ಮೋಜು ಮಸ್ತಿಗೆ ಪಾರ್ಕ್ ನಿರ್ಮಾಣ: ಹಿರಿಯ ನ್ಯಾಯವಾದಿ ಎಂ.ಶಿವಪ್ರಕಾಶ್ ಚಾಟಿ

Symposium against amusement park project Mandya
Published on

ಮಂಡ್ಯ: ಇತಿಹಾಸ ಅರಿಯದವರು ಹಾಗೂ ಇತಿಹಾಸ ಓದದವರು ಮೋಜು ಮಸ್ತಿ ಮಾಡಲು ಅಮ್ಯೂಸ್ಮೆಂಟ್ ಪಾರ್ಕ್ ಮಾಡಲು ಮುಂದಾಗುತ್ತಾರೆ. ಯಾರೂ ಕೇಳದಿದ್ದರೂ ಆರತಿ ಮಾಡಬೇಕೆಂದು ನಿಂತಿದ್ದಾರೆ ಎಂದು ಉಚ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿ ಎಂ.ಶಿವಪ್ರಕಾಶ್ ಚಾಟಿ ಬೀಸಿದರು.

ನಗರದ ಗಾಂಧಿಭವನದಲ್ಲಿ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ಕನ್ನಂಬಾಡಿ ಕಟ್ಟೆ ಉಳಿಸಿ’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಣೆಕಟ್ಟೆ ನಿರ್ಮಿಸಿ ಜನರಿಗೆ ಉಪಯೋಗವಾಗುವ ಯೋಜನೆ ತಂದರು. ಆದರೆ, ಈ ರಾಜ್ಯ ಸರ್ಕಾರ ಅಪಾಯಕಾರಿ ಯೋಜನೆಯನ್ನು ಜಾರಿಗೊಳಿಸಲು ಹೊರಟಿದೆ. ಇದೆಲ್ಲ ಹಣ ಮಾಡಲು. ಖಾಸಗಿ ಲಾಬಿಗೆ ಮಣಿದು ಅವರಿಗೆ ಅನುಕೂಲ ಮಾಡಿಕೊಡಲು ಬಾರ್ ಆ್ಯಂಡ್ ರೆಸ್ಟೋರೆಂಟ್‌ನಂತಹ ಮೋಜು ಮಸ್ತಿಗೆ ಅವಕಾಶ ಮಾಡಿಕೊಡುವಂತಹ ಯೋಜನೆಗೆ ಕೈ ಹಾಕಿದ್ದಾರೆ. ಇದು ಜನೋಪಯೋಗಿ ಯೋಜನೆಯೇ ಎಂದು ಪ್ರಶ್ನಿಸಿದರು.

