

ಚನ್ನರಾಯಪಟ್ಟಣ: ಕಾರ್ಮಿಕರು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು. ತಾತ್ಕಾಲಿಕ ಆಸೆಗೆ ಬಲಿಯಾಗಿ ದುರಭ್ಯಾಸಗಳನ್ನು ಮೈಗೂಡಿಸಿಕೊಳ್ಳದೆ ಶಿಸ್ತುಬದ್ಧವಾದ ಕೆಲಸಕ್ಕೆ ಸದೃಢ ಶರೀರ ಹೊಂದಿ ಬದುಕನ್ನು ಸುಂದರವಾಗಿಟ್ಟುಕೊಳ್ಳುವಂತೆ ಶಾಸಕ ಸಿ.ಎನ್.ಬಾಲಕೃಷ್ಣ ಕಾರ್ಮಿಕರಿಗೆ ಕಿವಿಮಾತು ಹೇಳಿದರು.
ತಾಲ್ಲೂಕಿನ ಶ್ರವಣಬೆಳಗೊಳ ಹೋಬಳಿ, ನಾಗಯ್ಯನ ಕೊಪ್ಪಲು ಗ್ರಾಮದಲ್ಲಿ ಬುಧವಾರ ಶ್ರೀರಾಮ ಕಟ್ಟಡ ಕಾರ್ಮಿಕರ ಸಂಘ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆ ಮತ್ತು ಹಿರಿಯ ಕಾರ್ಮಿಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆ ಅನನ್ಯ. ಆರೋಗ್ಯವಂತ ದೇಶಕ್ಕೆ ಆರೋಗ್ಯವಂತ ಕಾರ್ಮಿಕ ಮುಖ್ಯ. ಕಾರ್ಮಿಕರು ದೇಶದ ಆಧಾರಸ್ತಂಭಗಳು, ದೇಶದ ರಕ್ಷಕರು, ಅವರ ಶ್ರಮದಿಂದಲೇ ದೇಶದ ಅಭಿವೃದ್ಧಿ, ಕಷ್ಟಪಡುವ ನಿಮ್ಮ ಬದುಕು ಹಸನಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಬದ್ಧತೆಯಿಂದ ಕೆಲಸ ಮಾಡಬೇಕಾಗಿದೆ. ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸುವ ಕೆಲಸವಾಗಬಾರದು. ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಕೆಲಸ ಮಾಡುವವವರ ಕಾರ್ಮಿಕರ ಸೇವೆಗೆ ಎಂದಿಗೂ ಬೆಲೆ ಕಟ್ಟಲಾಗದು, ಅವರ ಶ್ರಮಕ್ಕೆ ಗೌರವ ನೀಡುವುದು ಸಮಾಜದ, ಸರ್ಕಾರದ ಜವಾಬ್ದಾರಿ ಎಂದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಶಿವಶಂಕರ್ ಮಾತನಾಡಿ, ಸತತ 12ರಿಂದ 15 ಗಂಟೆ ದುಡಿಯುತ್ತಿದ್ದ ಕಾರ್ಮಿಕರು ಕೆಲಸದ ಅವಧಿ ಕಡಿತಕ್ಕೆ ಆಗ್ರಹಿಸಿ ಆಮೆರಿಕದಲ್ಲಿ 1986ರಲ್ಲಿ ನಡೆಸಿದ ದೊಡ್ಡ ಮಟ್ಟದ ಕ್ರಾಂತಿಯ ಫಲವಾಗಿ 8 ಗಂಟೆಗೆ ಇಳಿಸಿದ ನೆನಪಿನಾರ್ಥ ವಿಶ್ವದೆಲ್ಲೆಡೆ ಕಾರ್ಮಿಕರ ದಿನ ಆಚರಿಸಲಾಗುತ್ತಿದೆ. ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಬಹುದೊಡ್ಡದು. ಕಟ್ಟಡ, ರಸ್ತೆ ಕಾಮಗಾರಿ ಸೇರಿ ಎಲ್ಲ ಕೆಲಸಕ್ಕೂ ಕಾರ್ಮಿಕರೇ ಕಾರಣರಾಗಿದ್ದಾರೆ. ಕಾರ್ಮಿಕರ ಹಕ್ಕುಗಳಿಗಾಗಿ ಸ್ವಾತಂತ್ರ ಪೂರ್ವದಿಂದಲೂ ಹೋರಾಟಗಳಾಗುತ್ತಿದ್ದು, ಅದು ಇಂದಿಗೂ ನಿಂತಿಲ್ಲ. ನಿಮ್ಮ ಸಮಸ್ಯೆ, ನೋವುಗಳಿಗೆ ಸರ್ಕಾರ ಪ್ರತ್ಯೇಕ ಕಾರ್ಮಿಕ ನ್ಯಾಯಾಲಯ ಆರಂಭಿಸಿದೆ. ಇದು ಜಿಲ್ಲೆಯಲ್ಲಿಯೂ ಇದ್ದು, ಇದರ ಸದುಪಯೋಗಕ್ಕೆ ಕಾರ್ಮಿಕರು ಮುಂದಾಗಬೇಕೆಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ್, ಸದಸ್ಯ ವಾಸಣ್ಣ, ಮಾಜಿ ಅಧ್ಯಕ್ಷ ರವಿ, ಗ್ರಾಮದ ಹಿರಿಯ ಮುಖಂಡರಾದ ಪಟೇಲ್ ಪ್ರಕಾಶ್, ರಾಮಚಂದ್ರ, ಧರ್ಮಣ್ಣ, ಗೋವಿಂದ್‌ರಾಜ್, ಶ್ರೀರಾಮ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ರಘುರಾಂ, ಅಶೋಕ್, ಅಭಿಜಿತ್, ಎನ್.ವಿ.ವೆಂಕಟೇಶ್, ಉಪಕಾರ್ಯದರ್ಶಿ ಹರೀಶ್, ಸದಸ್ಯರಾದ ಸುಧಾಕರ್, ಅಶೋಕ್, ಅರ್ಜುನ್, ಮಣಿಕಂಠ, ದಿನೇಶ್, ನಂದೀಶ್, ನವೀನ್, ಮಂಜುನಾಥ್, ಸಾಗರ್, ಸುಧಾಕರ್ ಇತರರು ಇದ್ದರು.