

ಹನೂರು : ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ದೇವರಮಡು ಅರಣ್ಯ ಪ್ರದೇಶದಲ್ಲಿ ಗುರುವಾರ ವನ್ಯಜೀವಿಗಳನ್ನು ಬೇಟೆಯಾಡಲು ಸಿದ್ಧವಾಗಿದ್ದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಮ.ಬೆಟ್ಟ ಸಮೀಪದ ಆಣೆಹೊಲ ಗ್ರಾಮದ ತಂಬಡಿ ಮಾದಯ್ಯ (68) ಹಾಗೂ ನಾಗ ತಂಬಡಿ (53) ಬಂಧಿತರು. ಆರೋಪಿಗಳಿಬ್ಬರು ಗುರುವಾರ ಸಂಜೆ ಮಹದೇಶ್ವರಬೆಟ್ಟ ಶಾಖೆಯ ಸಿಪಿಟಿ 58ರ ದೇವರಮಡು ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಹೊಂಚು ಹಾಕುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಡಿಸಿಎಫ್ ಡಾ.ಸಂತೋಷ್‌ಕುಮಾರ್ ಹಾಗೂ ಎಸಿಎಫ್ ಚಂದ್ರಶೇಖರ ಪಾಟೀಲ್ ಅವರ ಮಾಗದರ್ಶನದಲ್ಲಿ ಆರ್‌ಎಫ್‌ಒ ಭಾರತಿ ನಂದಿಹಳ್ಳಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಉರುಳು, ಮಚ್ಚು ಹಾಗೂ ಇನ್ನಿತರ ಪರಿಕರಗಳನ್ನು ವಶಪಡಿಸಿಕೊಂಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒ ಶಿವರಾಜ ತಳವಾರ, ಗಸ್ತು ಅರಣ್ಯ ಪಾಲಕ ನಬಿಸಾಬ ಪೀರಸಾಬ ಮುಲ್ಲಾ ಹಾಗೂ ಇನ್ನಿತರ ಸಿಬ್ಬಂದಿ ಭಾಗವಹಿಸಿದ್ದರು.