

ಕುಳಗೇರಿ ಕ್ರಾಸ್: ಸಿರಿತನ ಬಂದರೆ ಮನಸ್ಥಿತಿ ಮತ್ತು ಪರಿಸ್ಥಿತಿ ಎರಡೂ ಬದಲಾಗುತ್ತವೆ. ಬಸವಾದಿ ಶರಣರು ಮಾನವನ ಶರೀರವನ್ನು ವಚನಗಳಲ್ಲಿ ಅರ್ಥೈಸಿ, ಸರ್ವಸಂಘ ಪರಿತ್ಯಾಗಿಗಳಾಗಿ ಲೌಕಿಕ ಪಾರಮಾರ್ಥಗಳನ್ನು ಗೆದ್ದವರು ಎಂದು ಶಾಂತಲಿಂಗ ಶ್ರೀಗಳು ಹೇಳಿದರು.
ಶಿರೋಳ ತೋಂಟದಾರ್ಯ ಶಾಖಾಮಠದಲ್ಲಿ ನಡೆದ ಬಸವ ಪುರಾಣ ಪ್ರವಚಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕಾಯವೇ ಭಗವಂತನಿಗೆ ಅರ್ಪಿತವಾಗಬೇಕು. ವಚನಗಳಿಗೆ ಶ್ರೀಕಾರ ಹಾಕಿದ ಶರಣ ದಾಸೀಮಯ್ಯ, ಸುರಗಿ ಚೌಡಯ್ಯ, ಮೋಳಿಗೆ ಮಾರಯ್ಯ, ಕೃಷಿ ಕಾಯಕದ ಇಳಿಹಾಳ ಬೊಮ್ಮಯ್ಯ ನಮ್ಮ ರೈತ ಸಮುದಾಯದ ಆದರ್ಶ ಎಂದರು.
ಬಸವ ಪುರಾಣಕ್ಕೆ ಬಸವ ಬುತ್ತಿ ಸೇವೆ: ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದ ಭಕ್ತರು ಬಸವ ಬುತ್ತಿ ತಂದು ಶ್ರೀಮಠಕ್ಕೆ ಸಮರ್ಪಿಸಿದರು. ರೊಟ್ಟಿ, ಚಪಾತಿ, ಹೆಸರಕಾಳು ಪಲ್ಲೆ, ಬದನೆಕಾಯಿ ಪಲ್ಲೆ, ಪುಂಡಿ ಪಲ್ಲೆ, ಪುಠಾಣಿ ಚಟ್ನಿ, ಒಣಕಾರ, ಶೆಂಗಾ ಹೋಳಿಗೆ, ಬಾಣ, ಅನ್ನ ಸಾಂಬಾರ, ಪ್ರಸಾದ ಕಲ್ಯಾಣದ ದಾಸೋಹವನ್ನು ಸ್ಮರಿಸುವಂತಹ ಬಸವ ಬುತ್ತಿಯೊಂದಿಗೆ ಮೂರು ಟ್ರಾೃಕ್ಟರ್‌ನಲ್ಲಿ ನೂರಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರು. ಸಮರ್ಪಿಸಿದ ಬಸವ ಬುತ್ತಿಯನ್ನು ಒಟ್ಟಿಗೆ ಸೇರಿ ಸವಿದು ಬಸವ ಪುರಾಣದ ದಾಸೋಹದ ಮಹತ್ವ ಸಾರಿದರು.
ದಾಸೋಹ ದಾನಿಗಳಾದ ಮಲ್ಲನಗೌಡ ಪಾಟೀಲ, ಶಾಂತಮ್ಮ ಆಕಾಶಗೌಡ ಗಡಗಿ, ರವೀಂದ್ರ ಶಾಲದಾರ ಅವರನ್ನು ಸತ್ಕರಿಸಲಾಯಿತು. ನಿರ್ಮಲಾ ಸಿದ್ಧಯ್ಯ ಹಿರೇಮಠ ಮಹಿಳೆಯರಿಗೆ ವಸದಾನ ಮಾಡಿದರು. ಚಂದ್ರಗೌಡ ಪಾಟೀಲ, ಕೆ.ಡಿ. ಬಿಜಾಪೂರ ಹನಮಂತಗೌಡ ಪಾಟೀಲ, ಲಚ್ಚಪ್ಪನವರು, ದಾವಲಸಾಬ್ ಮತ್ತಿತರರನ್ನು ಶ್ರೀಮಠದ ವತಿಯಿಂದ ಸತ್ಕರಿಸಲಾಯಿತು.
ಬಸವ ಪುರಾಣ ಸಮಿತಿ ಉಪಾಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ಕಾರ್ಯದರ್ಶಿ ವೀರಯ್ಯ ದೊಡಮನಿ, ಶಿಲಾಮಂಟಪ ಸಮಿತಿ ಕೋಶಾದ್ಯಕ್ಷ ನಾಗನಗೌಡ ತಿಮ್ಮನಗೌಡ್ರ, ಉಪಾಧ್ಯಕ್ಷ ಗುರುಬಸವ ಶೆಲ್ಲಿಕೇರಿ, ಜಾತ್ರಾ ಸಮಿತಿ ಅಧ್ಯಕ್ಷ ಶಿವಾನಂದ ಯಲಿಬಳ್ಳಿ, ಗುರಬಸಯ್ಯ ನಾಗಲೋಟಿಮಠ, ಲೋಕಪ್ಪ ಕರಕೀಕಟ್ಟಿ, ಬಸಣ್ಣ ಕುಪ್ಪಸ್ತ, ಪ್ರಭಾಕರ ಉಳ್ಳಾಗಡ್ಡಿ, ಸುರೇಶ ಬನ್ನಿಗಿಡದ, ಮಲ್ಲಪ್ಪ ಕುಪ್ಪಸ್ತ, ಜಗದೀಶ ವಸದ, ಮುತ್ತಪ್ಪ ಜೋರಲ, ಶರಣಪ್ಪಗೌಡ ತಿರಕನಗೌಡ್ರ ಇದ್ದರು.