ಪವಿತ್ರವಾದ, ದೈವೀ ಸ್ವರೂಪಿ ಅಣೆಕಟ್ಟೆಯ ಬಳಿ ಇಂತಹ ಜನ ವಿರೋಧಿ ಯೋಜನೆ ಜಾರಿಗೊಳಿಸಲು ಮುಂದಾಗಿರುವ ಸರ್ಕಾರದ ವಿರುದ್ಧ ಮಂಡ್ಯದ ರೈತರು ಹೋರಾಟಕ್ಕೆ ನಿಲ್ಲಬೇಕಾಗಿ ಬಂದಿರುವುದು ಅತ್ಯಂತ ನೋವಿನ ಸಂಗತಿ. ಮಹಾರಾಜರು ಮಾಡಿದಂತಹ ಒಂದು ಜನೋಪಯೋಗಿ ಯೋಜನೆಯನ್ನು ಮಾಡಲಾಗದಿದ್ದರೂ ಪರವಾಗಿಲ್ಲ. ಅಂತಹ ಯೋಗ್ಯತೆ ಇಲ್ಲದವರು ಆ ಸ್ಥಳದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಮಾಡಿ ಅಣೆಕಟ್ಟೆಯನ್ನು ಹಾಳು ಮಾಡಲು ಹೋಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯದ ಜನ ಮಾತ್ರವಲ್ಲ. ಅಣೆಕಟ್ಟೆಯಿಂದ ಉಪಕೃತರಾಗಿರುವ ಜನರು ಕನ್ನಂಬಾಡಿ ಅಣೆಕಟ್ಟೆಯ ಮೂಲಪುರುಷನಾದ ಬ್ರಿಟಿಷ್ ಅಧಿಕಾರಿ ಕ್ಯಾಪ್ಟನ್ ನಿಕಲಸ್ ಡಾಸ್ ಅವರನ್ನು ಮೊದಲು ಸ್ಮರಿಸಬೇಕು. ಈ ಅಣೆಕಟ್ಟೆಯ ರೂಪುರೇಷೆ ಸಿದ್ದಪಡಿಸಿದ ಕೇವಲ 31 ವರ್ಷದ ವ್ಯಕ್ತಿ ಆತ. ಒಮ್ಮೆ ಅವರು ಪರಿಶೀಲನೆಗೆ ತೆಪ್ಪದಲ್ಲಿ ತೆರಳುತ್ತಿದ್ದ ವೇಳೆ ಕೂಲಿಕಾರನೊಬ್ಬ ಕೊಚ್ಚಿ ಹೋಗುತ್ತಿದ್ದ ದೃಶ್ಯ ಕಂಡು ತಾನೇ ನೀರಿಗೆ ಜಿಗಿದು ಆತನನ್ನು ರಕ್ಷಣೆ ಮಾಡಲು ಮುಂದಾದರು. ಆದರೆ ಮೂರು ದಿನಗಳ ನಂತರ ಆತನ ಶವ ಪತ್ತೆಯಾಗಿತ್ತು. ಇದು ಅಣೆಕಟ್ಟೆ ನಿರ್ಮಾಣಕ್ಕೆ ಶ್ರಮಿಸಿದಾತನ ತ್ಯಾಗ ಬಲಿದಾನವಾಗಿದೆ. ಇಂತಹ ಅದೆಷ್ಟೋ ಜನರ ತ್ಯಾಗ ಬಲಿದಾನದಿಂದ ನಿರ್ಮಾಣವಾಗಿರುವ ಅಣೆಕಟ್ಟೆಗೆ ಅಪಾಯ ತಂದೊಡ್ಡಬಲ್ಲ, ಮೋಜು ಮಸ್ತಿಯ ಈ ಪಾರ್ಕ್ ಯೋಜನೆ ತೆರೆಯುವ ದುಸ್ಸಾಹಸಕ್ಕೆ ಮುಂದಾಗಬಾರದು. ಇದನ್ನು ಒಕ್ಕ್ಕೊರಲಿನಿಂದ ತಡೆಯುವ ಕರ್ತವ್ಯ ಎಲ್ಲರ ಮೇಲಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪರಿಸರಕ್ಕಾಗಿ ನಾವು ಸಂಘಟನೆಯ ರಾಜ್ಯಾಧ್ಯಕ್ಷ ಎ.ಟಿ.ರಾಮಸ್ವಾಮಿ ಮಾತನಾಡಿ, ಈ ಯೋಜನೆಯಿಂದ ಜನರ ಹಿತವಾಗಲಿ, ಪರಿಸರದ ಹಿತವಾಗಲಿ ಯಾವುದೂ ಇಲ್ಲ. ಎಲ್ಲವೂ ಖಾಸಗಿ ಕಂಪನಿಯ ಹಿತಕ್ಕಾಗಿ ಮಾಡುತ್ತಿರುವುದೇ ಆಗಿದೆ. ಅಣೆಕಟ್ಟೆಗೆ ನೂರು ವರ್ಷ ತುಂಬುತ್ತಿದೆ. ಇಲ್ಲಿ ಬೃಹತ್ ಪ್ರತಿಮೆ ನಿರ್ಮಿಸಲು ದೊಡ್ಡ ಗುಂಡಿ ತೋಡಬೇಕಾಗುತ್ತದೆ. ಅದು ಅಣೆಕಟ್ಟೆಗೆ ಅಪಾಯಕಾರಿಯಲ್ಲವೇ?. ಈ ಪಾರ್ಕ್ ಹಾಗೂ ಕಾವೇರಿ ಆರತಿ ಈ ಎರಡು ಯೋಜನೆಗಳು ಕಾವೇರಿಯನ್ನು ಕಲುಷಿತಗೊಳಿಸುವುದಲ್ಲದೆ, ಇಲ್ಲಿನ ಜನರ ಸಹಜ ಬದುಕನ್ನು ಕಲುಷಿತಗೊಳಿಸುತ್ತದೆ. ಅಣೆಕಟ್ಟೆಗೆ ಅಪಾಯವಾದರೆ ಅದರಿಂದ ಆಗುವ ದುರಂತದ ಅರಿವು ಆಳುವವರಿಗೆ ಇದೆಯೇ ಎಂದು ಕಿಡಿಕಾರಿದರು.

