

ಇಳಕಲ್ಲ(ಗ್ರಾ): ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಭವ್ಯ ಭಾರತದ ಪ್ರಜೆಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಶಿಕ್ಷಕ ಹುದ್ದೆ ಶ್ರೇಷ್ಠವಾದುದು ಎಂದು ಕಂದಗಲ್‌ನ ರುದ್ರಸ್ವಾಮಿ ಮಠದ ಡಾ.ಚೆನ್ನಮಲ್ಲ ಸ್ವಾಮೀಜಿ ಹೇಳಿದರು.
ಕಂದಗಲ್‌ನ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಲಯನ್ಸ್ ಕ್ಲಬ್ ಹಾಗೂ ಸರ್ಕಾರಿ ಪ್ರೌಢಶಾಲೆ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ, ಶಿಕ್ಷಕರಿಗೆ ಗೌರವ ಸಮರ್ಪಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳ ನಡುವೆ ಅವಿನಾಭಾವ ಸಂಬಂಧವಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಿಕ್ಷಕರು ತಮ್ಮ ಜೀವನದ ಮುಕ್ಕಾಲು ಭಾಗ ಮೀಸಲಿಡುತ್ತಾರೆ. ತಂದೆ-ತಾಯಿ ಜೀವ ಕೊಟ್ಟರೆ ಶಿಕ್ಷಕರು ಜೀವನ ರೂಪಿಸುತ್ತಾರೆ. ಸಮಾಜದಲ್ಲಿ ಶಿಕ್ಷಕರಿಗೆ ಉನ್ನತ ಗೌರವ ನೀಡಬೇಕು ಎಂದು ಹೇಳಿದರು.
ಪ್ರಗತಿಪರ ರೈತ ಚೆನ್ನಪ್ಪಗೌಡ ನಾಡಗೌಡ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಭಾವೈಕ್ಯತೆ ಮೂಡಿಸುವ ಜತೆಗೆ ನೈತಿಕ ಶಿಕ್ಷಣ ನೀಡಬೇಕು ಎಂದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾಂತೇಶ ಕಡಿವಾಲ, ಪಿಕೆಪಿಎಸ್ ಅಧ್ಯಕ್ಷ ಪಂಪಣ್ಣ ಸಜ್ಜನ, ಗ್ರಾಪಂ ಮಾಜಿ ಅಧ್ಯಕ್ಷ ಮಹಮ್ಮದ್‌ಸಾಬ್ ಬಾವಿಕಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಸಂತೋಷ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ ಶಶಿಧರ ನಾಡಗೌಡ, ಮುಖ್ಯಶಿಕ್ಷಕಿ ಗುರುಮಾತೆ ಪಿ.ಎಸ್.ಹಿರೇಮಠ, ಗುರುಬಸವ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸಂಗಣ್ಣ ಹವಾಲ್ದಾರ್, ಚೆನ್ನಪ್ಪ ಜಾಲಿಹಾಳ, ಮಲ್ಲಿಕಾರ್ಜುನ ಪೋತನಾಳ, ಡಾ.ಮಲ್ಲಿಕಾರ್ಜುನ ಗಡಿಯಣ್ಣವರ, ಅಮರೇಶ ಕೊಡಕೇರಿ ಇತರರಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಬಳಿಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.