ಯತ್ನಾಳ ಜನರ ಕ್ಷಮೆ ಕೇಳಬೇಕು

new yatnal new
Published on

ಹುಬ್ಬಳ್ಳಿ : ವಿಶ್ವಗುರು ಬಸವೇಶ್ವರರ ಕುರಿತು ಹಗುರವಾಗಿ ಮಾತನಾಡಿದ ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬಹಿರಂಗವಾಗಿ ಲಿಂಗಾಯತ ಸಮುದಾಯ ಅಷ್ಟೇ ಅಲ್ಲದೇ, ಇಡೀ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಒತ್ತಾಯಿಸಿದೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಮಹಾಸಭಾದ ಧಾರವಾಡ ಜಿಲ್ಲಾ ಘಟಕದ ಮುಖಂಡ ಹಾಗೂ ಹುಬ್ಬಳ್ಳಿಯ ಗುರುಬಸವ ಮಂಟಪದ ಸಂಚಾಲಕ ಶಶಿಧರ ಕರವೀರ ಶೆಟ್ಟರ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಖಂಡನೀಯ. ಒಬ್ಬ ಲಿಂಗಾಯತನಾಗಿ ಬಸವಣ್ಣನವರ ಬಗ್ಗೆ ಅಸಭ್ಯ ಹೇಳಿಕೆ ಕೊಟ್ಟಿದ್ದು ಅವರ ಅಜ್ಞಾನದ ಪರಮಾವಧಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಭರದಲ್ಲಿ ಗುರುಬಸವಣ್ಣನವರಿಗೆ ಅವಮಾನ ಮಾಡಿದ ಯತ್ನಾಳ ಅವರು ಕೂಡಲೇ ಸಮಸ್ತ ಬಸವ ಭಕ್ತರ ಕ್ಷಮೆ ಕೇಳಬೇಕು ಹಾಗೂ ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಬಸವಣ್ಣನವರನ್ನು ಕೈಲಾಗದವರು ಎಂದು ಹೇಳಿರುವುದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಯತ್ನಾಳ ಅವರು ತಮ್ಮ ಹೇಳಿಕೆ ಹಿಂಪಡೆದು, ಕ್ಷಮೆ ಕೇಳದೇ ಇದ್ದರೆ ಅವರ ಶಾಸಕ ಸ್ಥಾನ ರದ್ದುಪಡಿಸುವಂತೆ ಸರ್ಕಾರಕ್ಕೆ ಹಾಗೂ ಪಕ್ಷದಿಂದ ಉಚ್ಛಾಟಿಸುವಂತೆ ಬಿಜೆಪಿ ಹೈಕಮಾಂಡ್​ಗೆ ಪತ್ರದ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಮಹಾಸಭಾ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿ. ಗೊಂಗಡಶೆಟ್ಟಿ ಮಾತನಾಡಿ, ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಹೋರಾಟ ತೀವ್ರಗೊಳಿಸುವ ವಿರುದ್ಧ ನಿರ್ಧರಿಸಲಾಗುವುದು. ಬಸನಗೌಡ ಪಾಟೀಲ ಯತ್ನಾಳ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಗೆಲ್ಲದಂತೆ ನೋಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪ್ರೊ. ಜಿ.ಬಿ. ಹಳ್ಯಾಳ, ಎಸ್.ವಿ. ಜೋಡಳ್ಳಿ, ಎಸ್.ವಿ. ಕೊಟಗಿ, ಪ್ರಭಣ್ಣ ಅಂಗಡಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net