ನಿಲ್ಲದ ಮಹಿಳೆಯರ ಮೇಲಿನ ಶೋಷಣೆ

ನಾಗಮಂಗಲದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಹಿರಿಯ ವಕೀಲರು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಯೋಗೇಶ್, ಸಿದ್ದಪ್ಪಾಜಿ, ಶಿವರಾಜು, ನರಸಿಂಹಮೂರ್ತಿ ಇದ್ದರು.
ನಾಗಮಂಗಲದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಹಿರಿಯ ವಕೀಲರು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಯೋಗೇಶ್, ಸಿದ್ದಪ್ಪಾಜಿ, ಶಿವರಾಜು, ನರಸಿಂಹಮೂರ್ತಿ ಇದ್ದರು.
Published on

ನಾಗಮಂಗಲ: ಮಹಿಳೆಯರ ರಕ್ಷಣೆಗಾಗಿ ಹತ್ತಾರು ಕಾನೂನುಗಳಿದ್ದರೂ ಅವರ ಮೇಲಿನ ಶೋಷಣೆಗಳು ನಿಂತಿಲ್ಲ. ಹೀಗಿದ್ದರೂ ಎಲ್ಲ ಕ್ಷೇತ್ರಗಳಳ್ಲಿಯೂ ಪುರುಷರಿಗಿಂತ ಮಹಿಳೆ ಒಂದು ಹೆಜ್ಜೆ ಮುಂದಿದ್ದು ಸಾಧನೆ ಮಾಡುತ್ತಿರುವುದು ಶ್ಲಾಘನೀಯ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಅಪರ ಸಿವಿಲ್ ನ್ಯಾಯಾಧೀಶ ಸಿದ್ದಪ್ಪಾಜಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ವಕೀಲರ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು. ಪ್ರತಿ ಗಂಡಿನ ಸಾಧನೆ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ. ಹೆಣ್ಣಿನ ಶೋಷಣೆ ಬಗ್ಗೆ ಮಾಧ್ಯಮಗಳಲ್ಲಿ ನಿತ್ಯ ಒಂದಲ್ಲ ಒಂದು ಸುದ್ದಿ ವರದಿಯಾಗುತ್ತಿದೆ. ಶಾಲೆ, ಕಚೇರಿಗಳಲ್ಲಿಯೂ ಶೋಷಣೆ ನಡೆಯುತ್ತಿರುವುದು ನೋವು ತರಿಸುವಂತಿದೆ. ಇಷ್ಟೆಲ್ಲ ಅಡೆತಡೆಗಳ ನಡುವೆಯೂ ಹೆಣ್ಣು ಎದೆಗುಂದದೆ ಸಾಧನೆ ಮಾಡುತ್ತಿರುವುದು ಅವರ ದೃಢ ನಿರ್ಧಾರಕ್ಕೆ ಹಿಡಿದ ಕೈಗನ್ನಡಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ನೌಕರಿ ಪಡೆಯುತ್ತಿದ್ದಾರೆ. ರಾಷ್ಟ್ರಪತಿಯಾದರೂ ಕೂಡ ಮನೆಯಲ್ಲಿ ಹೆಣ್ಣಿನ ಮಾತು ಕೇಳುವಂತಿದೆ. ಕುಟುಂಬವನ್ನು ಸಮರ್ಥವಾಗಿ ಮುನ್ನಡೆಸುವ ಸಾಮರ್ಥ್ಯ ಹೆಣ್ಣಿಗಿದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಯೋಗೇಶ್ ಮಾತನಾಡಿ, ಕುಟುಂಬದ ನಿರ್ವಹಣೆಯ ಬದ್ಧತೆ ಹೆಣ್ಣಿಗೆ ಮಾತ್ರವಿದೆ. ಈ ಹಿಂದೆ ಸ್ತ್ರೀಯರ ಸ್ವಾತಂತ್ರ್ಯ ಎಂಬುದು ಹೇಳಿಕೆಗೆ ಮಾತ್ರ ಸೀಮಿತವಾಗಿತ್ತು. ಆದರೆ ಇಂದು ಅದು ಕಾರ್ಯರೂಪದಲ್ಲಿದೆ ಎನ್ನುವುದಕ್ಕೆ ಅವರ ಸಾಧನೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಅಮೆರಿಕದಲ್ಲಿ ಶೇ.100 ರಷ್ಟು ಸಾಕ್ಷರತೆ ಪ್ರಮಾಣವಿದ್ದರೂ ಈವರೆಗೂ ಒಬ್ಬ ಮಹಿಳೆ ಅಧ್ಯಕ್ಷರಾಗಿಲ್ಲ. ಆದರೆ ನಮ್ಮ ದೇಶದಲ್ಲಿ ಅನಕ್ಷರಸ್ಥರ ಪ್ರಮಾಣ ಹೆಚ್ಚಿದ್ದರೂ ಮಹಿಳೆಯರಿಗೆ ಎಲ್ಲ ರೀತಿಯಲ್ಲಿಯೂ ಸ್ಥಾನ ಸಿಕ್ಕಿದೆ. ಇದೆಲ್ಲದರ ನಡುವೆ ಮಹಿಳೆಯರು ಅಪರಾಧಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿರುವುದು ದುರದೃಷ್ಟಕರ. ಇತ್ತೀಚೆಗೆ ಮಾಧ್ಯಮಗಳಲ್ಲಿ ನೋಡಿದಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಕ್ರಮ ಚಿನ್ನ ಸಾಗಣೆಯಲ್ಲಿ ಮಹಿಳೆ ಪಾಲ್ಗೊಂಡಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ನರಸಿಂಹಮೂರ್ತಿ ಹಾಗೂ ಶಿವರಾಜು ಮಾತನಾಡಿದರು. ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಮಹದೇವ್, ಉಪಾಧ್ಯಕ್ಷ ಉಮೇಶ್, ಸಹಾಯಕ ಸರ್ಕಾರಿ ಅಭಿಯೋಜಕಿ ಅರುಣಾಬಾಯಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net