

ತುಮಕೂರು: ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಕೆ ಆರೋಪದ ಹಿನ್ನೆಲೆಯಲ್ಲಿ ಶಿರಾ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ಆಯುಕ್ತ ಬಿ.ಟಿ.ರಂಗಸ್ವಾಮಿ ತುಮಕೂರಿನ ನಿವಾಸ, ಶಿರಾ ಕಚೇರಿ ಸೇರಿದಂತೆ ಐದು ಕಡೆ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದರು. ತುಮಕೂರು, ಬೆಂಗಳೂರಿನಲ್ಲಿ ಎರಡು ಮನೆ, ಸ್ವಂತ ಕೃಷಿ ಜಮೀನು, ಮೂರು ಕಾರು, 2 ಬೈಕ್ ಸೇರಿ 2 ಕೋಟಿಗು ಹೆಚ್ಚು ಮೌಲ್ಯದ ಚರಸ್ಥಿರಾಸ್ತಿ ಹೊಂದಿರುವುದು ಪತ್ತೆಯಾಗಿದೆ.
ನಗರದ ಹೊರವರ್ತುಲ ರಸ್ತೆಯ ಉತ್ಸವ ಕನ್ವೆನ್ಷನ್ ಹಿಂಭಾಗದ ಜಯನಗರ ದಣ ಹಿಂಭಾಗದ ರಂಗಸ್ವಾಮಿ ನಿವಾಸ "ರಾಯರಕೃಪಾ', ಶಿರಾದ ಸೂಡಾ ಕಚೇರಿ, ಬೆಂಗಳೂರಿನ ಎರಡು ಸ್ಥಳ ಹಾಗೂ ಹಿರಿಯೂರಿನಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿವೆ. ಬೆಳ್ಳಂಬೆಳಗ್ಗೆಯೇ 10ಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿ ರಂಗಸ್ವಾಮಿ ನಿವಾಸದ ಬಳಿ ಪ್ರತ್ಯಕ್ಷರಾಗಿದ್ದು ರಾತ್ರಿ 8 ಗಂಟೆಯಾದರು ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಕೆ ಸಂಬಂಧಿಸಿದ ಮಾಹಿತಿ ಪರಿಶೀಲನೆ ಹಾಗೂ ಕಡತಗಳನ್ನು ವಶಕ್ಕೆ ಪಡೆಯುವಲ್ಲಿ ನಿರತರಾಗಿದ್ದರು.
ಇದೇ ವೇಳೆ ಶಿರಾದ ಎಪಿಎಂಸಿ ಸಮೀಪದಲ್ಲಿರುವ ನಗರಾಭಿವೃದ್ಧಿ ಪ್ರಾಕಾರದ ಕಚೇರಿಯ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗ್ಗೆ ಕಚೇರಿ ಬಾಗಿಲು ತೆರೆಯುವ ಮುನ್ನ ಲೋಕಾಯುಕ್ತ ಇನ್ಸ್ಪೆಕ್ಟರ್ರಾವೇಂದ್ರ ನೇತೃತ್ವದ ತಂಡ ಹಾಜರಿದ್ದು ಲೇಔಟ್ ನಿರ್ಮಾಣಕ್ಕೆ ಸಂಬಂಧಿಸಿದ ವಿವಿಧ ಕಡತಗಳು ಹಾಗೂ ದಾಖಲೆಗಳನ್ನು ಪರಿಶೀಲಿಸಿತು. ಸಾರ್ವಜನಿಕರಿಂದ ಬಂದಿದ್ದ ದೂರುಗಳ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆಸಲಾಗಿದೆ. ಕಚೇರಿಯಲ್ಲಿದ್ದ ಸಿಬ್ಬಂದಿಯಿಂದಲು ಸಹ ಮಾಹಿತಿ ಸಂಗ್ರಹಿಸಲಾಗಿದೆ.
ತುಮಕೂರು ನಿವಾಸ, ಶಿರಾ ಕಚೇರಿಯಲ್ಲದೆ ಬೆಂಗಳೂರಿನ ಎರಡು ಸ್ಥಳಗಳು ಹಾಗೂ ಹಿರಿಯೂರಿನಲ್ಲಿಯೂ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ಪರಿಶೀಲನೆ ನಡೆಸಿ, ದಾಖಲೆಗಳ ಸಂಗ್ರಹದಲ್ಲಿ ತೊಡಗಿದ್ದಾರೆ.
ಬಿ.ಟಿ. ರಂಗಸ್ವಾಮಿ ಈ ಹಿಂದೆ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ (ಟೂಡಾ) ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ತುಮಕೂರು ಸ್ಮಾರ್ಟ್ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾಗಿಯೂ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಯೋಜನಾ ನಿರ್ದೇಶಕರಾಗಿ ಸಹ ಕರ್ತವ್ಯ ನಿರ್ವಹಿಸಿದ್ದರು. ಎರಡು ವರ್ಷಗಳಿಂದ ಶಿರಾ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.