

ಪ್ರಶಾಂತ ಭಾಗ್ವತ ಉಡುಪಿ
ಮಳೆಗಾಲದ ಕಾರಣದಿಂದಾಗಿ ಆಳ ಸಮುದ್ರದಲ್ಲಿ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧದ ಅವಧಿಯಿದ್ದು, ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೂ ಸಹ ಆರಂಭದಲ್ಲೇ ತೊಡಕು ಕಂಡುಬಂದಿದೆ.
ಬುಧವಾರ ದಿನವಿಡೀ ಬಿಸಿಲು ಇರುವ ಹಿನ್ನೆಲೆಯಲ್ಲಿ ಮಲ್ಪೆ ಭಾಗದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರಲ್ಲಿ ಕಂತುಬಲೆ ಮೀನುಗಾರರು ಜೂನ್ 19ರಂದು ಮೀನುಗಾರಿಕೆಗಾಗಿ ಕಡಲಿಗೆ ಇಳಿದಿದ್ದರು. ಆದರೆ, ಮೀನು ಬೇಟೆಯಾಡಲು ಸಾಧ್ಯವಾಗದೆ ಬರಿಗೈಯಲ್ಲಿ ಬಂದರಿಗೆ ಮರಳಿದ್ದಾರೆ.
ಜಿಲ್ಲೆಯ ಕರಾವಳಿಯಲ್ಲಿ ಜೂ.18ರ ವರೆಗೂ ರೆಡ್ ಅರ್ಲಟ್ ಇರುವುದರಿಂದ ಸಾಂಪ್ರದಾಯಿಕ ಮೀನುಗಾರಿಕೆಗೂ ಸಹ ಕಡಲಮಕ್ಕಳು ಸಮುದ್ರಕ್ಕೆ ಇಳಿದಿರಲಿಲ್ಲ. ಕಳೆದ ಎರಡು ದಿನದಿಂದ ಬಿಸಿಲು ವಾತಾವರಣ ಹಾಗೂ ಮಳೆ ಇಲ್ಲದ ಹಿನ್ನೆಲೆಯಲ್ಲಿ ಕಂತುಬಲೆ ಮೀನುಗಾರರು ಮತ್ಸ್ಯ ಬೇಟೆಗಾಗಿ ಕಡಲಿಗೆ ಇಳಿದಿದ್ದರು. ಆದರೆ, ಸಮುದ್ರದಲ್ಲಿ ಇನ್ನೂ ಸಹ ತೂಫಾನ್ ನ ಪ್ರಭಾವ ಇದ್ದು, ಭಾರಿ ಬಿರುಗಾಳಿ ಬೀಸುತ್ತಲಿತ್ತು. ಸಮುದ್ರದ ಅಲೆಗಲೂ ಸಹ ಗಾಳಿಯಿಂದಾಗಿ ಸುಮಾರು 4 ಮೀಟರ್ನಷ್ಟು ಎತ್ತರದಲ್ಲಿ ಅಬ್ಬರಿಸುತ್ತಿತ್ತು. ಹೀಗಾಗಿ ದುರಂತ ಸಂಭವಿಸಬಹುದಾದ ಸಾಧ್ಯತೆಯಿಂದ ಬಲೆ ಬೀಸದೆ ಬೋಟ್ನೊಂದಿಗೆ ಮಲ್ಪೆ ಬಂದರಿಗೆ ಮರಳಿ ಬಂದಿದ್ದಾರೆ.
ಜೂ.1ರ ಬಳಿಕ ಸಾಂಪ್ರದಾಯಿಕ ಮೀನುಗಾರಿಕೆಗೆ ಕಡಲ ಮಕ್ಕಳು ಅಣಿಯಾಗಿದ್ದರು. ಆದರೆ, ಭಾರಿ ಮಳೆ ಮುಂದುವರಿದ ಕಾರಣದಿಂದ ಹಿಂದಡಿ ಇಟ್ಟಿದ್ದರು. ಜೂ.9ರಂದು ನಾಡದೋಣಿ ಮೀನುಗಾರರೆಲ್ಲ ಸೇರಿ ಮಲ್ಪೆಯ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ, ಗಣಹೋಮ ನಡೆಸಿದ್ದರು. ಅಲ್ಲದೆ, ಸಮುದ್ರ ರಾಜನಿಗೆ ವಿಶೇಷ ಪೂಜೆ ಸಲ್ಲಿಸಿ, ಮತ್ಸ್ಯ ಸಂಪತ್ತು ವೃದ್ಧಿಸುವಂತೆ ಹಾಗೂ ಮೀನುಗಾರರಿಗೆ ರಕ್ಷಣೆ ನೀಡುವಂತೆ ಸಾಮೂಹಿಕ ಪ್ರಾರ್ಥನೆ ಮಾಡಿದ್ದರು. ಆದರೆ, ಒಂದು ವಾರದಿಂದ ನಿರಂತರ ಮಳೆ ಸುರಿಯುತ್ತಲೇ ಇದ್ದು, ನಾಡದೋಣಿ ಮೀನುಗಾರಿಕೆಗೂ ಆರಂಭದಲ್ಲೇ ವಿಷ್ನ ಉಂಟಾಗಿದೆ. ಮೀನು ಹಿಡಿಯಲು ಹೋಗಿದ್ದರೂ ಪ್ರತಿಕೂಲ ಪರಿಸ್ಥಿತಿಯಿಂದ ಬರಿಗೈಲಿ ಬರುವಂತಾಗಿದೆ ಎಂದು ಮಲ್ಪೆಯ ಮೀನುಗಾರ ಮುಖಂಡ ಕೃಷ್ಣ ಎಸ್. ಸುವರ್ಣ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.
ಸಮುದ್ರದಲ್ಲಿ ಇನ್ನೂ ಚಂಡಮಾರುತದ ಪ್ರಭಾವ ಇದ್ದು, ಗುರುವಾರ ಮೀನುಗಾರಿಕೆಗೆ ತೆರಳಿದ್ದ ಸುಮಾರು 10 ನಾಡದೋಣಿ ಕಂತುಬಲೆ ಮೀನುಗಾರರು ನಿರೀಕ್ಷಿತ ಮೀನು ಸಿಗದೆ ವಾಪಸ್ ಬಂದಿದ್ದಾರೆ. ಪಟ್ಟೆಬಲೆ ಮತ್ತು ಕಂತುಬಲೆ ಮೀನುಗಾರರು ಸಜ್ಜಾಗಿದ್ದರೂ ಹೋಗಿಲ್ಲ. ಹೀಗಾಗಿ ಜೂ.25ಕ್ಕೆ ಸಂಪ್ರದಾಯಿಕ ನಾಡದೋಣಿ, ಟ್ರಾಲ್ ದೋಣಿ, ಕಂತುಬಲೆ ದೋಣಿಯವರು ಮಲ್ಪೆ ಬಂದರಿನಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದ ಬಳಿಕವೇ ಕಡಲಿಗೆ ಇಳಿಯಲು ನಿರ್ಧರಿಸಿದ್ದೇವೆ. | ಸುಂದರ್ ಸಾಲಿಯಾನ್. ಅಧ್ಯಕ್ಷ. ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ, ಮಲ್ಪೆ ವಿಭಾಗ.