ಎಚ್ಚರ!! 1157 ನಕಲಿ ಯುಆರ್‌ಎಲ್‌ಗಳು ಪತ್ತೆ

ಸೈಬರ್‌ ಸೆಲ್‌ನಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on: 

ಕಾರವಾರ: ಮೊಬೈಲ್‌ನಲ್ಲಿ ಬಂದ ಸಂದೇಶಗಳನ್ನು ಆಧರಿಸಿ ಕಂಡಕಂಡ ಲಿಂಕ್ ಒತ್ತುವ ಮೊದಲು, ಕಂಡಕಂಡ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವ ಮೊದಲು ಎಚ್ಚರದಿಂದಿರುವುದು ಒಳಿತು.

ಇಂಟರ್‌ನೆಟ್ ಯುಗ ವಿಸ್ತಾರವಾಗುತ್ತಿದ್ದಂತೆ ಅದನ್ನೇ ಬಳಸಿ, ಜನರನ್ನು ದೋಚುವರೂ ಹೆಚ್ಚಿದ್ದಾರೆ. ಉತ್ತರ ಕನ್ನಡದಂಥ ಜಿಲ್ಲೆಯಲ್ಲೂ ಪ್ರತಿ ವರ್ಷ ಕೋಟ್ಯಂತರ ರೂ. ಸೈಬರ್‌ ಕಳ್ಳರ ಪಾಲಾಗುತ್ತಿದೆ. ಪ್ರತಿ ವಾರಕ್ಕೊಂದು ಹೊಸ ರೂಪದ ಮೋಸದ ಜಾಲಗಳು ಪತ್ತೆಯಾಗುತ್ತಿವೆ. ಜಿಲ್ಲೆಯ ಸೈಬರ್ ಅಪರಾಧಗಳ ಪೊಲೀಸ್ ಠಾಣೆ ಅಂಥ ಆತಂಕಕಾರಿ ಮಾಹಿತಿಯೊಂದನ್ನು ಹೊರ ಹಾಕಿದೆ.

ಆನ್‌ಲೈನ್ ಗೇಮ್‌ಗಳು ನಿಷೇಧವಾಗಿದ್ದರೂ ನಕಲಿ ಅಪ್ಲಿಕೇಶನ್‌ಗಳ ಮೂಲಕ ಯುವಕರನ್ನು ಮರಳು ಮಾಡುತ್ತಿರುವ ಕಾರಣ ಪರಿಶೀಲನೆ ನಡೆಸಲಾಗಿತ್ತು. ಆಗ ಜಿಲ್ಲೆಯಲ್ಲಿ 1157 ನಕಲಿ ವೆಬ್‌ಸೈಟ್ ಹಾಗೂ ಮೊಬೈಲ್ ಅಪ್ಲಿಕೇಶನ್‌ಗಳು ಕಂಡುಬಂದಿವೆ. ಸಾರ್ವಜನಿಕರು ಇಂಥ ವೆಬ್‌ಸೈಟ್ ಅಥವಾ ಆ್ಯಪ್‌ಗಳನ್ನು ತಮ್ಮ ಇಲೆಕ್ಟ್ರಾನಿಕ್ ಸಾಧನಗಳಿಗೆ ಡೌನ್‌ಲೋಡ್ ಮಾಡಿಕೊಂಡಾಗ ಆರೋಪಿಗಳು ಅವರ ಖಾಸಗಿ ಮಾಹಿತಿಗಳನ್ನು ದುರ್ಬಳಕೆ ಮಾಡಿಕೊಂಡು ಅವರನ್ನು ಆಮಿಷಕ್ಕೆ ಒಡ್ಡುವ ಮೋಸ ಮಾಡುವ ಸಾಧ್ಯತೆಗಳಿರುತ್ತವೆ ಎಂದು ಸಿಇಎನ್ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಈ ಸಂಬಂಧ ಸೈಬರ್ ಅಪರಾಧಗಳ ಪೊಲೀಸ್ ಠಾಣೆಯ ಸಿಎಚ್‌ಸಿ ಸುರೇಶ ಎಚ್ ನಾಯ್ಕ ಅವರು ದೂರು ದಾಖಲಿಸಿದ್ದಾರೆ.

ಸಾಲ ನೀಡುವುದಾಗಿ ಮೋಸ:

ಗೂಗಲ್‌ನಲ್ಲಿ ನೋಡಿ ಆನ್‌ಲೈನ್ ಲೋನ್ ಆ್ಯಪ್ ಒಂದನ್ನು ಡೌನ್‌ಲೋಡ್ ಮಾಡಿದ ಮಹಿಳೆಯೊಬ್ಬಳು 6 ಲಕ್ಷ ಕಳೆದುಕೊಂಡ ಘಟನೆ ಹೊನ್ನಾವರದಲ್ಲಿ ನಡೆದಿದೆ.

ಮೊಬೈಲ್‌ನಲ್ಲಿ ಫ್ರೂಟಿಲಾ ರುಪೀ ಎಂಬ ಆ್ಯಪ್ ಕಂಡುಬಂದಿತ್ತು. ಅದರ ಲಿಂಕ್ ಒತ್ತಿದಾಗ ಹಲವು ಅಪ್ಲಿಕೇಶನ್‌ಗಳು ತೆರೆದುಕೊಂಡಿದ್ದವು. ಅದರಲ್ಲಿ ಟೈಮ್ಲಿ ಕ್ಯಾಶ್ ಎಂಬ ಅಪ್ಲಿಕೇಶನ್ ಡೌನ್‌ಲೋಡ್ ಆಗಿತ್ತು. ಅದರಲ್ಲಿ ಅವರಿಗೆ 30 ಸಾವಿರ ರೂ. ಲೋನ್ ಮಂಜೂರಾಗಿರುವುದಾಗಿ ತೋರಿಸುತ್ತಿತ್ತು. ಕೆಲವೇ ದಿನದಲ್ಲಿ ಕರೆ ಮಾಡಿದ ವ್ಯಕ್ತಿಯೊಬ್ಬ ನೀವು ಪಡೆದ ಸಾಲಕ್ಕೆ ಒಟ್ಟು 32 ಸಾವಿರ ರೂ.ಗಳನ್ನು ನೀಡಬೇಕು. ಇಲ್ಲದಿದ್ದಲ್ಲಿ ನಿಮ್ಮ ಎಲ್ಲ ಕಾಂಟ್ಯಾಕ್ಟ್ಗಳಿಗೆ ಸಾಲ ಪಡೆದಿದ್ದಾಗಿ ಸಂದೇಶ ಕಳಿಸಿ ಮಾನ ಹರಾಜು ಮಾಡುವುದಾಗಿ ಬೆದರಿಸಿದ್ದ. ಹೀಗೆ ಆಕೆಯನ್ನು ಬೆದರಿಸಿ ಹಂತ, ಹಂತವಾಗಿ 6.28 ಲಕ್ಷ ರೂ.ಗಳನ್ನು ತನ್ನ ವಿವಿಧ ಬ್ಯಾಂಕ್ ಖಾತೆಗಳಿಗೆ ಹಾಕಿಸಿಕೊಂಡಿದ್ದಾನೆ ಎಂದು ಮಹಿಳೆ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾಳೆ.