ಮುದ್ದೇಬಿಹಾಳ: ತೊಗರಿ ಕಾಳು ಕಟ್ಟದೆ ಉಂಟಾಗುತ್ತಿರುವ ಸಮಸ್ಯೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳು ಇರುವುದರಿಂದ ಇಲಾಖೆಯ ಎಲ್ಲರೂ ಅಲರ್ಟ್ ಆಗಿರುವಂತೆ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕಿ ರೂಪಾ ಎಲ್ ಅವರು ವಿಜಯಪುರದ ತಮ್ಮ ಕಚೇರಿಯಲ್ಲಿ ಸೋಮವಾರ ಉಪ ನಿರ್ದೇಶಕರು ಮತ್ತು ಎಲ್ಲ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಸಭೆ ನಡೆಸಿ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ವಿಜಯವಾಣಿಗೆ ತಿಳಿಸಿವೆ.
ತಾಲೂಕು ಸೇರಿ ಜಿಲ್ಲೆಯಾದ್ಯಂತ ತೊಗರಿ ಬೆಳೆ ಕಾಳು ಕಟ್ಟುವ ಸಮಸ್ಯೆ ಎದುರಿಸುತ್ತಿರುವುದರಿಂದ ತೊಗರಿ ಬಿತ್ತಿದ ರೈತರು ಕಂಗಾಲಾಗುತ್ತಿರುವ, ಆತಂಕ್ಕೊಳಗಾಗುತ್ತಿರುವ ಕುರಿತು ವಿಜಯವಾಣಿ ನ.23 ರಂದು ‘ಕಾಳು ಕಟ್ಟದೆ ಉದುರುವ ಹೂವು’ ಶಿರೋನಾಮೆಯಡಿ ವಿಶೇಷ ವರದಿ ಪ್ರಕಟಿಸಿತ್ತು.
ಏತನ್ಮಧ್ಯೆ ಶುಕ್ರವಾರವೇ ವರದಿ ನೋಡಿದ ಕೂಡಲೇ ಕೃಷಿ ಇಲಾಖೆಯ ಹಿರಿಯ, ಕಿರಿಯ ಅಧಿಕಾರಿಗಳು ಜಾಗೃತರಾಗಿದ್ದರು. ಶನಿವಾರ, ಭಾನುವಾರ ಸರ್ಕಾರಿ ಕಚೇರಿಗಳಿಗೆ ರಜೆ ಇದ್ದ ಕಾರಣ ಹೆಚ್ಚಿನ ಚರ್ಚೆ ಆಗಿರಲಿಲ್ಲ.
ವರದಿಗೆ ಪೂರಕವಾಗುವಂತೆ ಹಲವು ರೈತರು ತಾಲೂಕಾಡಳಿತ, ಜಿಲ್ಲಾಡಳಿತಕ್ಕೆ ತೊಗರಿ ಬೆಳೆಯ ಸಮೇತ ಆಗಮಿಸಿ ಕಳಪೆ ಗುಣಮಟ್ಟದ ಬೀಜಗಳ ಪೂರೈಕೆಯಿಂದ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂದು ದೂರಿ ಮನವಿ ಸಲ್ಲಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಜಂಟಿ ಕೃಷಿ ನಿರ್ದೇಶಕರು ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಿಂದ ಬೀಜ ವಿತರಣೆ ಮಾಡಿರುವ, ಅವುಗಳನ್ನು ವಿತರಿಸಿರುವ ಸರ್ಕಾರಿ, ಖಾಸಗಿ ಏಜೆನ್ಸಿಗಳ ಮಾಹಿತಿ ಪಡೆದುಕೊಂಡಿರುವುದು ಚರ್ಚೆಗೆಡೆಮಾಡಿದೆ. ಕಳಪೆ ಬೀಜ ಪೂರೈಸಿರುವ ಆರೋಪಗಳ ಬೆನ್ನಲ್ಲೇ ಅಧಿಕಾರಿಗಳು ಮಾಹಿತಿ ಕಲೆಹಾಕತೊಡಗಿರುವುದು ಮುಂದಿನ ಪರಿಣಾಮಗಳನ್ನು ಎದುರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿರಬಹುದು ಎನ್ನುವ ಅಂಶಗಳನ್ನು ಬಿಚ್ಚಿಟ್ಟಂತಾಗಿದೆ.
ಜಿಲ್ಲಾಮಟ್ಟದ ಸಭೆಯಲ್ಲಿ ತೊಗರಿ ಬೆಳೆ ಕುರಿತು ಚರ್ಚೆ ನಡೆದಿದೆ. ಮುದ್ದೇಬಿಹಾಳ ತಾಲೂಕಿಗೆ ಕೃಷಿ ವಿಜ್ಞಾನಿಗಳನ್ನು ಕಳಿಸಲು ಜಂಟಿ ಕೃಷಿ ನಿರ್ದೇಶಕರು ಸೂಚಿಸಿದ್ದಾರೆ. ಬುಧವಾರ ವಿಜ್ಞಾನಿಗಳು ನಮ್ಮ ತಾಲೂಕಿನಲ್ಲಿ ತೊಗರಿ ಬೆಳೆ ಪರಿಶೀಲನೆ ನಡೆಸುವ ನಿರೀಕ್ಷೆ ಇದೆ.
ಸುರೇಶ ಭಾವಿಕಟ್ಟಿ, ಸಹಾಯಕ ಕೃಷಿ ನಿರ್ದೇಶಕರು, ಮುದ್ದೇಬಿಹಾಳ