

ಮಂಡ್ಯ: ರೈತ ಮಹಿಳೆಯರು ಬೆಳೆಯುವ ಬೆಳೆಗಳನ್ನು ನೇರವಾಗಿ ಮಾರಾಟ ಮಾಡುವ ಬದಲು ಮೌಲ್ಯವರ್ಧನೆಗೊಳಿಸಿ. ಪ್ಯಾಕಿಂಗ್ ಹಾಗೂ ಬ್ರಾಂಡಿಂಗ್ ಮಾಡಿ ಮಾರಾಟ ಮಾಡಿದರೆ ಆದಾಯ ಹೆಚ್ಚಿಸಬಹುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸಲಹೆ ನೀಡಿದರು.
ನಗರದ ಜಿಪಂ ಕಚೇರಿ ಕಾವೇರಿ ಸಭಾಂಗಣದಲ್ಲಿ ಆಹಾರ ಸಂಸ್ಕರಣೆ ಸಚಿವಾಲಯ, ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ, ಜಿಲ್ಲಾಡಳಿತ, ಜಿಪಂ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳಾ ದಿನದ ಅಂಗವಾಗಿ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣೆ ಉದ್ದಿಮೆಗಳು ನಿಯಮಬದ್ದಗೊಳಿಸುವಿಕೆ ಯೋಜನೆಯಡಿ ಸ್ವ ಸಹಾಯ ಸಂಘದ ಗುಂಪಿನ ಮಹಿಳಾ ಸದಸ್ಯರಿಗೆ ಆಯೋಜಿಸಿದ್ದ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಎನ್‌ಆರ್‌ಎಂಎಲ್ ಕೃಷಿ ಇಲಾಖೆ ಸೇರಿ ಸಿರಿಧಾನ್ಯದ ಉತ್ಪನ್ನ ಮಾರಾಟ ಮಾಡಲು ಸಿರಿ ಸಮೃದ್ಧಿ ಎಂದು ಬ್ರಾಂಡಿಂಗ್ ಮಾಡಲಾಗಿದೆ. ಇದರಿಂದ ರೈತರಿಗೂ ಆದಾಯ ವೃದ್ಧಿಸುತ್ತದೆ. ಜತೆಗೆ ಗ್ರಾಹಕರ ಆರೋಗ್ಯವು ಸಮೃದ್ಧವಾಗಿರುತ್ತದೆ ಎಂದು ಹೇಳಿದರು.
ಕೃಷಿಯನ್ನು ಕೇವಲ ಕೆಲಸವಾಗಿ ಮಾಡದೆ ಉದ್ದಿಮೆಯಾಗಿ ಮೌಲ್ಯವರ್ಧನೆ ಮಾಡಿದಾಗ ಮಾತ್ರ ಗ್ರಾಮೀಣ ಭಾಗದ ರೈತ ಮಹಿಳೆಯರ ಆರ್ಥಿಕ ಪ್ರಗತಿ ಸಾಧ್ಯ. ಭಾರತ ಶೇ.50ರಷ್ಟು ಕೃಷಿ ಅವಲಂಬಿಸಿದೆ, ಗ್ರಾಮೀಣ ಭಾಗದ ರೈತ ಮಹಿಳೆಯರು ಕೃಷಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಗ್ರಾಮೀಣ ಮಹಿಳೆಯರು ಕೃಷಿಯಲ್ಲಿ ಕೇವಲ ದೈಹಿಕ ಶ್ರಮ ವಹಿಸಿದ ಮಾತ್ರಕ್ಕೆ ಸಬಲೀಕರಣಗೊಳ್ಳುವುದಿಲ್ಲ. ಬದಲಾಗುತ್ತಿರುವ ಪರಿಸ್ಥಿತಿಗೆ ಅನುಗುಣವಾಗಿ ನಿಮ್ಮನ್ನು ನೀವು ಆಧುನಿಕರಣಕ್ಕೆ ಒಳಪಡಿಸಿಕೊಂಡಾಗ ಮಾತ್ರ ಸಾಧ್ಯ. ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಯಾಂತ್ರಿಕೃತ ಭತ್ತ ನಾಟಿ ಮಾಡುವುದನ್ನು ಪ್ರಾರಂಭಿಸಲಾಯಿತು. ಮಹಿಳೆಯರು ನನ್ನಿಂದ ಆಗದು ಎಂಬ ಭಾವನೆ ತೊರೆದು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬೆಳೆಸಿಕೊಳ್ಳಬೇಕು ಎಂದರು.
ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ಮಾತನಾಡಿ, ಪ್ರತಿ ವರ್ಷ ಮುಂಗಾರಿನಲ್ಲಿ ಜಿಲ್ಲೆಯ ಪ್ರಮುಖ ಬೆಳಗಳಾದ ಕಬ್ಬು, ರಾಗಿ, ಭತ್ತದಿಂದ ಅಂದಾಜು 2 ಸಾವಿರ ಕೋಟಿ ರೂನಷ್ಟು ಆರ್ಥಿಕ ಚಟುವಟಿಕೆ ಉಂಟಾಗುತ್ತದೆ. ಪ್ರಮುಖ ಬೆಳೆಗಳನ್ನು ಸಂಸ್ಕರಣೆಗಾರರು ಹಾಗೂ ಮಧ್ಯವರ್ತಿಗಳು ಖರೀದಿಸಿ ಮೌಲ್ಯವರ್ಧನೆ ಮಾಡಿ 6 ಸಾವಿರ ಕೋಟಿ ರೂ ಆದಾಯ ಗಳಿಸುತ್ತಾರೆ. ರೈತ ಮಹಿಳೆಯರು ತಾವು ಉತ್ಪಾದಿಸಿದ ವಸ್ತುಗಳನ್ನು ಮೌಲ್ಯವರ್ಧನೆಗೆ ಒಳಪಡಿಸಿದರೆ 3 ರಿಂದ 4 ಸಾವಿರ ಕೋಟಿ ರೂ ಗಳಿಸಬಹುದಾಗಿದೆ ಎಂದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ ಮಾತನಾಡಿ, ತೋಟಗಾರಿಕೆ ಉತ್ಪನ್ನಗಳಲ್ಲಿ ಜೇನು ಸಾಕಾಣಿಕೆಯಿಂದ ಆದಾಯ ಹೆಚ್ಚಿಸಬಹುದು. ಜತೆಗೆ ಬೆಳೆದ ಬೆಳೆಗಳಿಗೂ ಪರಾಗಸ್ಪರ್ಶ ಉಂಟಾಗುತ್ತದೆ. ಜೇನು ಸಾಕಾಣಿಕೆಯಿಂದ ಬಂದ ಜೇನು ತುಪ್ಪಕ್ಕೆ ಉತ್ತಮ ಮಾರುಕಟ್ಟೆ ಹಾಗೂ ಬ್ರಾಂಡಿಂಗ್ ಅನ್ನು ಇಲಾಖೆಯ ಸಹಾಯದೊಂದಿಗೆ ಮಾಡಬಹುದಾಗಿದೆ. ಅಣಬೆಗೆ ಹೆಚ್ಚು ಬೇಡಿಕೆ ಇದೆ. ಇದರಿಂದ ಬಿಸ್ಕತ್ತು, ಚಿಪ್ಸ್, ಚಾಕೋಲೇಟ್ ತಯಾರಿಸುವವರಿಗೆ ಸಹಾಯ ಮಾಡಲಾಗುವುದು. ಅಂತೆಯೇ ತೆಂಗು, ಬಾಳೆ ಬೆಳೆಗೂ ಸಹ ಇಲಾಖೆಯ ವತಿಯಿಂದ ನೆರವು ನೀಡಲಾಗುವುದು ಎಂದು ತಿಳಿಸಿದರು.
ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಬಾಬಾಸಾಬ್ ಮಾತನಾಡಿ, ಮೀನುಗಾರಿಕೆ ಇಲಾಖೆಯಲ್ಲಿ ಮಹಿಳೆಯರಿಗಾಗಿ ಅನೇಕ ಯೋಜನೆಗಳಿವೆ. ಮಹಿಳಾ ಸಹಕಾರ ಸಂಘಗಳಿಗೆ ಮೀನುಗಾರಿಕೆ ಮಾಡಲು ಕಡಿಮೆ ದರದಲ್ಲಿ ಕೆರೆಯನ್ನು ಗುತ್ತಿಗೆ ನೀಡಲಾಗುವುದು. ಈಗಾಗಲೇ ಅನೇಕ ಸ್ವಸಹಾಯ ಗುಂಪುಗಳು ಕೆರೆಗಳನ್ನು ಗುತ್ತಿಗೆ ಪಡೆದುಕೊಂಡು ಆದಾಯ ಗಳಿಸುತ್ತಿವೆ. ಜಿಲ್ಲೆಯಲ್ಲಿ 11 ಮತ್ಸ್ಯ ವಾಹಿನಿ ತ್ರಿಚಕ್ರ ವಾಹನ ನೀಡಲಾಗಿದೆ ಎಂದರು.
ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ನಾಗನಂದ್, ಜಿಲ್ಲಾ ಲೀಡ್‌ಬ್ಯಾಂಕ್ ಮ್ಯಾನೇಜರ್ ಅರುಣ್‌ಕುಮಾರ್, ಕೃಷಿ ವಿಜ್ಞಾನಿ ಡಾ.ಶ್ರೀದೇವಿ, ಬೆಲ್ಲದ ನಾಡು ರೈತ ಉತ್ಪಾದಕ ಕಂಪನಿಗಳ ಅಧ್ಯಕ್ಷ ಕಾರಸವಾಡಿ ಮಹದೇವ, ಉಪ ಕೃಷಿ ನಿರ್ದೇಶಕ ಮುನೇಗೌಡ, ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್‌ಚಂದ್ರಗುರು, ರಾಕೇಶ್ ಇತರರಿದ್ದರು.
ಕುರಿ, ಕೋಳಿ ಸಾಕಾಣಿಕೆಗೆ ಸಬ್ಸಿಡಿ
ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಶಿವಲಿಂಗಯ್ಯ ಮಾತನಾಡಿ, ಹೈನುಗಾರಿಕೆಯಲ್ಲಿ ಮಹಿಳೆಯರ ಪಾತ್ರ ದೊಡ್ಡದು. ಜಿಲ್ಲೆಯ ಶೇ.60ರಷ್ಟು ಮಹಿಳೆಯರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ದಿನ 12 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಕುಟುಂಬ ನಿರ್ವಹಣೆಗೆ ಹೈನುಗಾರಿಕೆ ಉತ್ತಮ ಉದ್ಯಮವಾಗಿದೆ. ಜಿಪಂ ಸಿಇಒ ಅವರ ಸಲಹೆಯಂತೆ ನಾಟಿ ಕೋಳಿ ಸಾಕಾಣಿಕೆ ಮಾಡಿ ಮೊಟ್ಟೆಯನ್ನು ಬ್ರಾಂಡಿಂಗ್ ಮಾಡಿ ಮಾರಾಟ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆಸಕ್ತ ಮಹಿಳೆಯರು ತರಬೇತಿ ಪಡೆದು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದು ಹೇಳಿದರು.
ಪಶು ಸಂಗೋಪನಾ ಇಲಾಖೆ ವತಿಯಿಂದ ಕೋಳಿ, ಕುರಿ, ಮೇಕೆ ಸಾಕಾಣಿಕೆಗೆ ಶೇ.50ರಷ್ಟು ಸಬ್ಸಿಡಿ ನೀಡಲಾಗುವುದು. ವಿಮೆ ಮಾಡಿಸದ ಹಸುಗಳು ಆಕಸ್ಮಿಕವಾಗಿ ಮರಣ ಹೊಂದಿದರೆ ಇಲಾಖೆಯ ವತಿಯಿಂದ 15,000 ರೂ ಹಾಗೂ ಕುರಿ ಮೇಕೆ ಮರಣ ಹೊಂದಿದರೆ 7000 ರೂ ನೀಡಲಾಗುವುದು. ಸತ್ತ ಜಾನುವಾರುಗಳನ್ನು ಸ್ಥಳೀಯ ಪಶು ವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ನಡೆಸಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿದ ನಂತರ ಹಣವನ್ನು ಆರು ತಿಂಗಳೊಳಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.