ಗಂಭೀರವಾಗಿ ಸ್ವೀಕರಿಸಿ ವಕೀಲ ವೃತ್ತಿ...

Court Lead
Published on

ವಿದ್ಯಾರ್ಥಿಗಳಿಗೆ ನ್ಯಾಯಮೂರ್ತಿ ಎಚ್​.ಪಿ. ಸಂದೇಶ ಕರೆ

ಕಲ್ಪಿತ ನ್ಯಾಯಾಲಯ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪ್ರದಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ವಕೀಲ ವೃತ್ತಿಯ ಶಿಕ್ಷಣ ಆಯ್ಕೆ (ಚಾಯ್ಸ್​) ಆಗಿರಬೇಕೇ ಹೊರತು ಅವಕಾಶ (ಚಾನ್ಸ್​) ಆಗಿರಬಾರದು. ಇದು ಸಮಾಜದ ಸೇವೆಗೆ ಇರುವ ನೋಬಲ್​ (ತಿಳಿವಳಿಕೆ) ವೃತ್ತಿಯಾಗಿದೆ. ವಕೀಲರು ನ್ಯಾಯದ ಏಜೆಂಟರಾಗಿದ್ದು, ಹಣ ಗಳಿಕೆಗೆ ಆದ್ಯತೆ ನೀಡಬಾರದು. ನೊಂದವರಿಗೆ ನ್ಯಾಯ ಕೊಡಿಸಲು ಹೋರಾಡಬೇಕು. ಮಹಾತ್ಮ ಗಾಂಧೀಜಿಯೂ ಸಹ ಇದೇ ಸಂದೇಶ ನೀಡಿದ್ದು, ವಿದ್ಯಾರ್ಥಿಗಳು ಈ ವೃತ್ತಿಯನ್ನು ಗಂಭೀರವಾಗಿ ಸ್ವೀಕರಿಸಬೇಕು ಎಂದು ಹೈಕೋರ್ಟ್​ ನ್ಯಾಯಮೂರ್ತಿ

ಎಚ್​.ಪಿ. ಸಂದೇಶ ಕರೆ ನೀಡಿದರು.

ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ 3 ದಿನ ನಡೆದ ಪ್ರತಿಷ್ಠಿತ ಅಡ್ವೋಕೇಟ್​ ಪಿ.ಶಿವಾಜಿ ಶೆಟ್ಟಿ ಸ್ಮಾರಕ 9ನೇ ರಾಷ್ಟ್ರೀಯ ಮಟ್ಟದ ಕಲ್ಪಿತ ನ್ಯಾಯಾಲಯ ಸ್ಪರ್ಧೆಯಲ್ಲಿ ಏ.13ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಗೆಲುವು ಸಾಧಿಸಿದ ವಿಜೇತ ತಂಡಕ್ಕೆ ಟ್ರೋಫಿ ವಿತರಿಸಿ ಮಾತನಾಡಿದರು.

ಕ್ಷೀಣಿಸುತ್ತಿದೆ ವಿಶ್ವಾಸ

ಮದ್ರಾಸ್​ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಡಾ. ಪಿ.ಜ್ಯೋತಿಮಣಿ ಮಾತನಾಡಿ, ಇತ್ತೀಚೆಗಿನ ವರ್ಷಗಳಲ್ಲಿ ಜನರು ಸಣ್ಣ ಸಣ್ಣ ವಿಚಾರಗಳಿಗೂ ಕೋರ್ಟ್​ ಮೆಟ್ಟಿಲೇರುತ್ತಿದ್ದಾರೆ. ಅದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಸಕಾಲಕ್ಕೆ ತೀರ್ಪು ಲಭಿಸುತ್ತಿಲ್ಲ. ಹೀಗಾಗಿ ಜನರು ಭಾರತವೂ ಸೇರಿದಂತೆ ವಿಶ್ವದ ನ್ಯಾಯಾಂಗ ವ್ಯವಸ್ಥೆಯ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಅಮೆರಿಕದ ಸುಪ್ರೀಂ ಕೋರ್ಟ್​ನಲ್ಲಿ ಯಾವುದೇ ಪ್ರಕರಣವೂ ಬಾಕಿ ಇರುವುದಿಲ್ಲ. ಭಾರತದಲ್ಲಿ ಪ್ರತಿವರ್ಷ 10 ಸಾವಿರಕ್ಕೂ ಅಧಿಕ ಪ್ರಕರಣ ಇತ್ಯರ್ಥವಾಗುತ್ತಿದ್ದರೂ 65ರಿಂದ 70 ಸಾವಿರ ಪ್ರಕರಣ ಇತ್ಯರ್ಥವಾಗದೇ ಬಾಕಿ ಉಳಿಯುತ್ತಿದೆ. ಮದ್ರಾಸ್​ ಹೈಕೋರ್ಟ್​ನಲ್ಲಿ ನಾನು ಜಡ್ಜ್​ ಆದಾಗ 45 ವರ್ಷದ ಹಳೆಯ ಪ್ರಕರಣ ಬಾಕಿ ಇರುವುದು ಕಂಡು ಆತಂಕಗೊಂಡಿದ್ದೆ. ತಾವುಗಳು ಜಡ್ಜ್​ಗಳಾದರೆ ಕಾಲಮಿತಿಯೊಳಗೆ ಪ್ರಕರಣ ಇತ್ಯರ್ಥ ಮಾಡಬೇಕೆಂದು ಸಲಹೆಯಿತ್ತರು.

