ಪೌರ ಕಾರ್ವಿುಕರ ಸೇವೆ ಅನನ್ಯ

New Sevabharati new
Published on

ಹುಬ್ಬಳ್ಳಿ : ಪರಿಸರ ಸ್ವಚ್ಛತೆ ಜತೆಗೆ ನಾಗರಿಕರ ಆರೋಗ್ಯ ಕಾಪಾಡುವಲ್ಲಿ ಪೌರ ಕಾರ್ವಿುಕರ ಪಾತ್ರ ಮಹತ್ವದ್ದಾಗಿದೆ. ಪೌರ ಕಾರ್ವಿುಕರ ಸೇವೆ ಅನನ್ಯ ಎಂದು ಮೇಯರ್ ಜ್ಯೋತಿ ಪಾಟೀಲ ಹೇಳಿದರು.

ಇಲ್ಲಿನ ಸೇವಾಭಾರತಿ ಟ್ರಸ್ಟ್ ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರದಲ್ಲಿ ದಸರಾ ಹಬ್ಬದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಪೌರ ಕಾರ್ವಿುಕರಿಂದ ದೇವಿಗೆ ಕುಂಕುಮಾರ್ಚನೆ ಮಾಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಚ್ಛತೆ ಮತ್ತು ಆರೋಗ್ಯವಂತ ಸಮಾಜವನ್ನು ಕಟ್ಟುವಲ್ಲಿ ಪೌರ ಕಾರ್ವಿುಕರ ಸೇವೆ ಶ್ರೇಷ್ಠವಾಗಿದೆ. ಪೌರ ಕಾರ್ವಿುಕರು ಕಾಯಕಯೋಗಿಗಳು, ನಿತ್ಯ ಬೆಳಗ್ಗೆ ಪಟ್ಟಣದ ಪ್ರತಿಯೊಂದು ರಸ್ತೆ ಮತ್ತು ಮಾರುಕಟ್ಟೆಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಮಾಡುತ್ತಿರುವ ಸ್ವಚ್ಛತೆಯ ಕಾರ್ಯಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಾಲಕಲ್ಯಾಣ ಕೇಂದ್ರದ ಅಧ್ಯಕ್ಷೆ ಕಮಲಾ ಜೋಶಿ, ಪೌರ ಕಾರ್ವಿುಕರು ತಮ್ಮ ಆರೋಗ್ಯ ಮತ್ತು ಕುಟುಂಬದ ನಿರ್ವಹಣೆಯನ್ನು ತ್ಯಾಗ ಮಾಡಿ ಸಮಾಜದ ಆರೋಗ್ಯಕ್ಕಾಗಿ ಚಳಿ, ಗಾಳಿ, ಮಳೆ ಲೆಕ್ಕಿಸದೆ ಕಾರ್ಯ ನಿರ್ವಹಿಸುತ್ತಾರೆ. ಪೌರಕಾರ್ವಿುಕರ ಸೇವೆ ಶ್ರೇಷ್ಠವಾದದ್ದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ 40 ಜನ ಪೌರ ಕಾರ್ವಿುಕರಿಗೆ ಉಡಿತುಂಬಿ, ಸನ್ಮಾನಿಸಲಾಯಿತು. ಬಾಲ ಕಲ್ಯಾಣ ಕೇಂದ್ರದ ಮಾತಾಜಿ ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net