

ಶಿಗ್ಗಾಂವಿ: ದೇಶದ ರಕ್ಷಣೆಗಾಗಿ ಹುತಾತ್ಮರಾದ ಪೊಲೀಸರ, ಸೈನಿಕರ ತ್ಯಾಗ, ಬಲಿದಾನ ಸದಾ ಸ್ಮರಿಸಬೇಕು ಎಂದು ಕೆಎಸ್ಆರ್ಪಿ 10ನೇ ಪೊಲೀಸ್ ಪಡೆಯ ಕಮಾಂಡೆಂಟ್ ಎನ್.ಬಿ. ಮೆಳ್ಳಾಗಟ್ಟಿ ಹೇಳಿದರು.
ತಾಲೂಕಿನ ಗಂಗೇಬಾವಿ ಕೆಎಸ್ಆರ್ಪಿ 10ನೇ ಪೋಲಿಸ್ ಪಡೆಯಲ್ಲಿ ಮಂಗಳವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಸ್ಮಾರಕಕ್ಕೆ ಗೌರವ ವಂದನೆ ಸಲ್ಲಿಸಿ ಅವರು ಮಾತನಾಡಿದರು.
ಭಾರತ ಹಾಗೂ ಚೀನಾದ ಸೈನಿಕರ ಮಧ್ಯೆ ನಡೆದ ಗುಂಡಿನ ದಾಳಿಯಲ್ಲಿ ಸಿಆರ್ಪಿಎಫ್ ಯೋಧರು ಮೃತಪಟ್ಟಿದ್ದರು. ಅಂದಿನಿಂದ ದೇಶದಾದ್ಯಂತ ಪೊಲೀಸ್ ಸಿಬ್ಬಂದಿಯ ಗೌರವಾರ್ಥ ಪೊಲೀಸ್ ಹುತಾತ್ಮ ದಿನ ಆಚರಿಸಲಾಗುತ್ತಿದೆ ಎಂದರು.
ನಿವೃತ್ತ ಡಿವೈಎಸ್ಪಿ ವೀರಣ್ಣ ಜರಾಳ ಮಾತನಾಡಿ, ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಹಗಲಿರುಳು ಶ್ರಮಿಸುವ ಪೊಲೀಸರು ದೇಶದ ಏಕತೆ, ಅಖಂಡತೆಗೆ ಅಪಾರ ಕೊಡುಗೆ ನೀಡಿದ್ದಾರೆ. ಸೇವೆಯ ಸಂದರ್ಭದಲ್ಲಿ ಒದಗಿ ಬಂದ ಪರಿಸ್ಥಿತಿ ಎದುರಿಸಲು ಯಾವುದೇ ಕಾರಣಕ್ಕೂ ನಮ್ಮ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಧೈರ್ಯದಿಂದ ಮುನ್ನುಗ್ಗಿ ನಮ್ಮ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದಾಗ ಮಾತ್ರ ನಮ್ಮ ಸೇವೆ, ಹೆಸರು ಅಜರಾಮರವಾಗಿರುತ್ತದೆ ಎಂದರು.
ಪೊಲೀಸರಾಗಲಿ, ಸೈನಿಕರಾಗಲಿ ತಮ್ಮ ಸೇವೆಯ ಕರ್ತವ್ಯದ ಸಂದರ್ಭದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೇ, ಆತ್ಮಸ್ಥೈರ್ಯ ಹೆಚ್ಚಿಸಿಕೊಂಡು ಪ್ರಾಮಾಣಿಕ ಸೇವೆ ಸಲ್ಲಿಸಬೇಕು. ಅಂದಾಗ ಮಾತ್ರ ನಮಗೆ ಯಶಸ್ಸು ಸಿಗಲು ಸಾಧ್ಯ ಎಂದರು.
ಕಾರ್ಯಕ್ರಮದ ಪೂರ್ವದಲ್ಲಿ ಆಕರ್ಷಕ ಪಥಸಂಚಲನ ನಡೆಸಿದ ಪೊಲೀಸರು, ಹುತಾತ್ಮರಿಗೆ ಗೌರವ ಸಲ್ಲಿಸಿದರು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಮರ್ಪಿಸಲಾಯಿತು. ಡೆಪ್ಯೂಟಿ ಕಮಾಡೆಂಟ್ ಮಂಜಪ್ಪ ಕೋಟಿಹಾಳ, ಸಹಾಯಕ ಕಮಾಡೆಂಟ್ಗಳಾದ ಸುಲೇಮಾನ ಹಂಚಿನಮನಿ, ವಿಶ್ವನಾಥ ನಾಯ್ಕ, ಶ್ರೀಧರ ವಾಘ್ಮೕರಿ, ಹನುಮೇಶ ಜಿ., ಸುರೇಶ ಡೆಂಬೇರ, ಕಿರಣ ಕೋಳೇಕರ್, ಇತರ ಪೋಲಿಸ್ ಅಧಿಕಾರಿಗಳು ಇದ್ದರು.