ಉಡುಪಿ ಜಿಲ್ಲೆಯಲ್ಲಿ ನಿರ್ಬಂಧ ಸಡಿಲಿಕೆ, ಎಲ್ಲ ಅಂಗಡಿ, ಹೋಟೆಲ್‌ಗಳಿಗೆ ಅವಕಾಶ

udupi sealdown
Published on

ಉಡುಪಿ: ಉಡುಪಿ ಸಹಿತ ಆರು ಜಿಲ್ಲೆಯ ನಿರ್ಬಂಧ ಸಡಿಲಿಸಿ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಈ ಹಿಂದೆ ರಾಜ್ಯ ಸರ್ಕಾರ ಶೇ.5 ಪಾಸಿಟಿವಿಟಿ ದರ ಹೊಂದಿದ್ದ 16 ಜಿಲ್ಲೆಗಳಿಗೆ ಜೂನ್ 21 ರಿಂದ ಅಂತರ್‌ಜಿಲ್ಲಾ ಸಾರಿಗೆ ಸಹಿತ ಎಲ್ಲ ವಹಿವಾಟುಗಳಿಗೆ ಅವಕಾಶ ನೀಡಿತ್ತು. ಇದರಲ್ಲಿ ಪಾಸಿಟಿವಿಟಿ ಪ್ರಮಾಣ 5ಕ್ಕಿಂತ ಹೆಚ್ಚಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆ ಕೈ ಬಿಡಲಾಗಿತ್ತು. ಈ ಬಗ್ಗೆ ಉಡುಪಿಯ ಶಾಸಕರು, ಸಂಸದರು ಸರ್ಕಾರವನ್ನು ಒತ್ತಾಯಿಸಿದ್ದು, ಉಡುಪಿ ಜಿಲ್ಲೆಯನ್ನು ಅನ್‌ಲಾಕ್ ಪಟ್ಟಿಗೆ ಸೇರಿಸಿದೆ. ಅದರಂತೆ ಬೆಳಗ್ಗೆ 6 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ಎಲ್ಲ ಅಂಗಡಿಮುಂಗಟ್ಟು ತೆರೆಯಲು ಅನುವು ಮಾಡಿಕೊಡಲಾಗಿದೆ.

ಎಲ್ಲಾ ಉತ್ಪಾದನಾ, ಕೈಗಾರಿಕೆ ಘಟಕಗಳು, ಸರ್ಕಾರಿ, ಖಾಸಗಿ ಕಚೇರಿಗಳಿಗೆ ಶೇ.50ರ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿಸಿದೆ. ಎಸಿ ಬಳಕೆ ಮಾಡದೆ ಮೊಬೈಲ್, ಬಟ್ಟೆ, ಚಪ್ಪಲಿ, ಫರ್ನಿಚರ್, ಕಟ್ಟಡ ನಿರ್ಮಾಣ ಮತ್ತು ದುರಸ್ತಿಗೆ ಸಂಬಂಧಿಸಿದ ಸಾಮಗ್ರಿಗಳ ಅಂಗಡಿ, ಗ್ಯಾರೇಜ್, ದ್ವಿಚಕ್ರ, ಕಾರುಗಳ ಶೋರೂಂ, ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್ ಅಂಗಡಿ ಸೇರಿದಂತೆ ಎಲ್ಲ ಬಗೆಯ ಅಂಗಡಿ-ಮುಂಗಟ್ಟು ತೆರೆಯಲು ಅನುವು ಮಾಡಿಕೊಡಲಾಗಿದೆ. ಹೋಟೆಲ್, ಕ್ಲಬ್ಸ್, ರೆಸ್ಟೋರೆಂಟ್‌ಗಳಲ್ಲಿ (ಮದ್ಯಪಾನ ಹೊರತುಪಡಿಸಿ) ಕುಳಿತು ತಿನ್ನಲು ಸಾಯಂಕಾಲ 5 ಗಂಟೆವರೆಗೆ ಶೇ. 50 ಸಾಮರ್ಥ್ಯದೊಂದಿಗೆ ಅವಕಾಶ ಮಾಡಿಕೊಡಲಾಗುವುದು.

ಹೊರಾಂಗಣ ಕ್ರೀಡೆಗಳಿಗೆ, ವೀಕ್ಷಕರಿಲ್ಲದೇ ಅನುಮತಿ ನೀಡಲಾಗಿದೆ. ಲಾಡ್ಜ್, ರೆಸಾರ್ಟ್‌ಗಳಲ್ಲಿ ಶೇ.50 ಸಾಮರ್ಥ್ಯದೊಂದಿಗೆ ಅವಕಾಶ ನೀಡಲಾಗಿದೆ. ಜಿಮ್ ಗಳಲ್ಲಿ ಶೇ 50 ಸಾಮರ್ಥ್ಯದೊಂದಿಗೆ (ಹವಾ ನಿಯಂತ್ರಣ ಇಲ್ಲದೇ) ಅವಕಾಶ ನೀಡಿದೆ. ರಾಜ್ಯವ್ಯಾಪಿ ಅನ್ವಯವಾಗುವಂತೆ ಪ್ರತಿದಿನ ನೈಟ್‌ಕರ್ಫ್ಯೂ ರಾತ್ರಿ 7 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಇರುತ್ತದೆ. ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಬಸ್ ಸಂಚಾರವು ಶೇ.50 ಪ್ರಯಾಣಿಕರಿಗೆ ಮಿತಿಗೊಳಿಸಿ ಸಂಚಾರಕ್ಕೆ ಅನುಮತಿಸಿದೆ.

ಹವಾನಿಯಂತ್ರಿತ ಅಂಗಡಿಗಳು, ವಾಣಿಜ್ಯ ಸಂಕೀರ್ಣ, ಮಾಲ್ಗಳು ಕಾರ್ಯನಿರ್ವಹಿಸಲು ಅವಕಾಶವಿರುವುದಿಲ್ಲ. ರಾಜಕೀಯ ಸಭೆ, ಸಮಾರಂಭಗಳಿಗೆ ಅವಕಾಶವಿಲ್ಲ. ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಪೂಜೆ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶವಿಲ್ಲ. ಶಿಕ್ಷಣ ಸಂಸ್ಥೆ, ಸಿನಿಮ ಮಂದಿರ ಶಾಪಿಂಗ್ ಮಾಲ್‌ಗಳಲ್ಲಿ ಚಟುವಟಿಕೆಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ವಾಕಿಂಗ್, ಜಾಗಿಂಗ್‌ಗಾಗಿ ಬೆಳಿಗ್ಗೆ 5 ರಿಂದ ಸಾಯಂಕಾಲ 6 ಗಂಟೆಯವರೆಗೆ ಉದ್ಯಾನವನಗಳಲ್ಲಿ ಅವಕಾಶ. 2 ಪ್ರಯಾಣಿಕರೊಂದಿಗೆ ಟ್ಯಾಕ್ಸಿ, ಆಟೋ ರಿಕ್ಷಾಗಳಿಗೆ ಸಂಚರಿಸಲು ತಹಸೀಲ್ದಾರ್ ಅನುಮತಿಯೊಂದಿಗೆ 40 ಜನರನ್ನು ಒಳಗೊಂಡು ಮದುವೆ ಮತ್ತು ಶವಸಂಸ್ಕಾರ, ಅಂತ್ಯಕ್ರಿಯೆಗಳನ್ನು ಗರಿಷ್ಠ 5 ಜನರೊಂದಿಗೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳ ಸರ್ಕಾರ ಹೊರಡಿಸಿದ ಮಾರ್ಗಸೂಚಿಯಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net