಸಿ ಹಾಗೂ ಸುತ್ತಲಿನ ಹಳ್ಳಿಗಳಿಗೆ ತೆರಳಿ ಅಕ್ರಮವಾಗಿ ವಿದ್ಯುತ್ ಪಡೆದು ಕಾಮಗಾರಿ ನಡೆಸುತ್ತಿರುವುದರಿಂದ ನಿಯಮ ಪಾಲಿಸುವ ಉದ್ಯಮಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಅಕ್ರಮ ವಿದ್ಯುತ್ ಬಳಕೆಯಿಂದ ಇಲಾಖೆಗೆ ಆರ್ಥಿಕ ನಷ್ಟ ಉಂಟಾಗುವುದಲ್ಲದೆ, ವಿದ್ಯುತ್ ಅವಘಡ ಸಂಭವಿಸುವ ಸಾಧ್ಯತೆಯೂ ಇದೆ. ಹೀಗಾಗಿ ಹೆಸ್ಕಾಂ ಅಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸಿ ಅಕ್ರಮ ಸಂಪರ್ಕಗಳನ್ನು ಪತ್ತೆ ಹಚ್ಚಿ, ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಪಿಎಸೈ ಮಹಾಂತಪ್ಪ ಕುಂಬಾರ, ಗ್ರಾಪಂ ಕಾರ್ಯದರ್ಶಿ ರಾಘವೇಂದ್ರ ಅವರಿಗೂ ಮನವಿ ಸಲ್ಲಿಸಲಾಯಿತು. ಅಸೋಸಿಯೇಷನ್‌ನ ಬನವಾಸಿ ಘಟಕದ ಅಧ್ಯಕ್ಷ ಗಣಪತಿ ಮಡಿವಾಳ, ಉಪಾಧ್ಯಕ್ಷ ಪರಮೇಶ್ವರ ಮಡಿವಾಳ, ಕಾರ್ಯದರ್ಶಿ ಅಣ್ಣಪ್ಪ ನಾಯ್ಕ, ಖಜಾಂಚಿ ಸಂತೋಷ ನಾಯ್ಕ, ಸದಸ್ಯರಾದ ಶಿವರಾಜ್ ಆಚಾರ್ಯ, ಅಶ್ವಿನಿ ನಾಯ್ಕ, ಸುಭಾಷ್ ಆರ್.ಎಮ್. ರವಿ ಕುರುಬರ, ಉದಯರವಿ ನಾಯ್ಕ, ಶ್ರೀನಿವಾಸ, ದಿನೇಶ, ಗಣೇಶ ನಾಯ್ಕ, ಸಂಜೀವ್ ನಾಯ್ಕ, ಶಿವರಾಜ ಚನ್ನಯ್ಯ, ಮಂಜುನಾಥ ಕುರುಬರ, ವಿಶ್ವನಾಥ ಬಡಿಗೇರ ಉಪಸ್ಥಿತರಿದ್ದರು.