ಮೈಸೂರಿನ ಕಾವಾದಲ್ಲಿ ಕಲಾಲೋಕದ ವೈಭವ


 ಮೈಸೂರಿನ ಕಾವಾದಲ್ಲಿ ಚಿತ್ರಕಲೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು
ಮೈಸೂರಿನ ಕಾವಾದಲ್ಲಿ ಚಿತ್ರಕಲೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು
Published on: 

ಮೈಸೂರು: ನಾಡಹಬ್ಬ ದಸರಾ ಸಂಭ್ರಮಕ್ಕೆ ಕಲೆಯ ಸೊಬಗು ಮತ್ತಷ್ಟು ಮೆರುಗು ನೀಡಿದೆ. ನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ) ಆವರಣದಲ್ಲಿ ದಸರಾ ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿ ವತಿಯಿಂದ ಆಯೋಜಿಸಿರುವ ಕಲಾ ಪ್ರದರ್ಶನದಲ್ಲಿ ಕಲಾವಿದರ ಸೃಜನಶೀಲತೆ ಅನಾವರಣಗೊಂಡಿದ್ದು, ವೈವಿಧ್ಯಮಯ ಕಲಾಕೃತಿಗಳು ಕಲಾಸಕ್ತರ ಕಣ್ಮನ ಸೆಳೆಯುತ್ತಿವೆ.

ನಾಡಿನ ಐತಿಹಾಸಿಕ ತಾಣಗಳು, ಪ್ರಕೃತಿಯ ವೈಶಿಷ್ಟೃಗಳು, ಭಕ್ತಿ ಮತ್ತು ಆರಾಧನೆಯ ಭಾವನೆಗಳನ್ನು ಬಿಂಬಿಸುವ ಚಿತ್ರಕಲೆಗಳು ಒಂದೆಡೆಯಾದರೆ, ಜೇಡಿಮಣ್ಣಿನ ಕರಕುಶಲ ವಸ್ತುಗಳು, ಬಂಜಾರ ಸಮುದಾಯದ ಸಾಂಪ್ರದಾಯಿಕ ಆಭರಣಗಳು ಮತ್ತೊಂದೆಡೆ ನೋಡುಗರ ಗಮನ ಸೆಳೆಯುತ್ತಿವೆ. ಕಾಲೇಜು ಆವರಣದಲ್ಲಿ ತೆರೆದಿರುವ 20ಕ್ಕೂ ಹೆಚ್ಚು ಮಳಿಗೆಗಳಲ್ಲಿ ಒಂದಕ್ಕಿಂತ ಒಂದು ವಿಭಿನ್ನವಾದ ಕಲಾಕೃತಿಗಳು ಹಾಗೂ ಕರಕುಶಲ ವಸ್ತುಗಳು ಪ್ರದರ್ಶನಗೊಂಡಿದ್ದು, ಕಲಾಪ್ರಿಯರಿಗೆ ಹೊಸ ಲೋಕವನ್ನೇ ತೆರೆದಿವೆ.

ಕಲ್ಪನೆಗೆ ಜೀವ ತುಂಬಿದ ಕಲಾಕೃತಿಗಳು:

ಸಾಮಾನ್ಯವಾಗಿ ಕಾಣುವ ವಸ್ತುಗಳಲ್ಲಿಯೂ ಕಲೆಯ ಸೌಂದರ್ಯವನ್ನು ಅರಳಿಸಬಹುದು ಎಂಬುದಕ್ಕೆ ಇಲ್ಲಿನ ಕಲಾಕೃತಿಗಳು ಸಾಕ್ಷಿಯಾಗಿವೆ. ಹರಿದ ಬಟ್ಟೆಗಳಿಂದ ರೂಪಿಸಿರುವ ಗೂಬೆ, ಗಾಜಿನ ಬಾಟಲಿಯೊಳಗೆ ಸೃಷ್ಟಿಸಿರುವ ಅರಮನೆಯ ಕಲಾಕೃತಿ, ಮರದ ಕೆತ್ತನೆಯಲ್ಲಿ ಮೂಡಿಬಂದಿರುವ ಸಿದ್ಧಗಂಗಾ ಶ್ರೀಗಳ ಪ್ರತಿಮೆ ಹಾಗೂ ಬುದ್ಧನ ಮೂರ್ತಿ ವಿಶೇಷ ಆಕರ್ಷಣೆಯಾಗಿವೆ. ಬಿದಿರಿನಿಂದ ರೂಪಿಸಿರುವ ಕನ್ನಡದ ಅಚ್ಚುಮೆಚ್ಚಿನ ದಿಕ್ಕುಗಳ ಕಲಾಕೃತಿಗಳು, ಹಡಗಿನ ಮಾದರಿ ನೋಡುಗರನ್ನು ಸೆಳೆಯುತ್ತಿವೆ. ಕಲಾವಿದರ ಕೈಚಳಕ, ತಾಳ್ಮೆ ಮತ್ತು ಕಲ್ಪನಾಶಕ್ತಿಯ ಅನಾವರಣಕ್ಕೆ ಈ ಕೃತಿಗಳು ಸಾಕ್ಷಿಯಾಗಿವೆ.

