ಜಿಲ್ಲೆಯಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನ: ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಆಯೋಜನೆ

Mandya Ceo K.R.Nandini
Published on

ಮಂಡ್ಯ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸ್ವಚ್ಛತಾ ಹೀ ಸೇವಾ ಅಥವಾ ಸ್ವಚ್ಛತೆಯೇ ಸೇವೆ ಎಂಬ ವಿಶೇಷ ಜನಾಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ಸ್ವಚ್ಛೋತ್ಸವ ಎಂಬ ಘೋಷವಾಕ್ಯದೊಂದಿಗೆ ಅ.2ರವರೆಗೆ ಸ್ವಚ್ಛತಾ ಹೀ ಸೇವಾ-2025 ಅಭಿಯಾನವನ್ನು ಆಚರಿಸಲಾಗುತ್ತಿದೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಹೇಳಿದ್ದಾರೆ.

ಪ್ರತಿವರ್ಷ ಅ.2ರಂದು ಸ್ವಚ್ಛ ಭಾರತ ದಿನವನ್ನಾಗಿ ಆಚರಿಸುತ್ತಿದ್ದು, ಸ್ವಚ್ಛತೆಗಾಗಿ ಸ್ವಯಂ ಪ್ರೇರಣೆ ಮತ್ತು ಸಾಮೂಹಿಕ ಶ್ರಮದಾನ ಚಟುವಟಿಕೆಗಳನ್ನು ಹಮ್ಮಿಕೊಂಡು ಸಮುದಾಯದಲ್ಲಿ ಸ್ವಚ್ಛತೆಯ ಆಶಯಗಳನ್ನು ಬಲಪಡಿಸಲು 2017ರಿಂದ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಆಂದೋಲನವನ್ನು ಆಚರಿಸಲಾಗುತ್ತಿದೆ. ಈ ಯೋಜನೆ, ಸಾಧನೆಯ ಮೈಲಿಗಳನ್ನು ಗೌರವಿಸಲು ಸ್ವಚ್ಛತಾ ಹೀ ಸೇವಾ ಅಭಿಯಾನ ಆಚರಿಸಲಾಗುತ್ತಿದೆ. ಈ ಅವಧಿಯಲ್ಲಿ ಸ್ವಚ್ಛತೆಗಾಗಿ ಬೃಹತ್ ಪ್ರಮಾಣದಲ್ಲಿ ಸಾರ್ವಜನಿಕರ ಸಹಭಾಗಿತ್ವ ಮತ್ತು ಸಮುದಾಯದ ಭಾಗವಹಿಸುವಿಕೆ, ಅನೈರ್ಮಲ್ಯ ಮತ್ತು ಸಮಸ್ಯಾತ್ಮಕ ಕಸದ ತಾಣಗಳನ್ನು ತೆರವುಗೊಳಿಸಲು ಗಮನಹರಿಸುವ ಬೃಹತ್ ಸ್ವಚ್ಛತಾ ಅಭಿಯಾನ, ನೈರ್ಮಲ್ಯ ಕಾರ್ಮಿಕರ ಕೊಡುಗೆ ಗುರುತಿಸಿವುದು ಹಾಗೂ ಸಫಾಯಿ ಮಿತ್ರ ಸುರಕ್ಷಾ ಶಿಬಿರಗಳ ಆಯೋಜಿಸುವಿಕೆ ಮತ್ತು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವುದು, ಕಳೆದ ದಶಕದ ಸಾಧನೆಗಳ ಆಚರಣೆ ಮತ್ತು ಸಂಪೂರ್ಣ ಸ್ವಚ್ಛತೆಗೆ ನಮ್ಮ ಬದ್ದತೆಯನ್ನು ಪುನರುಚ್ಛರಿಸಲಾಗುವುದು ಎಂದಿದ್ದಾರೆ.

ಸ್ವಚ್ಛತಾ ಹೀ ಸೇವಾ ಅಭಿಯಾನವನ್ನು ಜಿಲ್ಲೆ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನೈರ್ಮಲ್ಯ ಸ್ಥಳಗಳ ಗುರುತಿಸುವಿಕೆ, ಸಫಾಯಿ ಮಿತ್ರ ಸುರಕ್ಷಾ ಶಿಬಿರಗಳ ಆಯೋಜಿಸುವಿಕೆ, ಸ್ವಚ್ಛ ಹಸಿರು ಉತ್ಸವಗಳ ಆಚರಣೆ, ವಿವಿಧ ಪ್ರಚಾರ ಚಟುವಟಿಕೆ, ಒಂದು ದಿನ ಪ್ರತಿ ಗಂಟೆ ಸಾಮೂಹಿಕ ಸ್ವಚ್ಛತಾ ಶ್ರಮದಾನ ಹಾಗೂ ಇನ್ನಿತರ ಕ್ರಿಯಾಶೀಲ ಕಾರ್ಯಕ್ರಮ ರೂಪಿಸಿ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಎಲ್ಲ ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರ ಸಹಭಾಗಿತ್ವ ಬಹುಮುಖ್ಯವಾಗಿದೆ. ಸ್ವಚ್ಛೋತ್ಸವ ಅಭಿಯಾನದಲ್ಲಿ ಸರ್ವರೂ ಒಗ್ಗಟ್ಟಿನಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಜಿಲ್ಲೆಯನ್ನು ಕಸ ಮುಕ್ತ ಪರಿಸರ ಸ್ನೇಹಿಯನ್ನಾಗಿ ಪರಿವರ್ತಿಸಲು ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net