ಕಾಲೇಜಿನ ನಿರ್ದೇಶಕಿ ಪ್ರೊ. (ಡಾ.) ನಿರ್ಮಲಾಕುಮಾರಿ ಕೆ. ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪ್ರೊ. (ಡಾ.) ರಘುನಾಥ ಕೆ.ಎಸ್​. ಉಪಸ್ಥಿತರಿದ್ದರು.

ಸ್ಪರ್ಧೆಯ ಸಂಯೋಜಕಿ ಸುರೇಖಾ ಕೆ. ವಿಜೇತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿನಿ ಪ್ರಾಂಜಲಿ ಪ್ರಾರ್ಥಿಸಿದರು. ಪ್ರೊ.ರೋಹಿತ್​ ಅಮೀನ್​ ಸ್ವಾಗತಿಸಿದರು. ವೈಷ್ಣವಿ ಎಂ. ಹಾಗೂ ರೋಸ್​ ಥೆರೇಸಾ ಪೌಲ್​ ಅತಿಥಿಗಳನ್ನು ಪರಿಚಯಿಸಿದರು. ಪಾರ್ವತಿ ಎ.ಆರ್​. ಕಾರ್ಯಕ್ರಮ ನಿರ್ವಹಿಸಿದರು. ಡಾ. ಜಯಾ ಮೋಲ್​ ವಂದಿಸಿದರು.

ಬೆಂಗಳೂರು ಕೆಎಲ್​ಇ ಲಾ ಕಾಲೇಜು ಪ್ರಥಮ

ಸ್ಪರ್ಧೆಯಲ್ಲಿ ಬೆಂಗಳೂರಿನ ಕೆಎಲ್​ಇ ಲಾ ಕಾಲೇಜು ಪ್ರಥಮ ಸ್ಥಾನ ಪಡೆಯುವ ಮೂಲಕ 20 ಸಾವಿರ ರೂ. ನಗದು ಹಾಗೂ ಟ್ರೋಫಿ ಸ್ವೀಕರಿಸಿತು. ಬೆಂಗಳೂರಿನ ಸೌಂದರ್ಯ ಲಾ ಕಾಲೇಜು 10 ಸಾವಿರ ರೂ. ನಗದು ಹಾಗೂ ರನ್ನರ್​ಅಪ್​ ಶೀಲ್ಡ್​ ಪಡೆಯಿತು. ಉತ್ತಮ ತೀರ್ಪು ಬರಹ ಸ್ಪರ್ಧೆಯಲ್ಲಿ ಮೈಸೂರು ವಿದ್ಯಾವರ್ಧಕ ಲಾ ಕಾಲೇಜಿನ ವಿಭಾಲಿ ಎಸ್​. ರಾಜ್​ (ಪ್ರ), ಪುತ್ತೂರು ವಿವೇಕಾನಂದ ಲಾ ಕಾಲೇಜಿನ ಸ್ಫೂರ್ತಿ ಪಿ.ಇ. (ದ್ವಿ) ಬಹುಮಾನ ಪಡೆದರು. ಬೆಸ್ಟ್​ ಲೇಡಿ ಅಡ್ವೋಕೇಟ್- ಬೆಂಗಳೂರು ಕೆಎಲ್​ಇ ಲಾ ಕಾಲೇಜಿನ ಚಂದ್ರಲೇಖಾ ಕೆ.ಎಂ. ಬೆಸ್ಟ್​ ಜಂಟಲ್​- ಹುಬ್ಬಳ್ಳಿ ಕೆಎಲ್​ಇ ಸೊಸೈಟಿಯ ಜಿ.ಕೆ. ಲಾ ಕಾಲೇಜಿನ ಸಂತೋಷಕುಮಾರ ಹರ್ತಿ. ಬೆಸ್ಟ್​ ಮೆಮೋರಿಯಲ್ಸ್​- ಬೆಳಗಾವಿಯ ಆರ್​.ಎಲ್​. ಲಾ ಕಾಲೇಜು ಪ್ರಶಸ್ತಿ ಪಡೆದವು.

ವೃತ್ತಿಪರರಾದ ತಾವುಗಳು ನಿರಂತರ ಓದಿಗೆ ಆದ್ಯತೆ ನೀಡಬೇಕು. ದೇಶವೂ ಸೇರಿದಂತೆ ವಿಶ್ವದ ಕೋರ್ಟ್​ಗಳಲ್ಲಿ ನೀಡುವ ತೀರ್ಪುಗಳ ಬಗ್ಗೆ ಅಧ್ಯಯನ ಮಾಡಬೇಕು. ಸಾಧಕರ ಬಯೋಗ್ರಫಿ, ಅಟೋಗ್ರಫಿಯನ್ನು ಓದಬೇಕು. ಅದರಿಂದ ವಕೀಲ ವೃತ್ತಿಯಲ್ಲಿ ನೈಪುಣ್ಯತೆ ಸಾಧಿಸಬಹುದು. | ಪ್ರೊ. (ಡಾ.) ಚಿದಾನಂದ ರೆಡ್ಡಿ ಎಸ್​. ಪಾಟೀಲ. ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ, ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net