ಇನ್ನು ಹಲಸಿನ ಹಣ್ಣಿನ ಮೇಲಿರುವ ಮುಳ್ಳಿನಂಥ ಹೊರಪದರವನ್ನು ಒಣಗಿಸಿ, ಅದರಿಂದ ಕೃತಕ ಹಲಸಿನ ಹಣ್ಣಿನ ಕಲಾಕೃತಿಯನ್ನು ನಿರ್ಮಿಸಿರುವುದು ವಿಶೇಷವಾಗಿದೆ. ನೈಜ ಹಲಸಿನ ಹಣ್ಣನ್ನೇ ಹೋಲುವ ಈ ಕಲಾಕೃತಿ, ಸುತ್ತಲಿನ ವಸ್ತುಗಳಲ್ಲಿಯೂ ಕಲೆಯನ್ನು ಹುಡುಕುವ ಕಲಾವಿದರ ದೃಷ್ಟಿಕೋನವನ್ನು ಪರಿಚಯಿಸುತ್ತದೆ.

ಒಂದೇ ಸೂರಿನಡಿ 329 ಕಲಾಕೃತಿಗಳು:

ವಿವಿಧ ಕಲಾ ಪ್ರಕಾರಗಳ ಒಟ್ಟು 329 ಕಲಾಕೃತಿಗಳನ್ನು ಪ್ರದರ್ಶನದಲ್ಲಿ ಅನಾವರಣಗೊಳಿಸಲಾಗಿದೆ. ಚಿತ್ರಕಲೆ, ಶಿಲ್ಪಕಲೆ, ಅನ್ವಯ ಕಲೆ, ಗ್ರಾಫಿಕ್ ಕಲೆ, ಛಾಯಾಚಿತ್ರ, ಸಾಂಪ್ರದಾಯಿಕ ಚಿತ್ರಕಲೆ, ಸಾಂಪ್ರದಾಯಿಕ ಶಿಲ್ಪಕಲೆ ಹಾಗೂ ಕರಕುಶಲ ವಿಭಾಗಗಳ ಕೃತಿಗಳು ಪ್ರದರ್ಶನದ ವೈವಿಧ್ಯವನ್ನು ಹೆಚ್ಚಿಸಿವೆ. ವೃತ್ತಿಪರ ಕಲಾವಿದರ ನೈಪುಣ್ಯದಿಂದ ಹಿಡಿದು ಹವ್ಯಾಸಿ ಕಲಾವಿದರ ಸೃಜನಶೀಲತೆಯವರೆಗೆ ವಿವಿಧ ಅಭಿವ್ಯಕ್ತಿಗಳನ್ನು ಪರಿಚಯಿಸುವ ಈ ಪ್ರದರ್ಶನ, ಕಲೆಯ ವಿಭಿನ್ನ ಆಯಾಮಗಳನ್ನು ಆಸಕ್ತರಿಗೆ ಪರಿಚಯಿಸುತ್ತಿದೆ.

ಮಕ್ಕಳ ಕುಂಚದಲ್ಲಿ ಅರಳಿದ ದಸರಾ ಸಂಭ್ರಮ

ದಸರಾ ಅಂಗವಾಗಿ ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಮಕ್ಕಳ ಚಿತ್ರಕಲಾ ಸ್ಪರ್ಧೆಯೂ ಗಮನ ಸೆಳೆಯಿತು. ಮೈಸೂರು ದಸರಾ, ಪ್ರಕೃತಿ ಮತ್ತು ಪರಿಸರ ವಿಷಯಗಳನ್ನು ಆಧರಿಸಿ ನಡೆದ ಸ್ಪರ್ಧೆಯಲ್ಲಿ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಮಕ್ಕಳು ತಮ್ಮ ಕಲ್ಪನೆ ಮತ್ತು ಭಾವನೆಗಳಿಗೆ ಬಣ್ಣ ತುಂಬಿ, ದಸರೆಯ ವೈಭವ ಹಾಗೂ ಪ್ರಕೃತಿಯ ಸೌಂದರ್ಯವನ್ನು ಕುಂಚದ ಮೂಲಕ ಅಭಿವ್ಯಕ್ತಿಸಿದರು. ಮಕ್ಕಳ ಕೈಗಳಲ್ಲಿ ಅರಳಿದ ಚಿತ್ರಗಳು ಅವರ ಸೃಜನಶೀಲತೆಗೆ ಸಾಕ್ಷಿಯಾದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net