

ಮಂಡ್ಯ: ವಿದ್ಯಾರ್ಥಿಗಳು ಮತ್ತು ಯುವಕರು ಪ್ರತಿಭಾವಂತರಾಗಲು ಪ್ರತಿ ಕ್ಷೇತ್ರದ ಎಲ್ಲ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಮಂಡ್ಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಡಾ.ಎಂ.ಬಿ.ಪ್ರಮೀಳಾ ಸಲಹೆ ನೀಡಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೇರಾ ಯುವ ಭಾರತ್, ಎನ್‌ಎಸ್‌ಎಸ್ ಘಟಕ ಮತ್ತು ಮಂಡ್ಯ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ಯುವಜನೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಯುವ ಜನತೆ ದೇಶದ ಅಭಿವೃದ್ಧಿ ಮತ್ತು ಬದಲಾವಣೆಗೆ ಶ್ರಮಿಸಬೇಕು. ಯುವ ಜನತೆಯಿಂದ ಸದೃಢವಾದ ದೇಶ ಕಟ್ಟಲು ಸಾಧ್ಯ ಎಂಬುವುದನ್ನು ಸ್ವಾಮಿ ವಿವೇಕಾನಂದ ಅವರ ನಂಬಿಕೆಯಾಗಿದೆ. ಸ್ವಾಮಿ ವಿವೇಕಾನಂದರ ಕನಸು ಯುವ ಸಂಪತ್ತು ದೇಶ ಬೆಳಗುವುದಾಗಿದೆ. ಜಿಲ್ಲೆಯಲ್ಲಿನ ಪ್ರತಿ ಯುವ ಜನತೆ ವಿವೇಕಾನಂದರ ನಂಬಿಕೆಯನ್ನು ಉಳಿಸಿ, ಅವರ ಕನಸು ನನಸಾಗಿಸಿ ಎಂದು ತಿಳಿಸಿದರು.
ಯುವ ಸಬಲೀಕರಣ ಇಲಾಖೆ ಜಿಲ್ಲೆಯಲ್ಲಿನ ಯುವ ಜನತೆಯ ಪ್ರತಿಭೆ ಅನಾವರಣಗೊಳಿಸಲು ಅನೇಕ ಅವಕಾಶ ಕಲ್ಪಿಸುತ್ತಿದೆ. ಯುವಕರು ಅವಕಾಶದ ಸದುಪಯೋಗಪಡೆದುಕೊಂಡು ತಮ್ಮ ಪ್ರತಿಭೆಗಳ ಮೂಲಕ ಜಿಲ್ಲೆಗೆ ಹೆಸರು ತರಬೇಕು. ಕಲೆ, ಸಾಹಿತ್ಯ, ರಂಗಭೂಮಿ, ಜನಪದ ಹಾಗೂ ನಾಟಕ ಎಂಬಂತೆ ಜಿಲ್ಲೆಯು ಎಲ್ಲ ಕ್ಷೇತ್ರಗಳಲ್ಲೂ ಮಹತ್ವ ಹೊಂದಿದೆ. ಜಿಲ್ಲೆಯಲ್ಲಿನ ಅನೇಕ ಪ್ರತಿಭಾನ್ವಿತರು ಎಲೆಮರೆ ಕಾಯಿಯಂತೆ ಉಳಿದು ಹೋಗದೆ ಇಲಾಖೆಗಳು ಒದಗಿಸುವ ಸವಲತ್ತು ಮತ್ತು ಅವಕಾಶ ಪಡೆಯಿರಿ ಎಂದು ತಿಳಿ ಹೇಳಿದರು.
ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ನಾಗರಾಜು ಮಾತನಾಡಿ, ಯುವಜನೋತ್ಸವ ಜಿಲ್ಲೆಗೆ ಹೆಸರು ತರುವ ಒಂದು ಭಾಗ. ಯುವ ಜನೋತ್ಸವ ಯಶಸ್ಸಿಗೆ ಸರ್ಕಾರ ಮತ್ತು ಇಲಾಖೆ ಶ್ರಮಿಸುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಯುವಕರಲ್ಲಿ ಅಡಗಿರುವ ಸಾಂಸ್ಕೃತಿಕ ಪ್ರತಿಭೆಗೆ ಒಂದು ವೇದಿಕೆಯನ್ನು ಸರ್ಕಾರ ಒದಗಿಸಿದೆ. ಇದರ ಸದುಪಯೋಗ ಪಡೆದುಕೊಂಡು ರಾಜ್ಯ ಮತ್ತು ರಾಷ್ಟ್ರಮಟ್ಟದವರೆಗೆ ಹೆಸರು ಮಾಡಿ ಎಂದು ಸಲಹೆ ನೀಡಿದರು.
ಯುವಕರು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವುದರಿಂದ ವಿದ್ಯಾವಂತಿಕೆ ಜತೆಗೆ ಪ್ರತಿಭಾನ್ವಿತರಾಗಿ ಬೆಳೆಯಬಹುದು. ಜಿಲ್ಲೆಯಲ್ಲಿನ ಯುವಕರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ಹವ್ಯಾಸಿಯನ್ನಾಗಿಸಿಕೊಳ್ಳಿ. ಮುಂದೆ ಅದು ಜೀವನದ ವೃತ್ತಿಯಾಗಿ ಬದುಕು ಬೆಳಗುತ್ತದೆ ಎಂದು ತಿಳಿಸಿದರು.
ರಾಜ್ಯ ಯುವ ಪ್ರಶಸ್ತಿ ವಿಜೇತ ಯೋಗೇಶ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಉಪನಿರ್ದೇಶಕ ಓಂ ಪ್ರಕಾಶ್, ಮೈ ಭಾರತ್ ಕೇಂದ್ರದ ಅಧಿಕಾರಿ ಶ್ರುತಿ, ಯುವ ಪ್ರಶಸ್ತಿ ಪುರಸ್ಕೃತ ಅನಿಲ್‌ಕುಮಾರ್ ಇತರರಿದ್ದರು. ಇದೇ ವೇಳೆ 2023-24 ನೇ ಸಾಲಿನ ಯುವ ಜನೋತ್ಸವದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಹುಮಾನ ಪಡೆದ ವಿಜೇತರನ್ನು ಸನ್ಮಾನಿಸಲಾಯಿತು.