ಯೂರಿಯಾ ಪೂರೈಕೆಗೆ ಕ್ರಮ ವಹಿಸಿ

15-hvr-05
Published on

ಹಾವೇರಿ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದು, ರಸಗೊಬ್ಬರದ ಬೇಡಿಕೆ ಹೆಚ್ಚಾಗಿದೆ. ವಿಶೇಷವಾಗಿ ಯೂರಿಯಾ ಗೊಬ್ಬರದ ಕೊರತೆಯಾಗದಂತೆ ದಾಸ್ತಾನು ಮಾಡಿಕೊಳ್ಳಬೇಕು ಎಂದು ಕೃಷಿ ಜಂಟಿ ನಿರ್ದೇಶಕರಿಗೆ ಜಿಪಂ ಅಧ್ಯಕ್ಷ ಬಸನಗೌಡ ದೇಸಾಯಿ ಸೂಚನೆ ನೀಡಿದರು.

ಜಿಪಂ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಜಿಪಂ ಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಜಿಪಂನ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು ಮಾತನಾಡಿ, ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಬೇಡಿಕೆ ಹೆಚ್ಚಾಗಿದೆ. ಮಾರಾಟಗಾರರು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ಎಂಆರ್​ಪಿ ದರಕ್ಕಿಂತ 50ರಿಂದ 100 ರೂ. ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಖರೀದಿಗೆ ಬಿಲ್ ಕೊಡುವುದಿಲ್ಲ, ರೈತರು ಬಿಲ್ ಕೇಳಿದರೆ ಯೂರಿಯಾ ಗೊಬ್ಬರ ಇಲ್ಲ ಎಂದು ಹೇಳುತ್ತಾರೆ. ಈ ಕುರಿತಂತೆ ಕೃಷಿ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು ಎಂದರು.

ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ ಮಾತನಾಡಿ, ಈ ವರ್ಷ ಜಿಲ್ಲೆಯ ಬೇಡಿಕೆ ಹಾಗೂ ನಿಗದಿಯಾದ ಪ್ರಮಾಣದಂತೆ ಯೂರಿಯಾ ಪೂರೈಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ರೈತರು ಹೆಚ್ಚಾಗಿ ಯೂರಿಯಾ ಬಳಕೆ ಮಾಡುತ್ತಿದ್ದಾರೆ. ಪ್ರಸಕ್ತ ಸೆಪ್ಟೆಂಬರ್ ತಿಂಗಳವರೆಗೆ 48 ಸಾವಿರ ಮೆಟ್ರಿಕ್ ಟನ್ ಬೇಡಿಕೆಯಿದ್ದು, ಈಗಾಗಲೇ 49 ಮೆಟ್ರಿಕ್ ಟನ್ ಪೂರೈಕೆಯಾಗಿದೆ. ಸದ್ಯದ ಸ್ಥಿತಿಯಲ್ಲಿ ಯೂರಿಯಾದ ಅಭಾವವಿಲ್ಲ. ಶೀಘ್ರವೇ ಮಂಗಳೂರಿನಿಂದ ಮತ್ತಷ್ಟು ಯೂರಿಯಾ ಗೊಬ್ಬರ ಜಿಲ್ಲೆಗೆ ಬರಲಿದೆ. ಪೂರೈಕೆಯಾದ ಶೇ. 80ರಷ್ಟು ಪ್ರಮಾಣವನ್ನು ಸಹಕಾರಿ ಸಂಘಗಳ ಮೂಲಕ ವಿತರಣೆಗೆ ಕ್ರಮ ವಹಿಸಲಾಗುತ್ತಿದೆ. ಹೆಚ್ಚುವರಿ ದರದಲ್ಲಿ ಯೂರಿಯಾ ಮಾರಾಟ ಮಾಡುತ್ತಿರುವ ದೂರುಗಳು ಬಂದರೆ ತಕ್ಷಣ ಕೃಷಿ ಇಲಾಖೆ ಅಧಿಕಾರಿಗಳು ತೆರಳಿ ಕ್ರಮ ಕೈಗೊಳ್ಳುತ್ತಾರೆ ಎಂದರು.

ಪ್ರಸ್ತುತ ಕೃಷಿ ಇಲಾಖೆಯಿಂದ ರೈತರಿಗೆ ಆನ್​ಲೈನ್ ಮುಖಾಂತರ ತರಬೇತಿ ನೀಡಲಾಗುತ್ತಿದೆ. ಪ್ರಸಕ್ತ ಮುಂಗಾರಿನಿಂದ ಕ್ರಾಪ್ ಸರ್ವೆ ಕಾರ್ಯವನ್ನು ಸ್ವತಃ ರೈತರೇ ಆಪ್ ಬಳಸಿ ಜಮೀನಿನ ಬೆಳೆಯನ್ನು ಅಪ್​ಲೋಡ್ ಮಾಡುವ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದರು.

ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ ಮಾತನಾಡಿ, ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ. ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಲ್ಲಿ 75 ಹಾಸಿಗೆಗಳ ಸೆಂಟ್ರಲೈಸ್ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಉಪಾಧ್ಯಕ್ಷೆ ಗಿರಿಜವ್ವ ಬ್ಯಾಲದಹಳ್ಳಿ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಿವಾನಂದ ಕನ್ನಪ್ಪಳವರ, ಟಾಕನಗೌಡ ಪಾಟೀಲ, ಶಿವರಾಜ ಅಮರಾಪುರ, ಮುಖ್ಯಯೋಜನಾಧಿಕಾರಿ ನಿರ್ಮಲಾ ಎನ್.ಕೆ., ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

ಕಿಚನ್ ಗಾರ್ಡನ್ ನಿರ್ವಿುಸಿ: ಸಿಇಒ ರಮೇಶ ದೇಸಾಯಿ ಮಾತನಾಡಿ, ಜಿಲ್ಲೆಯಲ್ಲಿರುವ ಅಂಗನವಾಡಿ, ಶಾಲೆಗಳು, ವಿವಿಧ ಇಲಾಖೆಯ ವಸತಿ ನಿಲಯ, ವಸತಿ ಶಾಲೆಗಳಲ್ಲಿ ನೀರು ಮತ್ತು ಆವರಣ ಗೋಡೆಯಿರುವ ಕಡೆ ಕಿಚನ್ ಗಾರ್ಡನ್ ನಿರ್ವಿುಸಲು ತ್ವರಿತವಾಗಿ ಕಾಯೋನ್ಮುಖವಾಗಬೇಕು. ತೋಟಗಾರಿಕೆ ಇಲಾಖೆ ಉಪನಿರ್ದೇಶಕರೊಂದಿಗೆ ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯ ಸಾಧಿಸಿ ಅನುಷ್ಠಾನಗೊಳಿಸಬೇಕು ಎಂದರು.

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ವಿತರಿಸಲು ಈಗಾಗಲೇ ಜಿಲ್ಲೆಗೆ ಪಠ್ಯಪುಸ್ತಕಗಳು ಸರಬರಾಜಾಗಿದ್ದು, ಶಾಲೆಗಳಿಗೆ ಬದಲಾಗಿ ನೇರವಾಗಿ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲು ನಿರ್ದೇಶನ ಬಂದಿದೆ. ಐದೈದು ಮಕ್ಕಳನ್ನು ಕರೆದು ಪುಸ್ತಕಗಳನ್ನು ವಿತರಿಸಲಾಗುವುದು.| ಅಂದಾನೆಪ್ಪ ವಡಗೇರಿ, ಡಿಡಿಪಿಐ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net