ದಿನೇದಿನೆ ಹೆಚ್ಚುತ್ತಿದೆ ಗಜಪಡೆ ಹಾವಳಿ

SDP ELEPANT
Published on

ಸಿದ್ದಾಪುರ: ತಾಲೂಕಿನಲ್ಲಿ ಗಜಪಡೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರೈತರ ಬೆಳೆ ನಾಶ ಮಾಡುತ್ತಿರುವುದಲ್ಲದೆ, ಮನೆ ಅಂಗಳದವರೆಗೂ ಬರುತ್ತಿದ್ದು, ಜನರು ಆತಂಕ ಪಡುವಂತಾಗಿದೆ.

ಈಗಾಗಲೇ ತಾಲೂಕಿನ ಸೇಲೂರು, ಕಲಗದ್ದೆ, ಶಿಗೇಹಳ್ಳಿ, ಕ್ವಾಡಗದ್ದೆ ಮತ್ತಿತರ ಕಡೆಗಳಲ್ಲಿ ಆನೆಗಳ ಹಿಂಡು ರೈತರು ಬೆಳೆ ನಾಶ ಪಡಿಸಿ ಮುಂದಡಿಯಿಟ್ಟಿವೆ. ಕಾನಸೂರ ಸುತ್ತಮುತ್ತಲಿನ ಹೊಸ್ಕೊಪ್ಪ, ಹುಣಸೆಕೊಪ್ಪ, ಬ್ಯಾಣದಮನೆ, ಗವಿನಗುಡ್ಡ, ಕಲ್ಕಟ್ಟೆ ವಿವಿಧೆಡೆಗಳಲ್ಲಿ ಬೆಳೆದಿರುವ ಭತ್ತ, ಅಡಕೆ, ಬಾಳೆ, ತೆಂಗು, ಕಬ್ಬು, ತರಕಾರಿಗಳನ್ನೆಲ್ಲ ನಾಶಗೊಳಿಸುತ್ತಿವೆ.

ಆರೇಳು ಆನೆಗಳ ಹಿಂಡು ಶಿರಸಿ-ಸೊರಬ ತಾಲೂಕಿನ ಗಡಿಭಾಗದಿಂದ ಸಿದ್ದಾಪುರ ತಾಲೂಕಿಗೆ ಆಗಮಿಸಿ ಕಂಡ ಕಂಡಲೆಲ್ಲ ಓಡಾಡುತ್ತ ಬೆಳೆ ನಾಶಪಡಿಸುತ್ತಿದೆ. ಅವು ಬಂದ ದಾರಿಯಲ್ಲೇ ಮತ್ತೆ ಸಾಗುತ್ತದೆ ಎಂದು ಅರಣ್ಯ ಇಲಾಖೆಯವರು ಹೇಳುತ್ತಿದ್ದಾರೆ. ಆದರೆ, ಅವು ಬಂದ ದಾರಿ ತಪ್ಪಿ ಎರ್ರಾಬಿರ್ರಿಯಾಗಿ ಓಡಾಡುತ್ತಿವೆ. ಕರಿ ಹಿಂಡುಗಳನ್ನು ಓಡಿಸಲು ರೈತರು ಹರಸಾಹಸ ಪಡುತ್ತಿದ್ದಾರೆ. ಗಜಪಡೆಯನ್ನು ಹೆದರಿಸುತ್ತ ಅವುಗಳನ್ನು ಚದುರಿಸಿರುವುದರಿಂದ ಅವು ಮುಂದೆ ಹೋಗಲು ಆಗದೇ ಕಾನಸೂರು, ನಾಣಿಕಟ್ಟಾ ಸುತ್ತಲ ವ್ಯಾಪ್ತಿಯ ಅಡವಿ ಹಾಗೂ ಗದ್ದೆ ತೋಟಗಳಲ್ಲಿ ಸಂಚರಿಸುತ್ತಿರಬಹುದು.

ನಾಲ್ಕೈದು ದಿನಗಳಿಂದ ಗಜಪಡೆಯು ತೋಟ ಗದ್ದೆಗಳಿಗೆ ನುಗ್ಗಿ ಭತ್ತ, ಕಬ್ಬು, ಬಾಳೆ, ಅಡಕೆ ಮತ್ತಿತರ ಬೆಳೆಗಳನ್ನು ನಾಶಪಡಿಸುತ್ತಿವೆ. ಮನೆಯ ಅಂಗಳಕ್ಕೂ ಬಂದು ನಿಲ್ಲುತ್ತಿವೆ. ಇದರಿಂದಾಗಿ ರಾತ್ರಿ ವೇಳೆ ಓಡಾಡಲು ಭಯ ಆವರಿಸಿದೆ. ಹೀಗಾಗಿ ಆದಷ್ಟು ಶೀಘ್ರ ಅರಣ್ಯ ಇಲಾಖೆಯು ಆನೆಗಳನ್ನು ಓಡಿಸಲು ಸೂಕ್ತ ಕ್ರಮಕೈಗೊಳ್ಳಬೇಕು. ಹಾನಿ ಪಡಿಸಿದ ಬೆಳೆಗಳಿಗೆ ಪರಿಹಾರ ನೀಡಬೇಕು. | ಹೊಸ್ಕೊಪ್ಪ, ಹುಣಸೇಕೊಪ್ಪ, ಗವಿನಗುಡ್ಡ, ಬ್ಯಾಣದಮನೆ ಸುತ್ತಮುತ್ತಲಿನ ರೈತರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net