ನದಿ ಮಾಲಿನ್ಯ, ಅರಣ್ಯ ನಾಶ, ಪ್ಲಾಸ್ಟಿಕ್ ಬಿಕ್ಕಟ್ಟು, ಅಂತರ್ಜಲ ಕುಸಿತ ಇವುಗಳಿಗೆ ಪರಿಹಾರ ಕಂಡು ಹಿಡಿಯಬೇಕಾದ ಸರ್ಕಾರ ಅದನ್ನೆಲ್ಲ ಬಿಟ್ಟು ಅಮ್ಮೂಸ್ಮೆಂಟ್ ಪಾರ್ಕ್ ಅನ್ನು 2,662 ಕೋಟಿ ರೂ. ವೆಚ್ಚದಲ್ಲಿ ಕಾರ್ಯಕರ್ತಗೊಳಿಸಲು ಮುಂದಾಗಿರುವುದು ಯಾರ ಹಿತಕ್ಕಾಗಿ?. ಜನರಿಗೆ ಅನ್ನ ಸಿಗಲೆಂದು ಅರಮನೆಯ ಚಿನ್ನಾಭರಣ ನೀಡಿದ ಮಹಾರಾಣಿಯವರೆಲ್ಲಿ, ಇಂದು ಅದೇ ಅಣೆಕಟ್ಟೆಗೆ ಅಪಾಯ ತರುತ್ತಿರುವ ಇಂದಿನ ಆಡಳಿತಗಾರರೆಲ್ಲಿ ಎಂದು ವಿಷಾಧಿಸಿದ ಅವರು, ಪಾರ್ಕ್ ನಿರ್ಮಾಣದಿಂದ ಸ್ಥಳೀಯವಾಗಿ ಉದ್ಯೋಗ ಸಿಗುತ್ತದೆ ಎಂಬುದು ಕೇವಲ ಭ್ರಮೆ. ಕೆಲವರು ಅಧಿಕಾರದ ಹಮ್ಮಿನಿಂದ ಮಾಡೇ ಮಾಡುತ್ತೇವೆಂದು ಗರ್ವದಿಂದ ಮಾತನಾಡುತ್ತಿದ್ದಾರೆ. ಇದನ್ನು ಈ ಮಣ್ಣಿನ ರೈತರು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಪರಿಸರ ತಜ್ಞ ಡಾ.ಎ.ಎನ್.ಯಲ್ಲಪ್ಪ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎಸ್.ರಂಗರಾಜು, ನಿವೃತ್ತ ಹಿರಿಯ ಭೂ ವಿಜ್ಞಾನಿ ಪ್ರೊ.ಎಚ್.ಬಿ.ಬಸವರಾಜಪ್ಪ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಇತರರಿದ್ದರು.

Symposium against amusement park project Mandya

ಆರು ಗ್ರಾಪಂನಿಂದ ವಿರೋಧ

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಕೆಆರ್‌ಎಸ್ ವ್ಯಾಪ್ತಿಯ ಆರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಅಮ್ಮೂಸ್ಮೆಂಟ್ ಪಾರ್ಕ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಂತರ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಮತ್ತು ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರ ಗಮನಕ್ಕೂ ತಂದೆವು. ಇದಾದ ಬಳಿಕ ನಾವು ಕೆಆರ್‌ಎಸ್‌ನ ಸ್ಥಳ ಪರಿಶೀಲನೆ ನಡೆಸಿ ವಾಸ್ತವ ತಿಳಿದು, ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣದಿಂದ ಬಹುದೊಡ್ಡ ಅಪಾಯ ಸಂಭವಿಸಲಿದೆ ಎಂಬುದನ್ನು ಅರಿತು ಹೋರಾಟಕ್ಕೆ ಮುಂದಾಗಿದ್ದೇವೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಯಿತು. ಅವರು ಸಿಎಂ, ಡಿಸಿಎಂ ಅವರೊಂದಿಗೆ ಮಾತನಾಡಿ ನಿಮಗೆ ಉತ್ತರ ಕೊಡುವುದಾಗಿ ಹೇಳಿ ಹೋದರು. ಆದರೆ ಇದುವರೆಗೂ ನಮಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ಈ ವಿಚಾರದ ಬಗ್ಗೆ ಬಾಯಿ ಬಿಡುತ್ತಿಲ್ಲ. ಏಕೆ ಎಂಬುದು ನಮಗೂ ಅರ್ಥವಾಗುತ್ತಿಲ್ಲ. ಕಳೆದ ಮೂರು ದಶಕದಿಂದ ಹೋರಾಟದಲ್ಲಿ ತೊಡಗಿಸಿಕೊಂಡಿರುವ ನಮಗೆ ನಿಂದನೆ, ಅಪಮಾನ ಹೊಸದಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net